ADVERTISEMENT

ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆಗೆ ಚಾಲನೆ: ಮೆರವಣಿಗೆಯಲ್ಲಿ ಜನಸಾಗರ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 10:05 IST
Last Updated 23 ಅಕ್ಟೋಬರ್ 2024, 10:05 IST
   

ಚನ್ನಮ್ಮನ ಕಿತ್ತೂರು: ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆ ಅಂಗವಾಗಿ ಬುಧವಾರ ನಡೆದ ಜಾನಪದ ಕಲಾವಾಹಿನಿ ಮೆರವಣಿಗೆ, ಕ್ರಾಂತಿ ನೆಲದ ಹಿರಿಮೆ ಎತ್ತಿ ಹಿಡಿಯಿತು. ರಾಜಬೀದಿಯಲ್ಲಿ ಎಲ್ಲಿ ನೋಡಿದರೂ ಜನವೋ ಜನ, ಎತ್ತ ನೋಡಿದರೂ ಸಂಭ್ರಮವೋ ಸಂಭ್ರಮ. ಕಲಾವಿದರು, ವಾದ್ಯಗಾರರು, ನೃತ್ಯಪಟುಗಳು, ಮಕ್ಕಳು, ಹಿರಿಯರು, ಮಹಿಳೆಯರೆಲ್ಲ ಸೇರಿ ನೂಪುರ ಲೋಕವನ್ನೇ ಸೃಷ್ಟಿಮಾಡಿದರು.

ರಾಜ್ಯದಾದ್ಯಂತ ಸಂಚರಿಸಿ ಬಂದ ವಿಜಯ ಜ್ಯೋತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮೆರವಣಿಗೆಗೆ ಚಾಲನೆ ನೀಡಿದರು. ಕಿಕ್ಕಿರಿದು ಸೇರಿದ್ದ ಜನಸ್ತೋಮದಿಂದ ರಾಣಿ ಚನ್ನಮ್ಮನಿಗೆ ಜಯವಾಗಲಿ, ಸಂಗೊಳ್ಳಿ ರಾಯಣ್ಣನಿಗೆ ಜಯವಾಗಲಿ, ಅಮಟೂರು ಬಾಳಪ್ಪ, ಸರ್ದಾರ್‌ ಗುರುಸಿದ್ಧಪ್ಪನವರಿಗೆ ಜಯವಾಗಲಿ ಎಂದು ಘೋಷಣೆ ಕೇಳಿಬಂತು. ಸಾವಿರಾರು ಧ್ವನಿಗಳು ಏಕಕಾಲಕ್ಕೆ ಕಿತ್ತೂರು ಕ್ರಾಂತಿಯನ್ನು ಹಾಡಿ ಹೊಗಳಿದವು.

ಅಂಗ್ಲೋ– ಕಿತ್ತೂರು ಯುದ್ಧದ ಸಂದರ್ಭದಲ್ಲಿ ಸೈನ್ಯವನ್ನು ಹುರಿದುಂಬಿಸಲು ರಾಣಿ ಚನ್ನಮ್ಮ ಕೂಗಿದ ‘ಹರಹರ ಮಹಾದೇವ’ ಘರ್ಜನೆಯನ್ನು ನಿರಂತರ ಮೊಳಗಿಸಿದರು.

ADVERTISEMENT

ಆಕರ್ಷಕ ಕಲಾ ತಂಡಗಳು, ಕಲಾವಾಹಿನಿಗಳು, ಅಲಂಕೃತ ವಾಹನಗಳು ಒಂದರ ಹಿಂದೆ ಒಂದು ಸಾಗಿದವು. ನೂರಡಿ ವಿಸ್ತಾರದ ರಾಜಬೀದಿಯಲ್ಲಿ ಜನ ನದಿಯಂತೆ ಹರಿದು ಬಂದರು. ರಸ್ತೆಯ ಇಕ್ಕೆಲಗಳಲ್ಲಿ, ಕಟ್ಟಡಗಳ ಮೇಲೆ ನಿಂತು ಪುಷ್ಪವೃಷ್ಟಿ ಮಾಡಿ, ಬಾವುಟ ಹಾರಿಸಿ ಕಳೆ ತಂದರು. ವರ್ಣರಂಜಿತ ವೈಭೋಗ ಕಣ್ತುಂಬಿಕೊಂಡರು.

ಪೌರಾಣಿಕ ವೇಷಧಾರಿಗಳ ಜತೆ ಸೆಲ್ಫಿ, ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ನೆತ್ತಿ ಮೇಲೆ ಬಂದ ಸೂರ್ಯನ ಪ್ರಖರತೆಯನ್ನೂ ಲೆಕ್ಕಿಸದೇ ಕಲಾವಿದರು ಬರಿಗಾಲಲ್ಲಿ ಹೆಜ್ಜೆ ಹಾಕಿದರು.

