ADVERTISEMENT

ನೋಟು ನಿಷೇಧ: ಪರದಾಡಿದ ಹಳ್ಳಿ ಜನ

ಟೋಲ್‌ನಾಕಾ ಬಳಿ ಸಾಲುಗಟ್ಟಿ ನಿಂತ ವಾಹನ; ಚಿಲ್ಲರೆಗಾಗಿ ವಾಗ್ವಾದ, ವಾಹನ ಚಾಲಕರಿಗೆ ಊಟಕ್ಕೂ ಸಂಚಕಾರ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2016, 9:12 IST
Last Updated 10 ನವೆಂಬರ್ 2016, 9:12 IST
ಹಿರೇಬಾಗೇವಾಡಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ₹ 500 ಮತ್ತು ₹ 1000 ಮುಖಬೆಲೆಯ ನೋಟುಗಳು ಇಂದಿನಿಂದ ಚಲಾವಣೆಯಲ್ಲಿ ಇರುವುದಿಲ್ಲ ಎಂದು ಪ್ರಚಾರ ಮಾಡುತ್ತಲೇ ಬುಧವಾರ ಇಲ್ಲಿಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಶುಲ್ಕ ಸಂಗ್ರಹಣಾ ಕೇಂದ್ರ (ಟೋಲ್ ನಾಕಾ) ದಲ್ಲಿ ಚಿಲ್ಲರೆಗಾಗಿ ಪರದಾಟ ಪ್ರಾರಂಭವಾಗಿದೆ.
 
ಪ್ರತಿನಿತ್ಯ ಸಾವಿರಾರು ವಾಹನಗಳು ಇಲ್ಲಿಂದ ಶುಲ್ಕ ಪಾವತಿಸಿ ಸಂಚರಿಸುತ್ತವೆ. ಈ ಮುಂಚೆ ಯಾವುದೇ ತೊಂದರೆ ಇಲ್ಲದೇ ವಾಹನಗಳು ಸರಾಗವಾಗಿ ನಿಗದಿತ ಶುಲ್ಕ ಪಾವತಿಸಿ ಸಾಗುತ್ತಿದ್ದವು. ಆದರೆ, ಇಂದು ₹ 500 ಮತ್ತು 1000 ನೋಟುಗಳು ಇಂದಿನಿಂದ ಚಲಾವಣೆಯಲ್ಲಿ ಇರುವುದಿಲ್ಲ. ಈ ಸುದ್ದಿ ಬಂದ ಕೂಡಲೇ ವಾಹನ ಚಾಲಕರು ತಮ್ಮ ಬಳಿ ಚಿಲ್ಲರೆ ಹಣ ಇದ್ದರೂ ₹ 500 ಮತ್ತು 1000 ನೋಟುಗಳನ್ನೇ ಕೊಡುತ್ತಿದ್ದಾರೆ.
 
ಹೀಗಾಗಿ ಮರಳಿ ಚಿಲ್ಲರೆ ಕೊಡಲು ಕೇಂದ್ರದವರ ಬಳಿ ಹಣ ಇಲ್ಲವಾಗುತ್ತಿದೆ. ಅದರಿಂದ ವಾಹನ ಚಾಲಕರು ಮತ್ತು ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ. ಚಿಲ್ಲರೆ ಕೊಡುವವರೆಗೂ ಹೆದ್ದಾರಿಯ ಎರಡೂ ಬದಿಗೆ ಸುಮಾರು ಒಂದು ಕಿಲೋ ಮೀಟರಿನಷ್ಟು ಉದ್ದದ ವರೆಗೆ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಗುತ್ತಿದೆ.
 
ಈ ಬಗ್ಗೆ ಶುಲ್ಕ ಕೇಂದ್ರದ ಸಿಬ್ಬಂದಿಯನ್ನು ಮಾತನಾಡಿಸಿದಾಗ, ‘ಪ್ರಧಾನ ಮಂತ್ರಿಯವರು ತೆಗೆದುಕೊಂಡ ತೀರ್ಮಾನ ಸರಿಯಾಗಿಯೇ ಇದೆ. ಆದರೆ, ನಮ್ಮ ಬಳಿಯ ಹಣ ಕೊಟ್ಟು ಚಿಲ್ಲರೆ ತರಲು ಬ್ಯಾಂಕುಗಳನ್ನಾದರೂ ತೆರೆದಿರಬೇಕಿತ್ತು. ಅದರಿಂದ ವಾಹನ ಚಾಲಕರಿಗೆ ಸಹಾಯವಾಗುತ್ತಿತ್ತು. ಸಂಚಾರ ಸುಗಮವಾಗಿರುತ್ತಿತ್ತು’ ಎಂದಿದ್ದಾರೆ.
 
