ಆಧುನಿಕ ಯುಗದ ಆರಂಭ ಕಾಲದಲ್ಲಿ ತಮ್ಮ ಸೀಮಿತ ಜಹಗೀರುಗಳಲ್ಲಿ ಕಲೆ, ಸಂಸ್ಕೃತಿ, ವಾಸ್ತು, ಶಿಕ್ಷಣ, ಆಡಳಿತ, ನ್ಯಾಯದಾನ ಕಾರ್ಯಗಳಿಗೆ ಸಮರ್ಪಿಸಿಕೊಂಡಿದ್ದ ಬೆಳಗಾವಿ ಜಿಲ್ಲೆಯ ಗಡಿಭಾಗದ ಅಥಣಿ, ಚಿಕ್ಕೋಡಿ ಮತ್ತು ರಾಯಬಾಗ ತಾಲ್ಲೂಕಿನ ವಾಡೆಗಳು ಅವಸಾನದ ಅಂಚಿನೆಡೆಗೆ ಸಾಗಿವೆ.
ಅಥಣಿ ತಾಲ್ಲೂಕಿನ ಮಂಗಸೂಳಿ (ಪವಾರ) ವಾಡೆ, ಕೊಕಟನೂರು ದೇಸಾಯಿ ವಾಡೆ, ಚಿಕ್ಕೋಡಿ ತಾಲ್ಲೂಕಿನ ನಿಂಬಾಳ್ಕರ, ನನದಿಕರ ವಾಡೆ, ಅಂಕಲಿಯ (ಸಿಥೊಳೆ) ವಾಡೆ, ರಾಯಬಾಗ ತಾಲ್ಲೂಕಿನ ಚಿಂಚಲಿ ವಾಡೆಗಳು ಇಂದು ರಕ್ಷಣೆಗಾಗಿ ಮೊರೆಯಿಡುತ್ತಿವೆ.
ಆಧುನೀಕರಣ, ಜಾಗತೀಕರಣ ಹಾಗೂ ಉದಾರೀಕರಣದ ಕಬಂಧ ಬಾಹುಗಳಿಗೆ ಸಿಕ್ಕು ದೇಸಗತಿ ಮನೆತನದವರು ವಾಸಿಸಲಿಕ್ಕೆ ಕಟ್ಟಿಕೊಂಡಿದ್ದ ಇತಿಹಾಸ ಸಾರುವ ಈ ಬೃಹತ್ ಬಂಗ್ಲೆಗಳು ಮತ್ತು ವೈವಿಧ್ಯಮಯ ಕಟ್ಟಡಗಳು ಕಣ್ಮರೆಯಾಗಿ ಹೋಗುತ್ತಿರುವುದು ಪ್ರಸ್ತುತ ಕಾಲದ ದುರಂತ ಎನ್ನದೆ ವಿಧಿಯಿಲ್ಲ.
ವಿಜಯನಗರ ಸಾಮ್ರಾಜ್ಯ, ವಿಜಾಪುರ ಆದಿಲ್‌ಶಾಹಿ, ಮರಾಠಾ ದೊರೆಗಳು ಮತ್ತು ಬ್ರಿಟಿಷ್‌ರಿಂದ ಹತ್ತೊ ಅಥವಾ ಇಪ್ಪತ್ತೊ ಹಳ್ಳಿಗಳನ್ನು ಉಂಬಳಿಯಾಗಿ ಪಡೆದುಕೊಂಡು ಗತ್ತಿನಿಂದ ಆಳ್ವಿಕೆ ಮಾಡಿದ ಅಧಿಕಾರ ವರ್ಗದವರು ವಾಸಿಸುವ ದೊಡ್ಡದಾದ ಮನೆಗಳೇ ಈ ವಾಡೆಗಳಾಗಿದ್ದು, ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಇಂತಹ 568 ವಾಡೆಗಳಿದ್ದವು ಎಂಬುದೊಂದು ಅಂದಾಜು.
