ADVERTISEMENT

ಅಥಣಿಗೆ 2,100 ಆಶ್ರಯ ಮನೆ: ಕುಮಠಳ್ಳಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 15:15 IST
Last Updated 31 ಜನವರಿ 2022, 15:15 IST
ಅಥಣಿ ತಾಲ್ಲೂಕಿನ ಹೊಸಟ್ಟಿ ಗ್ರಾಮದ  ಉಗ್ರಾಣಿ ಹಳ್ಳದ ಬಾಂದಾರ ಎತ್ತರಿಸುವ ಕಾಮಗಾರಿಗೆ ಶಾಸಕ ಮಹೇಶ ಕುಮಠಳ್ಳಿ ಈಚೆಗೆ ಚಾಲನೆ ನೀಡಿದರು
ಅಥಣಿ ತಾಲ್ಲೂಕಿನ ಹೊಸಟ್ಟಿ ಗ್ರಾಮದ  ಉಗ್ರಾಣಿ ಹಳ್ಳದ ಬಾಂದಾರ ಎತ್ತರಿಸುವ ಕಾಮಗಾರಿಗೆ ಶಾಸಕ ಮಹೇಶ ಕುಮಠಳ್ಳಿ ಈಚೆಗೆ ಚಾಲನೆ ನೀಡಿದರು   

ಅಥಣಿ: ‘ಮತಕ್ಷೇತ್ರದ ಸಂಕೋನಟ್ಟಿ ಸೇರಿದಂತೆ 7 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಅಮೃತ ಯೋಜನೆಯಡಿ 2,100 ಆಶ್ರಯ ಮನೆಗಳು ಮಂಜೂರಾಗಿವೆ. ಮೊದಲ ಹಂತವಾಗಿ 500ಕ್ಕೆ ಅನುಮೋದನೆ ಪಡೆದುಕೊಳ್ಳಲಾಗಿದೆ’ ಎಂದು ಶಾಸಕ ಮಹೇಶ ಕುಮಠಳ್ಳಿ ತಿಳಿಸಿದರು.

ತಾಲ್ಲೂಕಿನ ಅಥಣಿ ಗ್ರಾಮೀಣ ಗ್ರಾ.ಪಂ. ವ್ಯಾಪ್ತಿಯಲ್ಲಿನ ಹೊಸಟ್ಟಿ ಗ್ರಾಮದಲ್ಲಿ ಅಗ್ರಾಣಿ ಹಳ್ಳಕ್ಕೆ ₹ 50 ಲಕ್ಷ ವೆಚ್ಚದಲ್ಲಿ ಬಾಂದಾರ ಎತ್ತರಿಸುವ ಕಾಮಗಾರಿಗೆ ಈಚೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಎರಡು ವರ್ಷಗಳಿಂದ ಆಶ್ರಯ ಮನೆಗಳಿಗೆ ಹೆಚ್ಚಿನ ಅನುದಾನ ಬಂದಿರಲಿಲ್ಲ. ಈಗ ಅಮೃತ ಯೋಜನೆಯಡಿ ಸಂಕೋನಟ್ಟಿ, ಕಕಮರಿ, ಕೋಹಳ್ಳಿ, ಯಲಡಗಿ, ಗುಂಡೇವಾಡಿ ಸೇರಿದಂತೆ ಏಳು ಹಳ್ಳಿಗಳಿಗೆ ಆಶ್ರಯ ಮನೆಗಳು ಮಂಜೂರಾಗಿವೆ. ಹಂತ ಹಂತವಾಗಿ ಎಲ್ಲ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಆಶ್ರಯ ಮನೆಗಳನ್ನು ನಿರ್ಮಿಸಲು ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

‘ಹೊಸಟ್ಟಿ ಗ್ರಾಮದಲ್ಲಿ ಅಗ್ರಾಣಿ ಹಳ್ಳಕ್ಕೆ ಈಗಾಗಲೇ ವಿಮೋಚನಾ ಸಂಸ್ಥೆಯಿಂದ ನಿರ್ಮಿಸಿರುವ ಬಾಂದಾರವನ್ನು ಈ ಭಾಗದ ರೈತರ ಒತ್ತಾಸೆಯಂತೆ ಮತ್ತಷ್ಟು ಎತ್ತರಿಸಲು ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದಿಂದ ಕಾಮಗಾರಿ ಕೈಗೊಳ್ಳಲಾಗಿದೆ. ಮುಂದೆ ಹೊಸಟ್ಟಿಯಲ್ಲಿ ದೇವಸ್ಥಾನ ಅಭಿವೃದ್ದಿ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ಆದ್ಯತೆ ಕೊಡಲಾಗುವುದು’ ಎಂದರು.

ಮುಖಂಡರಾದ ಅರುಣ ಬಾಸಿಂಗೆ, ಸಂಜು ಹಣಮಾಪುರ, ಶ್ರೀಶೈಲ ನಾಯಕ, ಎಸ್.ಜಿ. ಘೂಳಪ್ಪನವರ, ಮಲ್ಲಕಾರ್ಜುನ ಅಂದಾನಿ, ಮೆಹಬೂಬ್ ಮಕಾಂದಾರ, ಅಶೋಕ ಯಲ್ಲಡಗಿ, ರಾಜು ಕುಮಠಳ್ಳಿ, ಅನಿಲ ಭಜಂತ್ರಿ, ಅರ್ಜುನ ನಾಯಕ, ಶಿವಾನಂದ ನಾಯಕ, ಎಂಜಿನಿಯರ್‌ ವೀರಣ್ಣ ವಾಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.