ಉಗರಗೋಳ (ಬೆಳಗಾವಿ ಜಿಲ್ಲೆ): ಇಲ್ಲಿನ ಯಲ್ಲಮ್ಮನಗುಡ್ಡದಲ್ಲಿ ಬುಧವಾರ ಮತ್ತು ಗುರುವಾರ ಯಲ್ಲಮ್ಮ ದೇವಸ್ಥಾನದ ಹುಂಡಿ ಎಣಿಕೆ ಮಾಡಲಾಗಿದ್ದು, ಒಟ್ಟು ₹1.10 ಕೋಟಿಗೂ ಅಧಿಕ ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ.
2022ರ ಡಿಸೆಂಬರ್‌ನಲ್ಲಿ ಭಕ್ತರು ಹುಂಡಿಗೆ ಹಾಕಿದ್ದ ₹95 ಲಕ್ಷ ನಗದು, ₹6.66 ಲಕ್ಷ ಮೌಲ್ಯದ 119 ಗ್ರಾಂ ಚಿನ್ನಾಭರಣ ಹಾಗೂ ₹8.73 ಲಕ್ಷ ಮೌಲ್ಯದ 2.962 ಕೆ.ಜಿ ಬೆಳ್ಳಿ ಆಭರಣ ಸಂಗ್ರಹವಾಗಿವೆ. ಇಲ್ಲಿಯವರೆಗೆ ಅರ್ಧದಷ್ಟು ಹುಂಡಿಯನ್ನು ಮಾತ್ರ ಎಣಿಸಲಾಗಿದೆ. ಬಾಕಿ ಉಳಿದ ಎಣಿಕೆ ಮುಂದಿನ ವಾರ ಮಾಡಲಾಗುವುದು ಎಂದು ಯಲ್ಲಮ್ಮ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಜೀರಗ್ಯಾಳ ‘ಪ್ರಜಾವಾಣಿ’ಗೆ ತಿಳಿಸಿದರು.
‘ಭಕ್ತರು ಕಾಣಿಕೆ ರೂಪದಲ್ಲಿ ನೀಡಿದ ಹಣವನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಕೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಭಕ್ತರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು’ ಎಂದು ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ ಹೇಳಿದರು.
ದೇವಸ್ಥಾನ ಅಧೀಕ್ಷಕ ಅರವಿಂದ ಮಾಳಗೆ, ಸಮಿತಿ ಸದಸ್ಯರಾದ ವೈ.ವೈ.ಕಾಳಪ್ಪನವರ, ಕೊಳ್ಳಪ್ಪಗೌಡ ಗಂದಿಗವಾಡ, ಲಕ್ಷ್ಮಿ ಹೂಲಿ, ಸಂತೋಷ ಶಿರಸಂಗಿ, ಡಿ.ಆರ್.ಚವ್ಹಾಣ, ಎಂ.ಎಸ್.ಯಲಿಗಾರ, ಎಂ.ಪಿ.ದ್ಯಾಮನಗೌಡ್ರ, ಎಎಸ್‍ಐ ಎಂ.ಎಲ್.ಹಾದಿಮನಿ, ಎಂ.ಎಫ್.ಗೋವಿನಕೊಪ್ಪ, ಮಣ್ಣಿಕೇರಿ ಇದ್ದರು.
ಯಲ್ಲಮ್ಮ ದೇವಿ ದೇವಸ್ಥಾನ, ಕೆನರಾ ಬ್ಯಾಂಕ್ ಸಿಬ್ಬಂದಿ, ಗೃಹರಕ್ಷಕ ದಳದವರು ಹುಂಡಿ ಎಣಿಕೆಯಲ್ಲಿ ತೊಡಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.