ADVERTISEMENT

ಕೃಷ್ಣಾ ತುಂಬಿ ಹರಿದರೂ ರೈತರಿಗಿಲ್ಲ ವಿದ್ಯುತ್‌

ದಿನಕ್ಕೆ 7 ಗಂಟೆ ಮಾತ್ರ ತ್ರಿಫೆಸ್‌ ವಿದ್ಯುತ್

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 9:48 IST
Last Updated 15 ಜೂನ್ 2018, 9:48 IST

ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮತ್ತು ತಾಲ್ಲೂಕಿನ ಜಲಾನಯನ ಪ್ರದೇಶಗಳಲ್ಲಿ ಸುರಿದ ಮಳೆಯಿಂದಾಗಿ ಬತ್ತಿ ಹೋಗಿದ್ದ ಕೃಷ್ಣೆಯ ಒಡಲು ತುಂಬುತ್ತಿದ್ದು, ನದಿಗೆ ನೀರು ಹರಿಯುತ್ತಿರುವುದು ಜನರಲ್ಲಿ ಮಂದಹಾಸ ಮೂಡಿದೆ.

ಇನ್ನೊಂದೆಡೆ ನದಿದಂಡೆಯಲ್ಲಿ ನೀರಾವರಿ ಪಂಪ್‌ಸೆಟ್‌ಗಳಿಗೆ ದಿನದ ಕೇವಲ 7 ಗಂಟೆ ಮಾತ್ರ ತ್ರಿಫೆಸ್‌ ವಿದ್ಯುತ್ ಸರಬರಾಜು ಮಾಡುತ್ತಿರುವುದರಿಂದ ರೈತಾಪಿ ಜನರಲ್ಲಿ ನಿರಾಸೆಯೂ ವ್ಯಕ್ತವಾಗಿದೆ. ಇದು ರೈತರ ಅಸಮಾಧಾನಕ್ಕೆ ಗುರಿಯಾಗಿದೆ.

ಮುಂಗಾರು ಪೂರ್ವ ಮಳೆಗಳು ನಿರೀಕ್ಷಿತ ಪ್ರಮಾಣದಲ್ಲಿ ಆಗದೇ ಇರುವುದರಿಂದ ಕಳೆದ ತಿಂಗಳು ಕೃಷ್ಣಾ ನದಿ ಬಹುತೇಕ ಬತ್ತಿ ಹೋಗಿತ್ತು.

ADVERTISEMENT

ಅಷ್ಟರಲ್ಲಿ ಮಹಾರಾಷ್ಟ್ರದ ಕೊಂಕಣ ಪ್ರದೇಶ ಮತ್ತು ತಾಲ್ಲೂಕಿನ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಸ್ವಲ್ಪಮಟ್ಟಿಗೆ ಮಳೆಯಾಗಿ, ಕೃಷ್ಣಾ ಮತ್ತು ಉಪನದಿಗಳಾದ ದೂದ್‌ಗಂಗಾ, ವೇದಗಂಗಾ, ಪಂಚಗಂಗಾ ನದಿಗಳಿಗೆ ನೀರು ಹರಿದಿದೆ.

ಒಣಗುತ್ತಿರುವ ಬೆಳೆಗಳು ಪಾರಾದಾವು ಎನ್ನುವಷ್ಟರಲ್ಲಿ, ಹೆಸ್ಕಾಂ ಸಾಕಷ್ಟು ಪ್ರಮಾಣದಲ್ಲಿ ವಿದ್ಯುತ್ ನೀಡದಿರುವುದು  ರೈತರ ಆಕ್ರೋಶಕ್ಕೆ ಕಾರಣವಾಗಿದೆ.

‘ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮ ವ್ಯಾಪ್ತಿಯಲ್ಲಿ ನದಿದಂಡೆಯಲ್ಲಿ ಸಾವಿರಾರು ಎಕರೆ ಕಬ್ಬು, ತರಕಾರಿ, ಆಹಾರಧಾನ್ಯಗಳನ್ನು ಬೆಳೆಯಲಾಗಿದ್ದು, ಬೇಸಿಗೆಯಿಂದ ನದಿಯಲ್ಲಿ ನೀರಿಲ್ಲದೇ ಒಣಗಿದ ಸ್ಥಿತಿ ತಲುಪಿದ್ದವು. ಈಗ ನದಿಯಲ್ಲಿ ಸಾಕಷ್ಟು ನೀರು ಹರಿಯುತ್ತಿದ್ದರೂ, ಹೆಸ್ಕಾಂ ವಿದ್ಯುತ್ ಸರಬರಾಜು ಮಾಡಲು ಮುಂದಾಗುತ್ತಿಲ್ಲ. ಹೆಸ್ಕಾಂ ತನ್ನ ನೀತಿಯನ್ನು ಬದಲಿಸಿ ವ್ಯರ್ಥವಾಗಿ ಹರಿದು ಹೋಗುತ್ತಿರುವ ನೀರನ್ನು ಬೆಳೆಗಳಿಗೆ ಉಣಿಸಲು ಅನುಕೂಲವಾಗುವಂತೆ ದಿನದ ಕನಿಷ್ಠ 15 ಗಂಟೆಯಾದರೂ ತ್ರಿಫೇಸ್‌ ವಿದ್ಯುತ್ ನೀಡಬೇಕು’ ಎಂದು ಅಂಕಲಿಯ ಕೃಷಿಕ ಸುರೇಶ ಪಾಟೀಲ ಆಗ್ರಹಿಸಿದರು.

