ಸವದತ್ತಿ (ಬೆಳಗಾವಿ ಜಿಲ್ಲೆ): ಪಟ್ಟಣದ ಹೊರವಲಯದ ಟೋಲ್ ನಾಕಾ ಬಳಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದರಿಂದ ರೈತ ಶಿವಪ್ಪ ಜಯಪ್ಪ ಮುತಗೊಂಡ ಅವರಿಗೆ ಸೇರಿದ ಸುಮಾರು 15 ಎಕರೆ ಕಬ್ಬಿನ ಬೆಳೆ ಭಾನುವಾರ ಬೆಂಕಿಗೆ ಆಹುತಿಯಾಗಿದೆ.
ಸುತ್ತಲಿನ ಪರಿಸರದಲ್ಲಿ ದಟ್ಟವಾದ ಹೊಗೆ ಆವರಿಸಿತ್ತು. ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಗ್ನಿಶಾಮಕ ಠಾಣೆ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು.
‘ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬಿನ ಬೆಳೆಗೆ ಬೆಂಕಿ ತಗುಲಿರಬಹುದು. ಅಂದಾಜು ₹32 ಲಕ್ಷ ಮೌಲ್ಯದ ಕಬ್ಬು ಬೆಳೆಯಲಾಗಿತ್ತು. ಈ ಪೈಕಿ ₹14–15 ಲಕ್ಷ ಮೌಲ್ಯದ ಬೆಳೆ ಬೆಂಕಿಗೆ ಆಹುತಿಯಾಗಿದೆ. ಮೂರು ತಾಸು ಕಾರ್ಯಾಚರಣೆ ನಡೆಸಿ ಉಳಿದ ಬೆಳೆ ಸುಟ್ಟುಹೋಗುವುದನ್ನು ತಡೆಯಲಾಗಿದೆ’ ಎಂದು ಅಗ್ನಿಶಾಮಕ ಠಾಣೆ ಅಧಿಕಾರಿಗಳು ತಿಳಿಸಿದರು.
‘ದುರುದ್ದೇಶದಿಂದ ಕಿಡಿಗೇಡಿಗಳು ನಾನು ಬೆಳೆದ ಕಬ್ಬಿನ ಬೆಳೆಗೆ ಬೆಂಕಿ ಹಚ್ಚಿದ್ದಾರೆ’ ಎಂದು ರೈತ ಶಿವಪ್ಪ ಅವರ ಪುತ್ರ ಶ್ರೀಶೈಲ ಮುತಗೊಂಡ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.