ADVERTISEMENT

ರಾಜ್ಯದಲ್ಲಿ 7 ಹೊಸ ಕೃಷಿ ತರಬೇತಿ ಕೇಂದ್ರ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ

ಕೃಷಿ ಮತ್ತು ಜಲಾನಯನ ಇಲಾಖೆಗಳ ವಿಭಾಗಮಟ್ಟದ ಸಭೆಯಲ್ಲಿ ಸಚಿವ ಚಲುವರಾಯಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 14:50 IST
Last Updated 26 ಜೂನ್ 2024, 14:50 IST
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಬುಧವಾರ ನಡೆದ ಕೃಷಿ ಮತ್ತು ಜಲಾನಯನ ಇಲಾಖೆಗಳ ವಿಭಾಗಮಟ್ಟದ ಸಭೆಯಲ್ಲಿ ಸಚಿವ ಎನ್‌.ಚಲುವರಾಯಸ್ವಾಮಿ ಮಾತನಾಡಿದರು
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಬುಧವಾರ ನಡೆದ ಕೃಷಿ ಮತ್ತು ಜಲಾನಯನ ಇಲಾಖೆಗಳ ವಿಭಾಗಮಟ್ಟದ ಸಭೆಯಲ್ಲಿ ಸಚಿವ ಎನ್‌.ಚಲುವರಾಯಸ್ವಾಮಿ ಮಾತನಾಡಿದರು   

ಬೆಳಗಾವಿ: ‘ರಾಜ್ಯದಲ್ಲಿ ಈ ವರ್ಷ ಏಳು ಜಿಲ್ಲೆಗಳಲ್ಲಿ ಹೊಸದಾಗಿ ಕೃಷಿ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗುವುದು’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಬುಧವಾರ ನಡೆದ ಕೃಷಿ ಮತ್ತು ಜಲಾನಯನ ಇಲಾಖೆಗಳ ವಿಭಾಗಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.

‘ಕೃಷಿಕರಿಗೆ ಹೊಸ ತಾಂತ್ರಿಕತೆ ಕುರಿತು ತರಬೇತಿ ನೀಡಿ‌, ಅವರ ಸಾಮರ್ಥ್ಯ ವೃದ್ಧಿಸಲು ಕ್ರಮ ವಹಿಸಲಾಗುತ್ತಿದೆ. ಹಾಗಾಗಿ ವಿಜಯನಗರ, ಯಾದಗಿರಿ, ಗದಗ, ಕೋಲಾರ, ಚಾಮರಾಜನಗರ, ರಾಮನಗರ, ಉಡುಪಿ ಜಿಲ್ಲೆಗಳಲ್ಲಿ ಕೃಷಿ ತರಬೇತಿ ಕೇಂದ್ರ ತೆರೆಯಲಾಗುವುದು’ ಎಂದರು.

ADVERTISEMENT

‘ಕೃಷಿ ಇಲಾಖೆಯಲ್ಲಿ ತರಬೇತಿ ಹಾಗೂ ಗುಣಮಟ್ಟ ನಿಯಂತ್ರಣಕ್ಕೆ ಒತ್ತು ನೀಡಲಾಗುತ್ತಿದೆ. ಪ್ರಯೋಗಾಲಯಗಳನ್ನು ಎನ್ಎಬಿಎಲ್ ಮಾನ್ಯತೆಗೆ ಒಳಪಡಿಸಲಾಗುವುದು. ಬೈಲಹೊಂಗಲದ ಪರತಂತ್ರ ಜೀವಿ ಉತ್ಪಾದನೆ ಪ್ರಯೋಗಾಲಯ ಉನ್ನತೀಕರಿಸಲು ಕ್ರಮ ವಹಿಸಲಾಗುವುದು’ ಎಂದರು.

‘ಕಬ್ಬಿನಲ್ಲಿ ಕೀಟಗಳ ನಿಯಂತ್ರಣಕ್ಕೆ ಅಗತ್ಯವಿರುವ ಟ್ರೈಕೋಗ್ರಾಮಾ ಪರತಂತ್ರ ಜೀವಿ ಉತ್ಪಾದನೆಗೆ ಹೊಸ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು’ ಎಂದು ಸೂಚಿಸಿದ ಅವರು, ‘ಮುಂದಿನ 6 ತಿಂಗಳಲ್ಲಿ  ಹೆಚ್ಚಿನ ಪ್ರಮಾಣದಲ್ಲಿ ಪರತಂತ್ರ ಜೀವಿ ಉತ್ಪಾದಿಸಿ, ರೈತರಿಗೆ ಒದಗಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಈಗ ಅಗತ್ಯವಿರುವ ಬಿತ್ತನೆ ಬೀಜಗಳನ್ನು ಆಯಾ ಜಿಲ್ಲೆಗಳ ಬೀಜೋತ್ಪಾದನಾ ಕೇಂದ್ರಗಳು ಮತ್ತು ಪ್ರಗತಿಪರ ರೈತರ ಜಮೀನಿನಲ್ಲೇ ಉತ್ಪಾದಿಸಬೇಕು. ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಿ ರೈತರಿಗೆ ನೆರವಾಗಬೇಕು’ ಎಂದು ಸೂಚಿಸಿದರು.