ನಿತ್ಯ ವ್ಯವಹಾರಕ್ಕೂ ತೊಡಕು
ಚನ್ನಮ್ಮನ ಕಿತ್ತೂರು: ದೇಶದಲ್ಲಿ ₹ 500 ಮತ್ತು 1,000 ಮೌಲ್ಯದ ನೋಟುಗಳ ಚಲಾವಣೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಿದ ಪರಿಣಾಮ ಗ್ರಾಮಾಂತರ ಪ್ರದೇಶದ ಜನತೆ ನಿತ್ಯ ವ್ಯವಹಾರಕ್ಕಾಗಿ ಬುಧವಾರ ಪರದಾಡಬೇಕಾಯಿತು.
 
ಹೋಟೆಲ್‌, ಪಾನ್‌ಶಾಪ್‌, ಕಿರಾಣಿ ಮತ್ತು ಗೊಬ್ಬರ ಅಂಗಡಿಗಳಿಗೆ ಹೋದ ಹಳ್ಳಿ ಗ್ರಾಹಕನಿಗೆ ₹ 500 ಹೊರ ತೆಗೆದಾಗ ವಿಭಿನ್ನ ಅನುಭವ ಆಯಿತು. ‘ಈ ನೋಟು ನಡೆಯುವುದಿಲ್ಲ, ನೂರರ ನೋಟಿದ್ದರೆ ಕೊಡ್ರಿ’ ಎಂಬ ಉತ್ತರ ಮಾಲೀಕರಿಂದ ಬಂತು.
 
ಬಹಳ ಪರಿಚಿತರಿದ್ದರೆ ‘ಉದ್ರಿ ಬೇಕಾದರೆ ಒಯ್ಯಬಹುದು. ಆದರೆ ಈ ಸಾವಿರ, ಐನೂರು ನೋಟುಗಳ ಉಸಾಬರಿ ಬೇಡ’ ಎಂದು ಖಂಡತುಂಡಾಗಿ ಅಂಗಡಿಯವರು ಹೇಳಿದರು.
 
‘ಹೊಲಕ್ಕೆ ಬಿತ್ತಲು ಗೊಬ್ಬರ ಮತ್ತು ಸೌತೆಕಾಯಿ ಬೀಜ ಬೇಕಾಗಿತ್ತು. ನನ್ನಲ್ಲಿರುವುದು ಐನೂರರ ನೋಟು. ಅಂಗಡಿಯವರು ಇವು ಚಲಾವಣೆಯಲ್ಲಿ ಇಲ್ಲ ಎಂದು ಹೇಳುತ್ತಿದ್ದಾರೆ. ವಾಪಸ್‌ ಮನೆ ಕಡೆಗೆ ಹೋಗಬೇಕಾಗಿದೆ’ ಎಂದು ಸಾಗರದ ರುದ್ರಪ್ಪ ಅಂಗಡಿ ಪ್ರತಿಕ್ರಿಯಿಸಿದರು.
 
ಅಂಗಡಿಕಾರರ ಕತೆ ಹೀಗಾದರೆ ಪೆಟ್ರೊಲ್‌ ಬಂಕ್‌ಗೆ ಹೋದ ಗ್ರಾಹಕನ ಅನುಭವ ಬೇರೆ ತೆರನಾಗಿತ್ತು. ಐನೂರರ ನೋಟು ಹೊರ ತೆಗೆದರೆ ಅಷ್ಟು ದುಡ್ಡಿನ ಪೆಟ್ರೊಲ್ ಗಾಡಿಗೆ ಹಾಕಿಸಿಕೊಳ್ಳಬೇಕು. ಚಿಲ್ಲರೆ ಮರಳಿ ಕೊಡಲು ಹಣವಿಲ್ಲ ಎಂದು ಹೇಳುತ್ತಿದ್ದರು. ಹೀಗಾಗಿ ಕೆಲವರು ಅನಿವಾರ್ಯವಾಗಿ ಬೈಕ್‌ಗಳಿಗೆ ₹ 500 ಪೆಟ್ರೊಲ್ ಹಾಕಿಸಿಕೊಂಡು ಅನೇಕ ಗ್ರಾಹಕರು ಹೋಗುತ್ತಿದ್ದರು.
 