‘ನದಿ ದಂಡೆಯ ನೀರಾವರಿ ಪಂಪ್‌ಸೆಟ್‌ಗಳಿಗೆ ದಿನದ 7 ಗಂಟೆ ಮಾತ್ರ ತ್ರಿಫೇಸ್‌ ವಿದ್ಯುತ್ ನೀಡಬೇಕು ಎಂಬುದು ಸರ್ಕಾರದ ಆದೇಶ. ಕಳೆದ ಒಂದು ವಾರದಿಂದ ಹೆಸ್ಕಾಂ ಹುಬ್ಬಳ್ಳಿ ಕಚೇರಿ ಸೂಚನೆ ಮೇರೆಗೆ ಹೆಚ್ಚುವರಿಯಾದ 500 ರಿಂದ 600ಮೆ.ವ್ಯಾ ವಿದ್ಯುತ್ತನ್ನು ಕೆಲವು ಫಿಡರ್‌ಗಳಿಗೆ ಸರಬರಾಜು ಮಾಡುತ್ತಿದೆ’ ಎಂದರು.

‘ಪ್ರತಿ ಶನಿವಾರ ಮತ್ತು ಭಾನುವಾರ ನಿರಂತರವಾಗಿ ನದಿದಂಡೆಯ ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಕಡಿತವನ್ನು ಸ್ಥಗಿತಗೊಳಿಸುವಂತೆ ಸ್ಥಳೀಯ ತಹಶೀಲ್ದಾರರು ಸೂಚನೆ ನೀಡಿದ್ದು, ಇದೇ ಶನಿವಾರದಿಂದ ಅದು ಜಾರಿಯಾಗಲಿದೆ’ ಎಂದು ಹೆಸ್ಕಾಂನ ಚಿಕ್ಕೋಡಿ ವಿಭಾಗದ ಎಇ (ಪ್ರಭಾರಿ) ಆರ್.ಟಿ.ತವನಕ್ಕಿ ತಿಳಿಸಿದರು.

‘ಮಹಾರಾಷ್ಟ್ರದಿಂದ ನೀರು ಬಿಡುಗಡೆ ಮಾಹಿತಿ ಇಲ್ಲ’

‘ನೆರೆಯ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡುವ ಕುರಿತು ಅಧಿಕೃತ ಮಾಹಿತಿ ಇಲ್ಲ. ನಾವು ಮಹಾರಾಷ್ಟ್ರದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಮಹಾರಾಷ್ಟ್ರ ಮತ್ತು ತಾಲ್ಲೂಕಿನಲ್ಲಿ ಸುರಿದ ಮಳೆಯಿಂದಾಗಿ ನದಿಗಳಲ್ಲಿ ನೀರು ಹರಿಯುತ್ತಿದ್ದು, ಅಪಾಯದ ಹಂತ ತಲುಪಿಲ್ಲ. ಸದ್ಯಕ್ಕೆ ಪ್ರವಾಹದ ಲಕ್ಷಣಗಳಿಲ್ಲ. ಪರಿಸ್ಥಿತಿಯ ಮೇಲೆ ಸಂಪೂರ್ಣ ನಿಗಾ ವಹಿಸಲಾಗಿದ್ದು, ಮಹಾರಾಷ್ಟ್ರದಿಂದ ರಾಜ್ಯಕ್ಕೆ ನೀರು ಬಿಡುಗಡೆ ಮಾಡುವ ಮಾಹಿತಿ ದೊರೆತ ತಕ್ಷಣವೇ ಚಿಕ್ಕೋಡಿ ಉಪವಿಭಾಗದಲ್ಲಿ ಪ್ರವಾಹ ನಿರ್ವಹಣೆ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗುವುದು’ ಎಂದು ಉಪವಿಭಾಗಾಧಿಕಾರಿ ಡಾ.ಕೆ.ರಾಜು ಮೊಗವೀರ ‘ಪ್ರಜಾವಾಣಿ’ಗೆ ತಿಳಿಸಿದರು

ಸುಧಾಕರ ತಳವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.