ADVERTISEMENT

ಅಂಗನವಾಡಿಗೆ ಸ್ನಾತಕೋತ್ತರ ಪದವೀಧರರು: ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು15 ಮಂದಿ ನೇಮಕ

ಇಮಾಮ್‌ಹುಸೇನ್‌ ಗೂಡುನವರ
Published 9 ಆಗಸ್ಟ್ 2024, 23:50 IST
Last Updated 9 ಆಗಸ್ಟ್ 2024, 23:50 IST
<div class="paragraphs"><p>ಅಂಗನವಾಡಿ ಕೇಂದ್ರೊವೊಂದರ ಕೊಠಡಿಯಲ್ಲಿ ಮಕ್ಕಳ ವಿಶ್ರಾಂತಿ</p></div>

ಅಂಗನವಾಡಿ ಕೇಂದ್ರೊವೊಂದರ ಕೊಠಡಿಯಲ್ಲಿ ಮಕ್ಕಳ ವಿಶ್ರಾಂತಿ

   

(ಪ್ರಾತಿನಿಧಿಕ ಚಿತ್ರ)

ಬೆಳಗಾವಿ: ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಈ ವರ್ಷ 197 ಕಾರ್ಯಕರ್ತೆಯರು ನೇಮಕಗೊಂಡಿದ್ದಾರೆ. ಅವರಲ್ಲಿ 15 ಮಂದಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ.

ADVERTISEMENT

50 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ ಬೆಳಗಾವಿ ಜಿಲ್ಲೆಯಲ್ಲಿ 5,656 ಅಂಗನವಾಡಿ ಕೇಂದ್ರಗಳಿವೆ. 1,200ಕ್ಕೂ ಅಧಿಕ ಕೇಂದ್ರಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿದ್ಧತೆ ನಡೆಸಿದೆ.

ಜಿಲ್ಲೆಯಲ್ಲಿ 283 ಅಂಗನವಾಡಿ ಕಾರ್ಯಕರ್ತೆಯರ ನೇಮಕಕ್ಕೆ 2023ರ ಜೂನ್‌ನಲ್ಲಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. 2024ರ ಜೂನ್‌ನಲ್ಲಿ 197 ಕಾರ್ಯಕರ್ತೆಯರನ್ನು ಆಯ್ಕೆ ಮಾಡಿ, ನೇಮಕಾತಿ ಆದೇಶ ಕೊಡಲಾಗಿದೆ.

ಪಿಯುಸಿ ವಿದ್ಯಾರ್ಹತೆ:  

‘ಪಿಯುಸಿ ಉತ್ತೀರ್ಣರಾದವರಿಂದ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದೆವು. 283 ಹುದ್ದೆಗೆ 4,743 ಅರ್ಜಿ ಸಲ್ಲಿಕೆಯಾಗಿದ್ದವು. ಅದರಲ್ಲಿ ಎಂ.ಕಾಂ ಉತ್ತೀರ್ಣರಾದ 7 ಮಂದಿ ಮತ್ತು ಎಂ.ಎ ತೇರ್ಗಡೆಯಾದ 6 ಮಂದಿ ಹಾಗೂ ಎಂ.ಬಿ.ಎ ಪಾಸಾದ ಇಬ್ಬರು ಆಯ್ಕೆಯಾದರು. ಅವರಿಗೆ ತಿಂಗಳಿಗೆ ₹10 ಸಾವಿರ ಗೌರವಧನ ನೀಡಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್‌.ನಾಗರಾಜ ‘ಪ್ರಜಾವಾಣಿ’ಗೆ ತಿಳಿಸಿದರು.

