ADVERTISEMENT

ಸವದತ್ತಿ ಯಲ್ಲಮ್ಮ, ಚಿಂಚಲಿಯಲ್ಲಿ 22 ಸಾವಿರ ಕೆಜಿ ಎಣ್ಣೆ ಸಂಗ್ರಹ

ಇಮಾಮ್‌ಹುಸೇನ್‌ ಗೂಡುನವರ
Published 14 ಅಕ್ಟೋಬರ್ 2024, 5:49 IST
Last Updated 14 ಅಕ್ಟೋಬರ್ 2024, 5:49 IST
ಸವದತ್ತಿ ತಾಲ್ಲೂಕಿನ ಯಲ್ಲಮ್ಮನಗುಡ್ಡದ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಭಕ್ತರು ದೀಪಕ್ಕೆ ಎಣ್ಣೆ ಹಾಕಿದರು
ಸವದತ್ತಿ ತಾಲ್ಲೂಕಿನ ಯಲ್ಲಮ್ಮನಗುಡ್ಡದ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಭಕ್ತರು ದೀಪಕ್ಕೆ ಎಣ್ಣೆ ಹಾಕಿದರು   

ಬೆಳಗಾವಿ: ಈ ವರ್ಷ ಗಾಣದ ಎಣ್ಣೆ ದರ ದುಬಾರಿಯಾದರೂ ಭಕ್ತರ ಭಕ್ತಿ ಕುಂದಿಲ್ಲ. ನವರಾತ್ರಿ ಅಂಗವಾಗಿ ಸವದತ್ತಿ ತಾಲ್ಲೂಕಿನ ಯಲ್ಲಮ್ಮನಗುಡ್ಡ ಮತ್ತು ರಾಯಬಾಗ ತಾಲ್ಲೂಕಿನ ಚಿಂಚಲಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಭೇಟಿ ನೀಡಿದ ಭಕ್ತರು, 22 ಸಾವಿರ ಕೆ.ಜಿಗೂ ಹೆಚ್ಚಿನ ಪ್ರಮಾಣದ ಎಣ್ಣೆಯನ್ನು ದೀಪಕ್ಕೆ ಹಾಕಿ, ಭಕ್ತಿ ಸಮರ್ಪಿಸಿದ್ದಾರೆ.

ನವರಾತ್ರಿ ವೇಳೆ ಎರಡೂ ದೇವಾಲಯಗಳಲ್ಲಿ ದೀಪಗಳಿಗೆ ಎಣ್ಣೆ ಹಾಕುವ ಸಂಪ್ರದಾಯವಿದೆ. ಕಳೆದ ವರ್ಷ ಎಣ್ಣೆ ದರ ಕೆ.ಜಿಗೆ ₹ 105 ರಿಂದ ₹ 110 ಇತ್ತು. ಈ ವರ್ಷ ₹140 ರಿಂದ ₹150ಕ್ಕೆ ಏರಿದೆ. ಎಣ್ಣೆ ಸಂಗ್ರಹಣೆಯೂ ಹೆಚ್ಚಿದೆ.

16,200 ಕೆ.ಜಿ ಸಂಗ್ರಹ: ಯಲ್ಲಮ್ಮನಗುಡ್ಡದ ರೇಣುಕಾ ಯಲ್ಲಮ್ಮ ದೇವಿ ದೇವಾಲಯದಲ್ಲಿ ಗರ್ಭಗುಡಿ ಎದುರೇ ಅಳವಡಿಸಿರುವ ದೀಪಕ್ಕೆ ಭಕ್ತರು ಹಾಕುವ ಎಣ್ಣೆ, ಪಕ್ಕದಲ್ಲೇ ಇರಿಸಿದ ಟ್ಯಾಂಕ್‌ ಸೇರುತ್ತದೆ. ಅಲ್ಲಿಂದ ಮೋಟರ್‌ನಿಂದ ಟ್ಯಾಂಕರ್‌ಗೆ ತುಂಬಿಸಲಾಗುತ್ತಿದೆ. ಮಿಶ್ರಣವಾದ ಈ ಎಣ್ಣೆಯನ್ನು ಬೇರ್ಪಡಿಸಿ ಮಾರಲು ಆಗುವುದಿಲ್ಲ. ಅದಕ್ಕೆ ಮಾರುಕಟ್ಟೆಗಿಂತ ಕಡಿಮೆ ದರಕ್ಕೆ ಕೆಲವರು ಖರೀದಿಸುತ್ತಾರೆ.

