ADVERTISEMENT

2ಎ ಮೀಸಲಾತಿ ಹೋರಾಟ: ಪಂಚಮಸಾಲಿ ವಕೀಲರ ರಾಜ್ಯಮಟ್ಟದ ಸಮಾವೇಶ ಯಶಸ್ವಿ

ಸಿದ್ದರಾಮಯ್ಯಗೆ ಕೊನೆಯ ಅವಕಾಶ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2024, 15:19 IST
Last Updated 22 ಸೆಪ್ಟೆಂಬರ್ 2024, 15:19 IST
<div class="paragraphs"><p>ಬೆಳಗಾವಿಯಲ್ಲಿ ಭಾನುವಾರ ನಡೆದ ಪಂಚಮಸಾಲಿ ವಕೀಲರ ಪರಿಷತ್‌ನಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಬಸವಣ್ಣ, ರಾಣಿ ಚನ್ನಮ್ಮ, ಅಂಬೇಡ್ಕರ್‌ ಹಾಗೂ ಗುರುಸಿದ್ಧಪ್ಪ ಕಂಬಳಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.</p></div>

ಬೆಳಗಾವಿಯಲ್ಲಿ ಭಾನುವಾರ ನಡೆದ ಪಂಚಮಸಾಲಿ ವಕೀಲರ ಪರಿಷತ್‌ನಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಬಸವಣ್ಣ, ರಾಣಿ ಚನ್ನಮ್ಮ, ಅಂಬೇಡ್ಕರ್‌ ಹಾಗೂ ಗುರುಸಿದ್ಧಪ್ಪ ಕಂಬಳಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

   

ಪ್ರಜಾವಾಣಿ ಚಿತ್ರ

ಬೆಳಗಾವಿ: ‘‍ಪಂಚಮಸಾಲಿ ಸಮಾಜವನ್ನು ಎಲ್ಲರೂ ಬಳಸಿಕೊಂಡರು, ಬೆಳೆದರು. ಆದರೆ, ಸಮಾಜವನ್ನು ಹಿಂದಕ್ಕೆ ತಳ್ಳಿದರು. ಸಮಾಜಕ್ಕೆ 2ಎ ಮೀಸಲಾತಿ ಕೊಡಿಸುವವರೆಗೂ ನಾವು ವಿಶ್ರಮಿಸಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊನೆಯ ಅವಕಾಶ ಕೊಡುತ್ತಿದ್ದೇವೆ’ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ADVERTISEMENT

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ, ಲಿಂಗಾಯತ ಒಳಪಂಗಡಗಳಿಗೆ ಒಬಿಸಿ ನೀಡಬೇಕು ಎಂದು ಆಗ್ರಹಿಸಿ, ಇಲ್ಲಿನ ಗಾಂಧಿ ಭವನದಲ್ಲಿ ಭಾನುವಾರ ನಡೆದ ಪಂಚಮಸಾಲಿ ಸಮಾಜದ ವಕೀಲರ ರಾಜ್ಯಮಟ್ಟದ ಪರಿಷತ್‌ನಲ್ಲಿ ಮಾತನಾಡಿದ ಅವರು, ‘ಪಂಚಮಸಾಲಿ ಸಮಾಜಕ್ಕೆ ವಕೀಲರೇ ತಾಯಿ ಇದ್ದ ಹಾಗೆ. ವಕೀಲರು ಹೋರಾಟ ಮಾಡಿದ್ದಕ್ಕೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಮೀಸಲಾತಿ ದೊಡ್ಡದೇನಲ್ಲ’ ಎಂದರು.

‘ಮೀಸಲಾತಿಗೆ ನಾವು ಕೋರ್ಟ್‌ಗೆ ಹೋದರೆ ದಶಕಗಳೇ ಉರುಳುತ್ತವೆ. ಅದರ ಬದಲು ರಾಜ್ಯಮಟ್ಟದ ವಕೀಲರ ಬಲಿಷ್ಠ ಪರಿಷತ್‌ ರಚಿಸಲಾಗಿದೆ. ಕಾನೂನಾತ್ಮಕ ಸಲಹೆ ಪಡೆದು ಸರ್ಕಾರದ ಕಿವಿ ಹಿಂಡಲಾಗುವುದು’ ಎಂದೂ ಕರೆ ನೀಡಿದರು.

‘ನನ್ನ ಜತೆ ವೇದಿಕೆ ಹಂಚಿಕೊಂಡ ಬಹಳ ನಾಯಕರು ರಾಜಕೀಯವಾಗಿ ಬೆಳೆದರು. ಆದರೆ, ಸಮಾಜದ ಉಪಕಾರ ತೀರಿಸಲಿಲ್ಲ. ನಾನು ಮಠ ಬಿಟ್ಟು, ಪೀಠ ಬಿಟ್ಟು ಜನರಿಗಾಗಿಯೇ ಬೀದಿಗೆ ಇಳಿದಿದ್ದೇನೆ. ವಕೀಲರೂ ಕೈ ಜೋಡಿಸಿದರೆ ನಮ್ಮ ಹೋರಾಟಕ್ಕೆ ಜಯ ಸಿಗುವುದು ಖಚಿತ’ ಎಂದರು.