ವಾಡೆಗಳ ಕತೆ-ವ್ಯಥೆ
ಅಥಣಿ ತಾಲ್ಲೂಕು ಕೇಂದ್ರದಿಂದ 25 ಕಿ.ಮೀ. ಅಂತರದಲ್ಲಿರುವ ಮಂಗಸೂಳಿ ಗ್ರಾಮ ಕರ್ನಾಟಕ ರಾಜ್ಯದ ಕೊನೆಯ ಗ್ರಾಮ. ಕನ್ನಡ ಮತ್ತು ಮರಾಠಿ ಇಲ್ಲಿಯ ಜನರ ವ್ಯವಹಾರಿಕ ಭಾಷೆ. ಈ ಊರಿನ `ಪವಾರ್‌ವಾಡೆ' ಈಗ ಬಿದ್ದು ನೆಲಸಮವಾಗಿದೆ. ಆವರಣದಲ್ಲಿ ವಾಡೆಯ ಕಲ್ಲುಗಳು, ಮಣ್ಣಿನ ದಿಬ್ಬ ಹಾಗೂ ವಾಡೆಯ ರಕ್ಷಣೆಗೆ ಕಟ್ಟಿದ ಗೋಡೆಯನ್ನು ಕಾಣಬಹುದು. ಆವರಣದಲ್ಲಿ ಗಿಡಗಂಟಿಗಳು ದಟ್ಟವಾಗಿ ಬೆಳೆದ ಪರಿಣಾಮ ಒಳಗೆ ಹೋಗಲು ಅಸಾಧ್ಯ. ಈ ವಾಡೆಯ ಕುಡಿಗಳಲ್ಲೊಬ್ಬರಾಗಿದ್ದ ಡಿ.ಬಿ. ಪವಾರ್ ಕರ್ನಾಟಕ ಸರ್ಕಾರದಲ್ಲಿ ಹಿಂದೆ ಮಂತ್ರಿಗಳಾಗಿದ್ದರು.
ಅಥಣಿಯಿಂದ 30 ಕಿ.ಮೀ ದೂರದಲ್ಲಿರುವ ಕೃಷ್ಣಾ ನದಿತಟದ ಊರು ಕೊಕಟನೂರು. ಇಲ್ಲಿಯ `ಕೊಕಟನೂರು ವಾಡೆ'ಯು ಉತ್ತರಾಭಿಮುಖವಾಗಿದೆ. ವಾಡೆಯ ಕುರುಹಾಗಿ ಮುಖ್ಯ ಪ್ರವೇಶ ದ್ವಾರ, ಒಳಗಡೆ ಕಚೇರಿಯ ಒಂದು ಗೋಡೆ, ವಾಡೆಯ ಲಕ್ಷ್ಮಿ ಸ್ಥಳ ಕಾಣಬಹುದು. ಕರಿಕಲ್ಲು ಹಾಗೂ ಗಚ್ಚಿನಿಂದ ನಿರ್ಮಿಸಲಾದ ಗೋಡೆಗಳಾಗಿದ್ದರಿಂದ ಇಂದಿಗೂ ಇದು ನೋಡಲು ಸಿಗುತ್ತದೆ. ವಾಡೆಯ ಒಳಗಿನ ಎಲ್ಲ ಭಾಗವು ಬಿದ್ದು ನೆಲಸಮಗೊಂಡಿದೆ. ಆವರಣದ ಒಂದು ಮೂಲೆಯಲ್ಲಿ ಮನೆಯನ್ನು ಕಟ್ಟಿಕೊಂಡು ವಾರಸುದಾರರು ವಾಸಿಸುತ್ತಿದ್ದಾರೆ.