ADVERTISEMENT

‘ಕಳೆದ ವರ್ಷ ನವರಾತ್ರಿಯಲ್ಲಿ ಈ ದೇವಾಲಯದಲ್ಲಿ 14,194 ಕೆ.ಜಿ ಎಣ್ಣೆ ಸಂಗ್ರಹವಾಗಿತ್ತು. ಕೆ.ಜಿಗೆ ₹ 51 ದರದಲ್ಲಿ ದೇವಾಲಯದವರು ಮಾರಾಟ ಮಾಡಿದ್ದರು. ಈ ಸಲ 16,200 ಕೆ.ಜಿ ಎಣ್ಣೆ ಸಂಗ್ರಹವಾಗಿದೆ. ಕೆ.ಜಿಗೆ ₹58 ದರದಲ್ಲಿ ಎಣ್ಣೆ ಮಾರಾಟ ಮಾಡಲು ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ’ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಸ್‌.ಪಿ.ಬಿ. ಮಹೇಶ ‘ಪ್ರಜಾವಾಣಿ’ಗೆ ತಿಳಿಸಿದರು.

5,989 ಕೆ.ಜಿ: ‘ಚಿಂಚಲಿಯ ಮಾಯಕ್ಕ ದೇವಿ ದೇವಾಲಯದಲ್ಲಿ ಕಳೆದ ವರ್ಷ 4,500 ಕೆ.ಜಿ ಎಣ್ಣೆ ಸಂಗ್ರಹವಾಗಿತ್ತು. ಕೆ.ಜಿಗೆ ₹70 ದರದಲ್ಲಿ ಮಾರಲಾಗಿತ್ತು. ಈ ಸಲ 5,989 ಕೆ.ಜಿ ಎಣ್ಣೆ ಸಂಗ್ರಹವಾಗಿದ್ದು, ಕೆಜಿಗೆ ₹90 ದರದಲ್ಲಿ ಮಾರಲು ತೀರ್ಮಾನಿಸಿದ್ದೇವೆ’ ಎಂದು ದೇವಾಲಯದ ಕಾರ್ಯದರ್ಶಿ ಯಲ್ಲಪ್ಪ ಮಾಲೋಜಿ ಹೇಳಿದರು.

ಯಲ್ಲಮ್ಮನ ದೇವಾಲಯದಲ್ಲಿ ನವರಾತ್ರಿ ವೇಳೆ ಸಂಗ್ರಹವಾದ 16200 ಕೆ.ಜಿ ಎಣ್ಣೆಯಿಂದ ₹9.39 ಲಕ್ಷ ಆದಾಯ ಬಂದಿದೆ. ಕಳೆದ ವರ್ಷಕ್ಕಿಂತ ಆದಾಯ ಹೆಚ್ಚಿದೆ
ಎಸ್‌ಪಿಬಿ ಮಹೇಶ ಕಾರ್ಯನಿರ್ವಾಹಕ ಅಧಿಕಾರಿ
ಚಿಂಚಲಿ ಮಾಯಕ್ಕ ದೇವಿ ದೇಗುಲದಲ್ಲಿ ಈ ಬಾರಿ ದೀಪದ ಎಣ್ಣೆಯಿಂದ ₹5.39 ಲಕ್ಷ ಆದಾಯ ಬಂದಿದೆ
ಯಲ್ಲಪ್ಪ ಮಾಲೋಜಿ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.