ಬೆಳಗಾವಿ: ಸ್ವಾತಂತ್ರ್ಯ ಪೂರ್ವದಲ್ಲಿಯೇ ಇಲ್ಲಿನ ಉಪ ನೋಂದಣಾಧಿಕಾರಿ ಕಚೇರಿ ಯು ನೀಡಿದ್ದ ಕನ್ನಡ ಭಾಷೆಯಲ್ಲಿರುವ ಖರೀದಿ ಪತ್ರ, ಬಕ್ಷೀಸ್ ಪತ್ರ, ಮೃತ್ಯು ಪತ್ರಗಳು (ವಿಲ್) ಲಭ್ಯವಾಗಿವೆ. ಬ್ರಿಟಿಷರ ಕಾಲದಲ್ಲೇ ಬೆಳಗಾವಿಯಲ್ಲಿ ಕನ್ನಡ ಆಡಳಿತ ಭಾಷೆಯಾಗಿತ್ತು ಎಂಬುದನ್ನು ಇದು ಪುಷ್ಟೀಕರಿಸುತ್ತದೆ.
ಕಣಬರ್ಗಿಯ ಜಮೀನೊಂದರ ಮಾಲೀಕರಾಗಿದ್ದ ಸಿದ್ದಲಿಂಗ, ಶಿವಗೌಡ ಮತ್ತು ಓಂಗೊಂಡಾ ಅಲಿಯಾಸ್ ಅಪ್ಪಯ್ಯ ಬಸಪ್ಪ ಪಾಟೀಲ ಅವರು ಭೀಮಗೌಡ ಸಿದ್ಧಗೌಡ ಪಾಟೀಲ ಅವರಿಗೆ ₨ 1,200 ಬೆಲೆಯ ಖರೀದಿ ಪತ್ರವನ್ನು 1928ರ ಏಪ್ರಿಲ್ 16ರಂದು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮಾಡಿಸಿಕೊಟ್ಟಿದ್ದರು.
ಇದೇ ರೀತಿ ಬಡಕಲ್ ಬೀದಿಯ ಹಂಚಿನ ಮನೆ ಮತ್ತು ಹಿತ್ತಲ ಆಸ್ತಿಗೆ ಸಂಬಂಧಿಸಿದಂತೆ ಲಿಂಗಪ್ಪ ಬಸಪ್ಪ ಜಹಾಜ್ ಅವರು ಪತ್ನಿ ಭಾಗ್ಯವತಿ ಅಲಿಯಾಸ್ ಈರವ್ವ ಅವರಿಗೆ 1940ರ ಮೇ 31ರಂದು ಬಕ್ಷಿಸ್ ಪತ್ರವನ್ನು ನೋಂದಣಿ ಮಾಡಿಸಿಕೊಟ್ಟಿದ್ದರು. ನಂತರ 1946ರ ಅಕ್ಟೋಬರ್ 21ರಂದು ಈ ಆಸ್ತಿಗೆ ಸಂಬಂಧಿಸಿದಂತೆ ಭಾಗ್ಯವತಿ ಅವರು ತಮ್ಮ ಪುತ್ರ ಶಿವಪ್ಪ ಹಾಗೂ ಮಲ ಮಗನಾದ ಬಸಪ್ಪ ಅವರಿಗೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮೃತ್ಯು ಪತ್ರವನ್ನು ಮಾಡಿಸಿಕೊಟ್ಟಿದ್ದರು.
ಈ ಎಲ್ಲ ದಾಖಲೆಗಳಲ್ಲಿ ಮಾಹಿತಿ ಯನ್ನು ಅಚ್ಚ ಕನ್ನಡದಲ್ಲಿಯೇ ಠಾಕು ಲೇಖನಿಯಲ್ಲಿ ಕೈಯಿಂದ ಬರೆಯಲಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲೇ ಉಪ ನೋಂದ ಣಾಧಿಕಾರಿ ಕಚೇರಿಯ ಎಲ್ಲ ಮುದ್ರೆಗಳು ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಇರುವುದು ಕಂಡುಬಂದಿದೆ. ಬ್ರಿಟಿಷರ ಕಾಲದಲ್ಲೇ ಕನ್ನಡ ಬೆಳಗಾವಿಯ ನೆಲದ ಭಾಷೆಯಾಗಿತ್ತು ಎಂಬುದನ್ನು ಇದು ಸಾಬೀತು ಪಡಿಸುತ್ತದೆ.
ಮಹಾನಗರ ಪಾಲಿಕೆಯ ಮಾಜಿ ಸದಸ್ಯ, ಕಣಬರ್ಗಿಯ ಶಿವನಗೌಡ ಭೀಮ ಗೌಡ ಪಾಟೀಲ ಅವರು 1928ರ ಖರೀದಿ ಪತ್ರವನ್ನು ಹಾಗೂ ವಿಶ್ವನಾಥ ಶಿವಪ್ಪ ಜಹಾಜ್ ಅವರು ಬಕ್ಷೀಸ್ ಮತ್ತು ಮೃತ್ಯು ಪತ್ರಗಳನ್ನು ರಾಜ್ಯ ವಕೀಲರ ಸಾಹಿತ್ಯ ಪರಿ ಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ತೋಟಿಗೇರ ಅವರಿಗೆ ನೀಡಿದ್ದಾರೆ.
‘ಬ್ರಿಟಿಷರ ಆಡಳಿತ ಕಾಲದಲ್ಲಿ ಬೆಳಗಾವಿಯ ಕಚೇರಿಗಳಲ್ಲಿ ಕನ್ನಡ ಭಾಷೆ ಯಲ್ಲೇ ಪ್ರಮಾಣ ಪತ್ರಗಳನ್ನು ನೀಡಲಾ ಗುತ್ತಿದ್ದವು. ಕನ್ನಡದಲ್ಲಿರುವ ಹಲವು ದಾಖಲೆಗಳು ಪತ್ತೆಯಾಗುತ್ತಿರುವುದು ರಾಜ್ಯದ ಪರ ಬಲವಾಗಿ ವಾದ ಮಂಡಿ ಸಲು ಅನುಕೂಲವಾಗಲಿದೆ’ ಎಂದು ತೋಟಿಗೇರ ತಿಳಿಸಿದರು.
* ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ಗೆ ರಾಜ್ಯದ ಪರವಾಗಿ ಈ ದಾಖಲೆಗಳನ್ನು ಸಲ್ಲಿಸಲಾಗುವುದು
ರವೀಂದ್ರ ತೋಟಿಗೇರ
ಅಧ್ಯಕ್ಷ, ಜಿಲ್ಲಾ ವಕೀಲರ ಸಾಹಿತ್ಯ ಪರಿಷತ್
ಮುಖ್ಯಾಂಶಗಳು
* ಬ್ರಿಟಿಷ್‌ರ ಕಾಲದಲ್ಲೇ ಕನ್ನಡ ಆಡಳಿತ ಭಾಷೆ
* ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಕನ್ನಡ
* ಬಕ್ಷೀಸ್, ಮೃತ್ಯು ಪತ್ರವೂ ಲಭ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.