ಯಮಯಾತನೆಯ ನೀರಿನ ಸಮಸ್ಯೆಯಿಂದಾಗಿ `ನಿಪ್ಪಾಣಿ' (ನೀರು-ಕನ್ನಡ; ಪಾಣಿ-ಮರಾಠಿ ಶಬ್ದ) ಎಂದು ಹೆಸರು ಬಂತೆಂದು ಹೇಳಲಾಗಿರುವ ಈ ಊರು ಕರ್ನಾಟಕ ಮತ್ತು ಮಹಾರಾಷ್ಟ್ರ ಸೀಮೆಯ ಗಡಿ ಪ್ರದೇಶ. ಮರಾಠಿ, ಕನ್ನಡ ಹಾಗೂ ಉರ್ದು ಇಲ್ಲಿಯ ಜನರಾಡುವ ಭಾಷೆ. ನಿಪ್ಪಾಣಿ ನಗರದ ಸಂಸ್ಥಾಪಕ ಸರದಾರ ಶ್ರೀಮಂತ ಸಿಧೋಜಿರಾವ್ ನಿಂಬ್ಹಾಳಕರ ಈ ವಾಡೆ ಹಾಗೂ ಕಿಲ್ಲೆಗಳನ್ನು ಕಟ್ಟಿಸಿದನು. ಇಲ್ಲಿ ಕಟ್ಟಿಸಿದ ಕೋಟೆ ಹಾಗೂ ಅದರಲ್ಲಿಯ ವಾಡೆಯು, `ವಾಡೆಯ ರಾಜ'ನೆಂದು ಕರೆಯಲ್ಪಡುವ ಪುಣೆಯ ಪೇಶ್ವೆಯರ `ಶನಿವಾರ ವಾಡೆ' ಯನ್ನು ಹೋಲುತ್ತದೆ.
ಅಂದಿನ ವೈಭವ ಸಾರುತ್ತ ನಿಂತಿರುವ ಈ ವಾಡೆ ಇಂದು ನಾನಾ ಕಾರಣಗಳಿಂದಾಗಿ ಅವಸಾನದ ಅಂಚು ತಲುಪಿದೆ. ಸಣ್ಣ, ಸಣ್ಣ ಮನೆಗಳಾಗಿ ಗೋಚರಿಸುತ್ತಿದೆ.
ಚಿಕ್ಕೋಡಿಯಿಂದ ನೈಋತ್ಯಕ್ಕೆ 22 ಕಿ.ಮೀ ಸಾಗಿದರೆ ನನದಿ ಗ್ರಾಮವಿದೆ. ನನದಿ ಸರಕಾರವು ಮೂಲತಃ ನಿಪ್ಪಾಣಿ ಸಿದ್ದೋಜಿರಾವ್ ನಿಂಬಾಳ್ಕರ್ ಮನೆತನದ ಒಂದು ಭಾಗವಾಗಿದೆ. ವಾಡೆಯು ಉತ್ತರಾಭಿಮುಖವಾದ ದ್ವಾರವನ್ನು ಬಿಟ್ಟರೆ ಇನ್ನಾವುದೇ ಅವಶೇಷಗಳು ಕಾಣಲು ಸಿಗುವುದಿಲ್ಲ. ಒಳಗಡೆ ಸಂಪೂರ್ಣ ಬಿದ್ದು ಹೋಗಿದೆ. ವಾಡೆಯ ಮಹಾದ್ವಾರ ಮುಂದೆ ವಾಡೆಯ ವಾರಸುದಾರರು ಚಿಕ್ಕ ಪುಟ್ಟ ಮನೆಗಳನ್ನು ಕಟ್ಟಿಸಿ ವಾಸವಾಗಿದ್ದಾರೆ.