ಚಿಲ್ಲರೆ ಇಲ್ಲದೇ ಕೆಲವರು ಗೊಣಗುತ್ತಲೇ ವಾಪಸ್‌ ಹೋದರು. ಇನ್ನಷ್ಟು ಜನರು ಖಾಲಿ ಬಾಟಲಿಯಲ್ಲಿ ಪೆಟ್ರೋಲ್‌  ತುಂಬಿಸಿಕೊಂಡು ಒಯ್ದರು.
 
ಸಂಚಾರಕ್ಕೆ ತೊಡಕು
ಯಮಕನಮರಡಿ: ದೇಶದ ಎಲ್ಲೆಡೆ ₹ 500 ಮತ್ತು ₹ 1000 ಮುಖಬೆಲೆಯ ನೋಟ್ ರದ್ದು ಮಾಡಿದ ಹಿನ್ನೆಲೆಯಲ್ಲಿ ಇಲ್ಲಿಗೆ ಸಮೀಪದ ಹತ್ತರಗಿ ಟೋಲ್‌ನಾಕಾದಲ್ಲಿ ಬುಧವಾರ ವಾಹನ ಚಾಲಕರು ತೀವ್ರವಾಗಿ ಪರದಾಡಿದರು.
 
ಟೋಲ್‌ ಶುಲ್ಕ ಪಾವತಿಗೆ ಚಾಲಕರು ₹ 500 ಮತ್ತು ₹ 1,000 ನೋಟುಗಳನ್ನು ನೀಡುತ್ತಿದ್ದರಿಂದ ಸಿಬ್ಬಂದಿಗೆ ತೊಂದರೆ ಆಯಿತು. ಚಾಲಕರಿಗೆ ಶುಲ್ಕದ ಚಿಲ್ಲರೆ ಹಣ ನೀಡಲು ಸಾಧ್ಯವಾಗದೆ ವಾಗ್ವಾದಗಳು ಸಾಮಾನ್ಯವಾಗಿದ್ದವು. ರದ್ದುಪಡಿಸಿರುವ ನೋಟುಗಳನ್ನು ಸ್ವೀಕರಿಸುವುದಿಲ್ಲ ಎಂಬುದಕ್ಕೆ ಆಕ್ಷೇಪಗಳೂ ಕೇಳಿ ಬಂದವು. ಕೆಲವರು ಗಲಾಟೆಯನ್ನೂ ಮಾಡಿದರು. 
 
ಇನ್ನು ಕೆಲವರು ₹ 500 ನೋಟ್ ಬಿಟ್ಟು ಬೇರೆ ಇಲ್ಲ ಎಂದು ಹೇಳಿ, ನಾಕಾ ಸಿಬ್ಬಂದಿಯಿಂದ ಹಣ ಪಡೆಯಲು ಮುಂದಾದರು. ಒಂದು ಹಂತದಲ್ಲಿ ನಾಕಾ ಸಿಬ್ಬಂದಿ ಚಿಲ್ಲರೆ ಇಲ್ಲದೆ ಕೈಚೆಲ್ಲಿ ಕುಳಿತರು. ಇದರಿಂದಾಗಿ ವಾಹನಗಳು ರಸ್ತೆಯುದ್ದಕ್ಕೂ ಸಾಲುಗಟ್ಟಿ ನಿಂತಿದ್ದವು.
 