ವಕೀಲ ಎಂ.ಬಿ.ಝಿರಲಿ ಮಾತನಾಡಿ, ‘ರಾಜ್ಯ ಸರ್ಕಾರ ಹಿಂದುಳಿದ ಆಯೋಗದ ಅಧ್ಯಕ್ಷರನ್ನೇ ನೇಮಕ ಮಾಡಿಲ್ಲ. ಆಯೋಗವು ಮೊದಲು ಸಮೀಕ್ಷೆ ನಡೆಸಬೇಕು. ಸಾಧ್ಯತೆಗಳ ವರದಿಯನ್ನು ಸರ್ಕಾರಕ್ಕೆ ನೀಡಬೇಕು. ಅಲ್ಲಿಯವರೆಗೂ ಯಾವ ಮುಖ್ಯಮಂತ್ರಿ ಏನು ಭರವಸೆ ನೀಡಿದರೂ ವ್ಯರ್ಥವೇ. ನಾವು ಮೊದಲು ಅದಕ್ಕಾಗಿ ಹೋರಾಡಬೇಕು’ ಎಂದು ಸಲಹೆ ನೀಡಿದರು.

ಶಾಸಕರಾದ ಸಿ.ಸಿ.ಪಾಟೀಲ, ವಿನಯ ಕುಲಕರ್ಣಿ, ಸ್ವಾಗತ ಸಮಿತಿ ಅಧ್ಯಕ್ಷ ಬಿ.ಎಲ್.ಪಾಟೀಲ, ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಸಿ.ಪಾಟೀಲ, ಮುಖಂಡರಾದ ಮಂಜಿನಾಥ ಕೊಣ್ಣೂರ, ಶಿವಶಂಕರ ಪಾಟೀಲ, ಎಸ್.ಎಸ್.ಕಿವಡಸಣ್ಣವರ, ಎ.ಬಿ.ಪಾಟೀಲ, ದಿನೇಶ ಪಾಟೀಲ ಸೇರಿದಂತೆ ಪ್ರತಿ ಜಿಲ್ಲಾ ಮುಖಂಡರೂ ಅನಿಸಿಕೆ ಹಂಚಿಕೊಂಡರು.

ಲಿಂಗಾಯತ ಪಂಚಮಸಾಲಿ ವಕೀಲರ ಪರಿಷತ್‌– ನ್ಯಾಯಪೀಠ ಕೂಡಲಸಂಗಮ ಎಂಬ ಪರಿಷತ್‌ ಅನ್ನು ಉದ್ಘಾಟಿಸಲಾಯಿತು. ಪದಾಧಿಕಾರಿಗಳನ್ನು ಸ್ವಾಮೀಜಿ ಘೋಷಣೆ ಮಾಡಿದರು.

‘ನಾಟಕ ಮಾಡಬೇಡಿ: ಮೀಸಲಾತಿ ಕೊಡಿ’

‘ಈವರೆಗೆ ನಾಯಕರೆಲ್ಲ ಬರೀ ನಾಟಕ ಮಾಡಿದ್ದಾರೆ. ಯಡಿಯೂರಪ್ಪ ನಾಟಕ, ಬೊಮ್ಮಾಯಿ ನಾಟಕ ಎಲ್ಲ ನೋಡಿದ್ದೇವೆ. ಈಗ ಸಿದ್ದರಾಮಯ್ಯ ನಾಟಕ ಮಾಡಿದರೆ ನೋಡುವುದಿಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಖಡಕ್‌ ಎಚ್ಚರಿಕೆ ನೀಡಿದರು.

‘ಸಮಾಜದ ಬಲ ಪಡೆದವರು ಏನೇನೋ ಆದರು. ಆದರೆ, ಸಮಾಜಕ್ಕೆ ಏನೂ ಮಾಡಲಿಲ್ಲ. ನನಗೆ ಯಾವುದೇ ಆಕಾಂಕ್ಷೆಗಳಿಲ್ಲ. ಮೀಸಲಾತಿಗಾಗಿ ಎಲ್ಲ ತ್ಯಾಗಕ್ಕೂ ಸಿದ್ಧನಿದ್ದೇನೆ. ನನ್ನ ಹಿಂದೆ ಸಮಾಜ ಇದೆ ಎಂಬ ಒಂದೇ ಕಾರಣಕ್ಕೆ ನನ್ನನ್ನು ಪಕ್ಷದಲ್ಲಿ ಇನ್ನೂ ಇಟ್ಟುಕೊಂಡಿದ್ದಾರೆ. ಇಲ್ಲದಿದ್ದರೆ ಎಂದೋ ಹೊರಗಟ್ಟುತ್ತಿದ್ದರು’ ಎಂದೂ ಅವರು ಬಿಜೆಪಿ ನಾಯಕರನ್ನು ಟೀಕಿಸಿದರು.

‘ನವೆಂಬರ್‌ ಒಳಗೆ ಮೀಸಲಾತಿ ಒಂದು ಹಂತಕ್ಕೆ ಬರಬೇಕು. ಇಲ್ಲದಿದ್ದರೆ ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಬರಲು ಸಿದ್ದರಾಮಯ್ಯಗೆ ಅವಕಾಶವನ್ನೇ ಕೊಡುವುದು ಬೇಡ’ ಎಂದೂ ಕರೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.