ಚಿಕ್ಕೋಡಿಯಿಂದ 15ಕಿ.ಮೀ. ಅಂತರದಲ್ಲಿರುವ ಅಂಕಲಿ ವಾಡೆಯು ಸಿಥೋಳಿ ಮಹಾರಾಜರ ಸ್ವತ್ತಾಗಿದೆ. ಕಟ್ಟಡ ಬಹು ಸುಂದರವಾಗಿದ್ದರೂ ಯಾವುದೇ ವ್ಯವಸ್ಥೆಯಿಲ್ಲ. ನೋಡಲಿಕ್ಕೆ ಪೂರ್ವಾಭಿಮುಖವಾಗಿದ್ದು ಕರಿಕಲ್ಲಿ ಮತ್ತು ಗಚ್ಚಿನಿಂದ ನಿರ್ಮಿಸಲಾಗಿದ್ದು, ವಾಡೆಯ ಸುತ್ತಲೂ ರಕ್ಷಣಾ ಗೋಡೆಯನ್ನು ಕಾಣುತ್ತೇವೆ. ಈ ರಕ್ಷಣಾ ಗೋಡೆಗಳಿಗೆ `ಹೂಡೆ'ಗಳನ್ನು ನಿರ್ಮಿಸಲಾಗಿದೆ. ಇವು ಇಂದಿಗೂ ಸುಸ್ಥಿತಿಯಲ್ಲಿವೆ. ವಾಡೆಯ ಮುಖ್ಯಸ್ಥರು ಮೂಲತಃ ಮಧ್ಯಪ್ರದೇಶದ ಗ್ವಾಲಿಯರ್ ಪ್ರದೇಶದವರು. ವಾಡೆ ಕಟ್ಟಿಸಿದವರು ಅಪ್ಪಾಜಿರಾವ್ ಸಿಥೋಳೆ. ವಾಡೆ, ಇಂದಿಗೂ ಗಟ್ಟಿಮುಟ್ಟಾಗಿದೆ. ಆದರೆ ವಾಡೆಯನ್ನು ನೋಡಿಕೊಳ್ಳುವರ ಕೊರತೆಯಿಂದಾಗಿ ಹಾಳು ಸುರಿಯುತ್ತಿದೆ.
ಜಾಧವ ದೇಸಾಯಿ ಮಾಲೀಕತ್ವದ ರಾಯಬಾಗ ತಾಲ್ಲೂಕಿನ `ಚಿಂಚಲಿ ವಾಡೆ' ಬಹುಸುಂದರ ಕಟ್ಟಡ ಹೊಂದಿದೆ. ಸುಮಾರು ಎರಡು ಎಕರೆ ಜಮೀನಿನಲ್ಲಿ ವಾಡೆಯ ಆವರಣವಿದೆ. ವಾಡೆಯ ಮುಖ್ಯಸ್ಥರು ಮರಾಠಿಗರಾಗಿದ್ದು, ಮಹಾರಾಷ್ಟ್ರದಲ್ಲಿ ವಾಸಿಸುತ್ತಾರೆ. ಆಗೊಮ್ಮೆ ಈಗೊಮ್ಮೆ ವಾಡೆಗೆ ಬಂದು ಹೋಗುತ್ತಾರೆ. ಇದರಿಂದ ವಾಡೆಯ ವ್ಯವಸ್ಥೆ ಸರಿಯಾಗಿಲ್ಲ.
ಮಾಲೀಕರ ವತನಕಿ, ಗತ್ತು, ಗಾಂಭೀರ್ಯ, ಅಂತಸ್ತು, ಮರ್ಯಾದೆ ಮತ್ತು ಸಾಹಸಿ ಪ್ರವೃತ್ತಿಗೆ ಮೂಕ ಸಾಕ್ಷಿಗಳಾಗಿರುವ ಹಾಗೂ ಒಂದು ಕಾಲದಲ್ಲಿ ರಾಜಠೀವಿಯಿಂದ ಮೆರೆದ ಈ ವಾಡೆಗಳ ಗರ್ಭದಲ್ಲಿಂದು ಕಸಗಂಟಿಗಳು ಬೆಳೆದು ಅಣಕಿಸುತ್ತ ನಿಂತಿವೆ. ಅವುಗಳ ಮುಂದೆ ನಿಂತಾಗಲೊಮ್ಮೆ ರಕ್ಷಣೆಗಾಗಿ ರೋದಿಸುತ್ತಿರುವಂತೆ ಭಾಸವಾಗುತ್ತವೆ. ಕಾಲಗರ್ಭದಲ್ಲಿ ಲೀನವಾಗುತ್ತಿರುವ ಈ ವಾಡೆಗಳ ಕಡೆಗೊಮ್ಮೆ ಸರ್ಕಾರ, ಸಂಸ್ಥೆಗಳು ತಿರುಗಿನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.