ಎಲ್ಲ ಬ್ಯಾಂಕ್‌ಗಳು ಮುಚ್ಚಿದ್ದರಿಂದ ಚಿಲ್ಲರೆ ಪಡೆಯಲು ಅವಕಾಶ ಇರಲಿಲ್ಲ. ಮಾಧ್ಯಮಗಳಲ್ಲಿ ₹ 500 ಮತ್ತು 1000 ಮೌಲ್ಯದ ನೋಟ್ ರದ್ದು ಆಗಿರುವ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ಹಳೆ ನೋಟಗಳನ್ನು ಕಿರಾಣಿ ಅಂಗಡಿ, ಅಂಚೆ ಕಚೇರಿ ಹಾಗೂ ತಾವು ಸಾಲ ಪಡೆದ ವ್ಯಾಪಾರಸ್ಥರು, ಅಂಗಡಿಗಳಲ್ಲಿ ವಾಪಸ್‌ ನೀಡಲು ಮುಂದಾಗಿದ್ದುದು ಸಾಮಾನ್ಯವಾಗಿತ್ತು. ಜನರು ಸಹಕಾರಿ ಸಂಘಗಳಿಗೆ ಹೋಗಿ ಮರಳಿ ಬಂದಿದ್ದಾರೆ. ಪಾನ್ ಬೀಡಾ ಅಂಗಡಿಯಲ್ಲಿ ₹ 500 ನೋಟ್‌ಗೆ ಚಿಲ್ಲರೆ ಕೇಳಿದರೆ ಇದ್ದರೂ ಇಲ್ಲ ಎಂಬ ಹೇಳುವ ಅಭ್ಯಾಸ ಮಾಡಿಕೊಂಡಿದ್ದಾರೆ ಎಂಬ ಸನ್ನಿವೇಶ ಸಾಮಾನ್ಯವಾಗಿತ್ತು.
 
**
ಸಾರ್ವಜನಿಕರಿಗೆ ಸಂಕಷ್ಟ
ಘಟಪ್ರಭಾ: ದೇಶದಲ್ಲಿ ಭ್ರಷ್ಟಾಚಾರ ತಡೆಗೆ ₹ 500 ಹಾಗೂ ₹ 1000 ನೋಟುಗಳನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರದ ಹೊಸ ಕ್ರಮದಿಂದಾಗಿ ಸಾರ್ವಜನಿಕರು ಬುಧವಾರ ಪರದಾಡುವಂತಾಯಿತು.
 
ಎಲ್ಲಿ ನೋಡಿದರೂ ನೋಟ ಚಲಾವಣೆಯ ಚರ್ಚೆ ಕೇಳಿಬಂತು. ವಿಶೇಷವಾಗಿ ಜಿಲ್ಲೆಯ ಪ್ರಮುಖ ಕೇಂದ್ರವಾದ ಭಾಜಿ ಮಾರುಕಟ್ಟೆಯಲ್ಲಿ ಭಾರಿ ಚರ್ಚೆ ನಡೆಯಿತು. ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಗೋವಾ ನೆರೆ ರಾಜ್ಯಗಳಿಂದ ಲಕ್ಷಗಟ್ಟಲೆ ವ್ಯವಹಾರ ನಡೆಯುತ್ತದೆ. ಕೆಲವರಿಗೆ ವಿಷಯ ತಿಳಿಯದ ಕಾರಣ ನೋಟು ಚಲಾವಣೆಗಾಗಿ ಅಲೆದಾಡುವಂತಾಯಿತು.
 
ಹತ್ತು ಮಂದಿ ಕೂಲಿಗಳಿಗೆ ಒಟ್ಟಿಗೆ ₹ 500 ಮತ್ತು ₹ 1000 ಮುಖ ಬೆಲೆಯ ಕೂಲಿ ಹಣ ಕೊಟ್ಟರೆ ಅವರು ಅದನ್ನು ಚಲಾವಣೆ ಮಾಡಲು ಹೋದಾಗ ಯಾರೂ ಹಿಡಿಯಲಿಲ್ಲ. ಹೀಗಾಗಿ ಚಹಾ, ತಿಂಡಿಗೂ ಗತಿ ಇಲ್ಲದಂತಾಯಿತು. ಪೆಟ್ರೋಲ್ ಬಂಕ್‌ಗಳಿಗೆ ದ್ವಿಚಕ್ರ ವಾಹನಗಳಿಗೆ ಪೂರ್ತಿ ₹ 500 ಬೆಲೆ ಪೆಟ್ರೋಲ್ ಹಾಕಿಸಿಕೊಳ್ಳುವ ಶರತ್ತು ಹಾಕಲಾಗಿತ್ತು. 
 