‘809 ಅಂಗನವಾಡಿ ಸಹಾಯಕಿಯರ ಹುದ್ದೆಗೂ ಎಸ್‌ಎಸ್‌ಎಲ್‌ಸಿ ತೇರ್ಗಡೆಯಾದವರನ್ನು ನೇಮಕ ಮಾಡಿಕೊಳ್ಳಲಾಗಿದೆ. 8,135 ಅರ್ಜಿ ಸಲ್ಲಿಕೆಯಾಗಿದ್ದವು. ಈವರೆಗೆ 600 ಮಂದಿ ಆಯ್ಕೆಯಾಗಿದ್ದಾರೆ. ಅವರಿಗೆ ತಿಂಗಳಿಗೆ ₹5,250 ಗೌರವಧನ ನೀಡಲಾಗುವುದು. ಈ ವರ್ಷ ನಡೆದ ಕಾರ್ಯಕರ್ತೆಯರು, ಸಹಾಯಕಿಯರ ನೇಮಕಾತಿ ಪ್ರಕ್ರಿಯೆಯಲ್ಲಿ 200 ಪದವೀಧರರು ಆಯ್ಕೆಯಾಗಿದ್ದಾರೆ’ ಎಂದು ಅವರು ಹೇಳಿದರು. 

ಕೋವಿಡ್ ನಂತರ ಪೈಪೋಟಿ: 

‘ಕೋವಿಡ್‌ಗೂ ಮೊದಲು ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಪಿಯುಸಿ ಉತ್ತೀರ್ಣರಾದವರೇ ಹೆಚ್ಚು ಅರ್ಜಿ ಸಲ್ಲಿಸುತ್ತಿದ್ದರು. ಆದರೆ, ಕೋವಿಡ್‌ ನಂತರದ ಕಾಲಘಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಕ್ಕೆ ಕತ್ತರಿ ಬಿದ್ದಿದೆ. ಹಾಗಾಗಿ, ಸ್ನಾತಕೋತ್ತರ ಪದವೀಧರರೂ ಉದ್ಯೋಗಕ್ಕೆ ಪೈಪೋಟಿ ನಡೆಸಿದ್ದಾರೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಸ್ನಾತಕೋತ್ತರ ಪದವೀಧರರು ಮತ್ತು ಪದವೀಧರರು ಅಂಗನವಾಡಿಗೆ ನೇಮಕಗೊಂಡಿರುವುದು ಖುಷಿ ತಂದಿದೆ. ಅವರನ್ನು ಸೂಕ್ತ ರೀತಿ ಸದ್ಬಳಕೆ ಮಾಡಿಕೊಳ್ಳಲಾಗುವುದು
ಲಕ್ಷ್ಮಿ ಹೆಬ್ಬಾಳಕರ ಸಚಿವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಆರ್.ನಾಗರಾಜ
ಹೆಚ್ಚಿನ ವಿದ್ಯಾರ್ಹತೆ ಹೊಂದಿದವರು ಅಂಗನವಾಡಿಗೆ ನೇಮಕವಾದ ಕಾರಣ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಸಿಗಲಿದೆ. ಪೋಷಕರು ಕೂಡ ತಮ್ಮ ಮಕ್ಕಳನ್ನು ಅಂಗನವಾಡಿಗೆ ಸೇರಿಸಲು ಆಸಕ್ತಿ ತೋರುವರು
ಆರ್‌.ನಾಗರಾಜ ಉಪನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ
ಜ್ಯೋತಿ ಗುರವ
ನಾನು ಎಂಬಿಎ ಓದಿದ್ದೇನೆ. ನಮ್ಮೂರಲ್ಲೇ ಕೆಲಸ ಸಿಕ್ಕಿದ್ದರಿಂದ ಖುಷಿಯಿಂದ ಮಾಡುವೆ. ಯಾವ ಕೆಲಸವನ್ನು ನಿಯತ್ತಿನಿಂದ ಮಾಡಬೇಕು. ಮಕ್ಕಳಿಗೆ ಉತ್ತಮ ರೀತಿ ಶಿಕ್ಷಣ ನೀಡುವೆ
ಜ್ಯೋತಿ ಗುರವ ಅಂಗನವಾಡಿ ಕಾರ್ಯಕರ್ತೆ ರಣಕುಂಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.