ADVERTISEMENT

ಚನ್ನಮ್ಮನ ಕಿತ್ತೂರು: ನಕಲಿ ವೈದ್ಯನ ಹೊಲದಲ್ಲಿ ಮೂರು ಭ್ರೂಣ ಪತ್ತೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 5:10 IST
Last Updated 16 ಜೂನ್ 2024, 5:10 IST
<div class="paragraphs"><p>ನೆಲದಡಿ ಮುಚ್ಚಲಾಗಿದ್ದ ಮೂರು ಭ್ರೂಣ ಪತ್ತೆ</p></div>

ನೆಲದಡಿ ಮುಚ್ಚಲಾಗಿದ್ದ ಮೂರು ಭ್ರೂಣ ಪತ್ತೆ

   

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಬೆಳಗಾವಿ ನಗರದಲ್ಲಿ ಇತ್ತೀಚೆಗೆ ಸಿಕ್ಕಿಬಿದ್ದ ಶಿಶು ಮಾರಾಟ ಜಾಲದಲ್ಲಿ ಆರೋಪಿಯಾಗಿರುವ ಲಾಡಖಾನ್ (ರಿಯಾಜ್) ಕ್ಲಿನಿಕ್‌ನ ಅಬ್ದುಲ್‌ ಗಫಾರ್ ಲಾಡಖಾನ್ ಅವರು ಕೃಷಿ ಮಾಡಲು ಗುತ್ತಿಗೆ ಪಡೆದಿದ್ದ ಜಮೀನಿನಲ್ಲಿ ಮೂರು ಭ್ರೂಣಗಳು ಪತ್ತೆಯಾಗಿವೆ.

ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪುರ, ತಹಶೀಲ್ದಾರ್ ರವೀಂದ್ರ ಹಾದಿಮನಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ ಕೋಣಿ, ಡಿವೈಎಸ್ಪಿ ರವಿ ನಾಯಕ, ಫೋರೆನ್ಸಿಕ್ ತಜ್ಞರ ಸಮ್ಮುಖದಲ್ಲಿ ಭಾನುವಾರ ನಡೆದ ತಪಾಸಣೆ ವೇಳೆ, ಮೂರು ಭ್ರೂಣ ಪತ್ತೆಯಾದವು.

ADVERTISEMENT

‘ಕ್ಲಿನಿಕ್‌ನಲ್ಲಿ ಗರ್ಭಪಾತ ಮಾಡಿಸಿದ ಭ್ರೂಣಗಳನ್ನು ಸಹಾಯಕನಾಗಿ ಕೆಲಸ ಮಾಡುತ್ತಿದ್ದ ರೋಹಿತ್ ಕುಪ್ಪಸಗೌಡರ ಮೂಲಕ ಲಾಡಖಾನ್ ಹೊಲದಲ್ಲಿ ಹೂಳಿಸುತ್ತಿದ್ದ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ರೋಹಿತ್‌ನನ್ನು ಸ್ಥಳಕ್ಕೆ ಕರೆದೊಯ್ದು ಭ್ರೂಣ ಪತ್ತೆ ಕಾರ್ಯಾಚರಣೆ ನಡೆಸಲಾಯಿತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ನಾಲ್ಕು ತಿಂಗಳ ಮೂರು ಭ್ರೂಣ ಸಿಕ್ಕಿವೆ. ಇವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ತಪಾಸಣೆಗಾಗಿ ಕಳುಹಿಸಲಾಗುವುದು. ಅಲ್ಲಿಂದ ಬರುವ ವರದಿ ಆಧರಿಸಿ ಮುಂದಿನ ತನಿಖೆ ನಡೆಸಲಾಗುವುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ ಕೋಣಿ ಹೇಳಿದರು.

‘ಈ ನಕಲಿ ವೈದ್ಯನ ಹಿಂದೆ ದೊಡ್ಡ ಜಾಲವೇ ಇರುವ ಸಂಶಯವಿದೆ. ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಅಧಿಕೃತವಾಗಿ ವೈದ್ಯಕೀಯ ಪದವಿ ವ್ಯಾಸಂಗ ಮಾಡಿರದಿದ್ದರೂ, ಅಲೋಪಥಿ ವೈದ್ಯ ಪದ್ಧತಿ ಪ್ರಕಾರ ಲಾಡ್‌ಖಾನ್‌ ವೈದ್ಯನಾಗಿ ಕೆಲಸ ಮಾಡುತ್ತಿದ್ದ. ತನ್ನ ಬೆಂಬಲಿಗರ ಜತೆ ಸೇರಿ ಅಕ್ರಮವಾಗಿ ಗರ್ಭಪಾತ ಮಾಡಿಸುತ್ತಿದ್ದ. ನಂತರ ಭ್ರೂಣವನ್ನು ಹೊಲದಲ್ಲಿ ಮುಚ್ಚಿ ನಾಶಪಡಿಸುತ್ತಿದ್ದ’ ಎಂದು ಆರೋಪಿಸಿ ತಾಲ್ಲೂಕು ವೈದ್ಯಾಧಿಕಾರಿ ಸಂಜಯ ಸಿದ್ದಣ್ಣವರ ಕಿತ್ತೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ಹಿನ್ನೆಲೆಯಲ್ಲಿ ಲಾಡಖಾನ್ ಗುತ್ತಿಗೆ ಪಡೆದ ಜಮೀನಿನಲ್ಲಿ ಭ್ರೂಣ ಪತ್ತೆ ಕಾರ್ಯ ನಡೆಯಿತು’ ಎಂದು ಮೂಲಗಳು ತಿಳಿಸಿವೆ.

ತನಿಖೆ ನಡೆಯುವ ಸ್ಥಳದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.