ವಾಪಸ್‌ ಕೊಡಲು ಚಿಲ್ಲರೆ ₹ 100 ನೋಟುಗಳಿಲ್ಲ ಎಂದು ಹೇಳುತ್ತಿದ್ದರು. ಇದೇ ಸ್ಥಿತಿ ಔಷಧ ಅಂಗಡಿಗಳಲ್ಲಿಯೂ ಎದುರಾಯಿತು. ಕೆಲವೆಡೆ ಚಿಲ್ಲರೆ ಮಾರಾಟ ಮಾಡಿ ಕಮಿಷನ್‌ ಪಡೆಯುತ್ತಿದ್ದರು ಎಂದೂ ಆರೋಪಿಸಲಾಗಿದೆ.
 
ದೊಡ್ಡ ಅಂಗಡಿ, ವ್ಯಾಪಾರ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ಮಂದಗತಿಯಲ್ಲಿ ಇತ್ತು. 
 
**
ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ
ಹುಕ್ಕೇರಿ: ಪಟ್ಟಣದ ಬಸವಣ್ಣಗುಡಿಯ ಜೈ ಭವಾನಿ ನವರಾತ್ರಿ ಉತ್ಸವ ಮಂಡಳಿಯ ಯುವಕರು ₹ 500 ಮತ್ತು ₹ 1000 ನೋಟಗಳ ಸ್ಥಗಿತಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ನಿರ್ಧಾರಕ್ಕಾಗಿ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರು. 
 
ಪಟ್ಟಣದಲ್ಲಿ ಮಂಡಳಿಯ ಅಧ್ಯಕ್ಷ ಮಂಜುನಾಥ ದೇಸಾಯಿ ನೇತೃತ್ವದಲ್ಲಿ ಪ್ರಧಾನಿ ಅವರ ಈ ನಿರ್ಧಾರದಿಂದ ಕಪ್ಪು ಹಣ ಚಲಾವಣೆ ಹಾಗೂ ಕಾಳಧನ ಸಂಗ್ರಹ ತಡೆಗಟ್ಟಲು ಸಾಧ್ಯವೆಂದು ಪಟಾಕಿ ಸಿಡಿಸಿದರು. ಜನಸಾಮಾನ್ಯರಿಗೆ ವಾಗ್ದಾನ ಮಾಡಿದಂತೆ ಕಪ್ಪು ಹಣ ತಡೆಗಟ್ಟುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಅಭಿಮತ ವ್ಯಕ್ತಪಡಿಸಿದ ಸಂಘಟಕರು, ಇದರಿಂದ ದೇಶದ ಆರ್ಥಿಕ ವ್ಯವಸ್ಥೆ ಸಬಲವಾಗುತ್ತದೆ ಎಂದರು.
 
ಸಂಘಟನೆಯ ರಾಜು ಅಂಕಲೆ, ಯುವರಾಜ ಬೆನ್ನಾಡಿಕರ, ಜ್ಯೋತಿ ದುಪಟ್ಟಾ, ಶಿವರಾಜ ಬೆನ್ನಾಡಿಕರ, ಕೃಷ್ಣಾ ತೇವರ, ಶಂಭು ಪೂಜೇರಿ, ಅಜಯ ಕೇಸರಕರ, ಶಿವಾಜಿ ಘಾಟಗೆ, ವಿವೇಕ ಪುರಾಣಿಕ ಪಾಲ್ಗೊಂಡಿದ್ದರು.
 
**
ಕೇಂದ್ರ ಸರ್ಕಾರದ ದಿಢೀರ್‌ ನಿರ್ಧಾರದಿಂದ ಸಮಸ್ಯೆಯಾಗಿದೆ. ಆದರೆ ದೇಶದ ಭವಿಷ್ಯ ಉದ್ದೇಶಕ್ಕಾಗಿ ಇದನ್ನು ಸಹಿಸುವುದು ಅನಿವಾರ್ಯ
-ವಿಜುಸಿಂಗ್‌ ರಾಠೋಡ
ಲಾರಿ ಚಾಲಕ, ನಾಸಿಕ್
 
**
ಸರ್ಕಾರ ಒಮ್ಮೆಲೆ ಆದೇಶ ಹೊರಡಿಸುವ ಮುನ್ನ ಜನರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪೂರ್ವ ಸಿದ್ಧತೆಯೂ ಅಗತ್ಯ
-ವೀರಯ್ಯ ಹೊರಗಿನಮಠ
ವ್ಯಾಪಾರಿ

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.