ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿರುವುದು ಇದು 2ನೇ ಬಾರಿಯಾಗಿದೆ. ಎರಡು ಚುನಾವಣೆಗಳೂ ಕೇಂದ್ರದಲ್ಲಿ ರಾಜ್ಯ ಸಚಿವರಾಗಿದ್ದವರ ಅಗಲಿಕೆಯ ಕಾರಣದಿಂದಲೇ ಎದುರಾಗಿರುವುದು ವಿಶೇಷ.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವರಾಗಿದ್ದ ಬಲವಂತರಾವ್ ದಾತಾರ್ 1962ರಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದರು. ಆ ಕಾರಣದಿಂದ ತೆರವಾಗಿದ್ದ ಸ್ಥಾನಕ್ಕೆ 1963ರಲ್ಲಿ ಉಪ ಚುನಾವಣೆ ನಡೆದಿತ್ತು. ಈಗ, ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರ ನಿಧನದಿಂದಾಗಿ ಉಪ ಚುನಾವಣೆ ನಡೆಯುತ್ತಿದೆ. ಅಂಗಡಿ ಅವರು ಕೋವಿಡ್–19 ಕಾರಣದಿಂದ ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆಗೆ ಸ್ಪಂದಿಸದೆ 2020ರ ಸೆ.23ರಂದು ಮೃತರಾಗಿದ್ದರು.
ಪ್ರಾಂತ್ಯವಾರು ರಾಜ್ಯ ರಚನೆಗೂ ಮುನ್ನ 1951ರಲ್ಲಿ ಮುಂಬೈ ಪ್ರಾಂತ್ಯವಿದ್ದ ಸಂದರ್ಭದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಮೊದಲ ಸಂಸದರಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಬಲವಂತರಾವ್ ದಾತಾರ್ ಆಯ್ಕೆಯಾಗಿದ್ದರು. ಮೈಸೂರು ರಾಜ್ಯ ರಚನೆಯಾದ ನಂತರ 1957ರಲ್ಲಿ 2ನೇ ಬಾರಿಗೆ ಮತ್ತು 1962ರಲ್ಲಿ ಮೂರನೇ ಬಾರಿಗೆ ವಿಜೇತರಾಗಿದ್ದರು. ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಗಮನಸೆಳೆದಿದ್ದರು. ಅವರು ಅನಾರೋಗ್ಯದಿಂದ ನಿಧನರಾದ್ದರಿಂದ, ತೆರವಾಗಿದ್ದ ಸ್ಥಾನಕ್ಕೆ 1963ರಲ್ಕು ನಡೆದಿದ್ದ ಉಪ ಚುನಾವಣೆಯಲ್ಲಿ ಬೈಲಹೊಂಗಲದ ಎಚ್.ವಿ. ಕೌಜಲಗಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು 88,886 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು.
ಕ್ಷೇತ್ರದಲ್ಲಿ 1980ರಿಂದ ಕಾಂಗ್ರೆಸ್‌ನ ಎಸ್.ಬಿ. ಸಿದ್ನಾಳ ಸತತ ನಾಲ್ಕು ಬಾರಿಗೆ ಆಯ್ಕೆಯಾಗಿದ್ದರು. ಅವರ ಬಳಿಕ ಸುರೇಶ ಅಂಗಡಿ ಅವರು 2004ರಿಂದ ಸತತವಾಗಿ ನಾಲ್ಕು ಬಾರಿಗೆ ಗೆದ್ದಿದ್ದರು. 4ನೇ ಅವಧಿಯಲ್ಲಿ ಅವರು ಮೊದಲ ಬಾರಿಗೆ ರೈಲ್ವೆ ಖಾತೆ ರಾಜ್ಯ ಸಚಿವ ಸ್ಥಾನ ಗಳಿಸಿ, ರಾಜ್ಯ ಹಾಗೂ ಬೆಳಗಾವಿಗೆ ಹಲವು ಮಹತ್ವದ ಯೋಜನೆಗಳನ್ನು ತರುವಲ್ಲಿ ಯಶಸ್ವಿಯಾಗಿದ್ದರು.
ಈ ಕ್ಷೇತ್ರದಲ್ಲಿ ಈವರೆಗೆ ಮೂವರು ಮಾತ್ರ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಬಲವಂತರಾವ್ ದಾತಾರ್ ಬಳಿಕ ಬಾಬಾಗೌಡ ಪಾಟೀಲ ಅವರು ಕೇಂದ್ರ ಸಚಿವರಾಗಿದ್ದರು. ಇವರ ನಂತರ ಸುರೇಶ ಅಂಗಡಿ ಅವರಿಗೆ ಆ ಸ್ಥಾನ ಸಿಕ್ಕಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.