ಹೃನ್ಮನ ಸೆಳೆಯುವಂಥ ವೇಷಭೂಷಣ, ಸಿಳ್ಳೆ ಚಪ್ಪಾಳೆ ಕೇಕೆಗಳ ಮಧ್ಯೆ ಹೆಜ್ಜೆ ಹಾಕಿದ ಕಲಾತಂಡಗಳು, ದಢಂದಢಕ್‌ ದಢಂದಢಕ್ ದೇಸಿವಾದ್ಯಗಳ ಸದ್ದು, ಗೆಜ್ಜೆನಾದ, ಹಲಗೆಮೇಳ, ಡೊಳ್ಳು– ಢಮರುಗ, ಜಾಂಝ್‌ಪಥಕ್‌, ಕೀಲುಕುದುರೆ, ಕೋಳಿನೃತ್ಯ, ಗೊರವರ ಕುಣಿತ, ಪಟಾಕುಣಿತ, ಕಥಕ್ಕಳಿ, ದೊಡ್ಡಸಂಬಾಳ ಮೇಳ, ನಗಾರಿ, ಚಂಡೆಮದ್ದಳೆ, ಪೂಜಾ ಕುಣಿತ, ನಂದಿಧ್ವಜ, ಗೆಜ್ಜಲಿಗೆ ಮೇಳ, ಯಕ್ಷಗಾನ, ವೀರಗಾಸೆ, ಗೊಂಬೆ ಕುಣಿತ, ಬ್ಯಾಂಡ್‌ನವರು, ತಾಸೆದವರು, ಹುಲಿವೇಷದವರು, ಭಜನೆಯವರು... ಒಂದೇ ಎರಡೇ! ಎರಡು ಕಿ.ಮೀ ದೂರದವರೆಗೆ ನಡೆದ ಅದ್ಧೂರಿ ಮೆರವಣಿಗೆ ಕಿತ್ತೂರು ಕರ್ನಾಟಕದ ಅಭಿಮಾನಕ್ಕೆ ಕನ್ನಡಿ ಹಿಡಿಯಿತು. ನೂರಕ್ಕೂ ಅಧಿಕ ತಂಡಗಳು ಸಮಾವೇಶಗೊಂಡವು.

1824ರ ಅಕ್ಟೋಬರ್‌ 23ರಂದು ಕಿತ್ತೂರು ಸೇನೆ ಬ್ರಿಟಿಷ್‌ ಸೈನ್ಯದ ವಿರುದ್ಧ ವಿಜಯ ಸಾಧಿಸಿತು. ಆ ವಿಜಯಕ್ಕೆ 200 ವಸಂತಗಳು ತುಂಬಿವೆ. ಈ ಹಿಂದೆಂದಿಗಿಂತಲೂ ಈ ಬಾರಿಯ ಉತ್ಸವ ವೈಭವೋಪೇತವಾಗಿ ನಡೆಯಿತು.

ವಿಜಯಜ್ಯೋತಿ ವೀಕ್ಷಣೆಗೆ ಮುಗಿಬಿದ್ದ ಜನ

ರಾಜಬೀದಿಯಲ್ಲಿ ವಿಜಯಜ್ಯೋತಿ ಬರುತ್ತಿದ್ದಂತೆಯೇ ಜನರ ಮೈ– ಮನದಲ್ಲಿ ಪುಳಕ. ಜ್ಯೋತಿ ದರ್ಶನಕ್ಕೆ ಜನ ನಾ ಮುಂದು ತಾ ಮುಂದು ಎಂದು ಮುಗಿಬಿದ್ದರು.

ರಸ್ತೆಗೆ ನೀರು ಹಾಕಿದರು. ಮತ್ತೆ ಕೆಲವರು ಮಡಿಬಟ್ಟೆ ಹಾಸಿದರು. ಜ್ಯೋತಿಗೆ ಎಣ್ಣೆಹಾಕಿ, ಕರ್ಪೂರ ಹಚ್ಚಿ, ತೆಂಗಿನಕಾಯಿ ಒಡೆದು, ನೈವೇದ್ಯ ಕೂಡ ಮಾಡಿದರು. ರಥದಲ್ಲಿ ಪ್ರತಿಷ್ಠಾಪಿಸಿದ್ದ ರಾಣಿ ಚನ್ನಮ್ಮನ ಮೂರ್ತಿಗೆ ಹೂ ಹಾರಿಸಿ ನಮಸ್ಕರಿಸಿದರು.

ಜ್ಯೋತಿ ಇದ್ದ ವಾಹನದ ಮುಂದೆ ಕೆಲವರು ದೀರ್ಘದಂಡ ನಮಸ್ಕಾರ ಹಾಕಿದರು. ಹಸುಗೂಸುಗಳನ್ನು ಎತ್ತಿಕೊಂಡು ಬಂದ ಮಹಿಳೆಯರು ಜ್ಯೋತಿಯ ಆಶೀರ್ವಾದ ನೀಡಿದರು.

ಇದರ ಮುಂದೆ ಹೊರಟ 501 ಪೂರ್ಣಕುಂಭ ಕಳಶ ಹೊತ್ತ ವನಿತೆಯರು ಬರಿಗಾಲಲ್ಲೇ ಸಾಗಿದರು. ರಾಷ್ಟ್ರೀಯ ಹೆದ್ದಾರಿಯಿಂದ ಆರಂಭವಾಗಿ ಕೋಟೆ ಆವರಣದವರೆಗೂ ಜನ ವೈಭವಕ್ಕೆ ಸಾಕ್ಷಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.