ಅಥಣಿ: ತಾಲ್ಲೂಕಿನ ದರೂರ ಗ್ರಾಮದ ಬಳಿ ವಾಹನವನ್ನು ತಡೆದ ಆರ್‌ಎಸ್‌ಎಸ್ ಕಾರ್ಯಕರ್ತರು, ಅದರಲ್ಲಿ 16 ಕರುಗಳನ್ನು ಪೋಲಿಸರ ವಶಕ್ಕೆ ಒಪ್ಪಿಸಿದ್ದಾರೆ.
‘ಅವುಗಳನ್ನು ಸಾಗಿಸುತ್ತಿದ್ದವರು ಗೊಂದಲಕಾರಿ ಹೇಳಿಕೆ ನೀಡಿದರು. ಅವುಗಳನ್ನು ಖರೀದಿಸಿದ ಮಾಲೀಕರಾಗಲೀ, ವಾಹನದ ಮಾಲೀಕರಾಗಲೀ ಇರಲಿಲ್ಲ. ವಾಹನದಲ್ಲಿದ್ದವರು ತಾವು ಮಹಾರಾಷ್ಟ್ರದ ಸಂಗೋಲಾದವರು ಎಂದು ತಿಳಿಸಿದರು. ಚಾಲಕ ಸೇರಿ ನಾಲ್ವರು ಇದ್ದರು. ಕುಡಚಿಯಲ್ಲಿ ಮಾರಲು ಸಾಗಿಸುತ್ತಿದ್ದುದಾಗಿ ತಿಳಿಸಿದರು. ಮತ್ತೊಮ್ಮೆ ರಾಯಬಾಗಕ್ಕೆ ಎಂದರು. ಬುಧವಾರ ಅಲ್ಲಿ ಸಂತೆ ನಡೆಯುವುದಿಲ್ಲ. ಹೀಗಾಗಿ, ಅನುಮಾನ ಬಂದು ಅಥಣಿಯ ಡಿವೈಎಸ್ಪಿ ಕಚೇರಿಗೆ ತಂದು ಒಪ‍್ಪಿಸಿದ್ದೇವೆ’ ಎಂದು ಕಾರ್ಯಕರ್ತರು ಮಾಧ್ಯಮದವರಿಗೆ ತಿಳಿಸಿದರು.
ವಾಹನ ಬಿಡಲು ನಮಗೆ ಹಣ ಕೊಡುವುದಾಗಿಯೂ ತಿಳಿಸಿದರು. ಈ ವೇಳೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಗ್ರಾಮಸ್ಥರು ಜಮಾಯಿಸಿದ್ದರು ಎಂದು ತಿಳಿದುಬಂದಿದೆ.
ಡಿವೈಎಸ್ಪಿ ಕಚೇರಿ ಅವರಣದಲ್ಲೂ ಯುವಕರು ಜಮಾಯಿಸಿದ್ದರು. ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದರಿಂದಾಗಿ ಆತಂಕದ ವಾತಾವರಣನಿರ್ಮಾಣವಾಗಿತ್ತು. ಡಿವೈಎಸ್ಪಿ ರಾಮಣ್ಣ ಬಸರಗಿ ಪರಿಸ್ಥಿತಿ ನಿಭಾಯಿಸಿದರು. ಪ್ರಕರಣದ ಬಗ್ಗೆ ತನಿಖೆ ನಡೆಸುವ ಭರವಸೆ ನೀಡಿದರು.
‘ಎಲ್ಲವೂ ಕರುಗಳೇ ಆಗಿವೆ. ವಯಸ್ಸಾದ ಆಕಳುಗಳಿಲ್ಲ. ಹೀಗಾಗಿ, ಅವುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿರಲಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ’ ಎಂದು ಡಿವೈಎಸ್ಪಿ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.