‘ಎಲ್ಲ ಜಿಲ್ಲೆಗಳಿಗೆ ಬಿತ್ತನೆ ಬೀಜ, ರಸಗೊಬ್ಬರವನ್ನು ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಸರಬರಾಜು ಮಾಡಲಾಗಿದೆ. ಹಾಗಾಗಿ ಯಾವ ಗೊಂದಲವೂ ಇಲ್ಲದಂತೆ ರೈತರಿಗೆ ವಿತರಿಸಿ. ಪ್ರಾಥಮಿಕ‌ ಕೃಷಿಪತ್ತಿನ ಸಹಕಾರ ಸಂಘಗಳ ನೆರವು ಸಹ ಪಡೆದುಕೊಳ್ಳಿ’ ಎಂದು ನಿರ್ದೇಶನ‌ ನೀಡಿದರು.

‘ರೈತರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿ. ಜತೆಗೆ ಹೊಸ ಆವಿಷ್ಕಾರಗಳು, ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸಿ. ಅದರಲ್ಲೂ ಬೆಳೆವಿಮೆ ಬಗ್ಗೆ  ಹೆಚ್ಚಿನ ಪ್ರಚಾರ ಮಾಡಿ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯತ್ತ ಗಮನ ಹರಿಸಿ. ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿ ಪರಿವರ್ತಿಸಿ’ ಎಂದು ಸಲಹೆ ನೀಡಿದರು.

‘ಹೈಟೆಕ್ ಹಾರ್ವೆಸ್ಟ್‌ ಹಬ್ ಮತ್ತು ಕೃಷಿ ನವೋದ್ಯಮಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇವುಗಳಿಂದ ಆಗುವ ಪರಿಣಾಮಕಾರಿ ಬದಲಾವಣೆಗಳ ಬಗ್ಗೆ ಕೃಷಿಕರಿಗೆ ಮಾಹಿತಿ ನೀಡಿ. ಸುಸ್ಥಿರ ಕೃಷಿ ಮತ್ತು ಸಮಗ್ರ ಕೃಷಿ ಬಗ್ಗೆ ತರಬೇತಿ ನೀಡಿ. ಬಜೆಟ್‌ನಲ್ಲಿ ಘೋಷಿಸಿರುವ ಎಲ್ಲ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಿ’ ಎಂದು ನಿರ್ದೇಶನ ನೀಡಿದರು.

ಕೃಷಿ ಆಯುಕ್ತ ವೈ.ಎಸ್.ಪಾಟೀಲ, ಜಲಾನಯನ ಇಲಾಖೆ ಆಯುಕ್ತ ಗಿರೀಶ, ನಿರ್ದೇಶಕ ಪದ್ಮಯ್ಯ ನಾಯಕ, ಕೃಷಿ ನಿರ್ದೇಶಕ ಜಿ.ಟಿ.ಪುತ್ರ, ಹೆಚ್ಚುವರಿ ನಿರ್ದೇಶಕ ವೆಂಕಟರಮಣ ರೆಡ್ಡಿ ಇದ್ದರು.

ತರಬೇತಿ ಹಾಗೂ ಗುಣಮಟ್ಟ ನಿಯಂತ್ರಣಕ್ಕೆ ಒತ್ತು ಬೀಜ, ಗೊಬ್ಬರ ಬೇಡಿಕೆಗಿಂತ ಹೆಚ್ಚು ಸರಬರಾಜು ಕೃಷಿ ನವೋದ್ಯಮಗಳಿಗೆ ಉತ್ತಮ ಪ್ರತಿಕ್ರಿಯೆ

‘ಡಿಸಿಎಂ ಹುದ್ದೆ ಖಾಲಿ ಇಲ್ಲ’ ‘ಈಗ ಡಿಸಿಎಂ ಹುದ್ದೆ ಖಾಲಿ ಇಲ್ಲ. ನಮ್ಮದು ಜಾತ್ಯತೀತ ನಿಲುವು ಹೊಂದಿದ ಪಕ್ಷ. ವೈಯಕ್ತಿಕವಾಗಿ ಕೆಲವರು ಮಾತನಾಡಿದ್ದಾರೆ. ಆದರೆ ಈ ವಿಚಾರದಲ್ಲಿ ಪಕ್ಷದ ವರಿಷ್ಠರೇ ತೀರ್ಮಾನ ಕೈಗೊಳ್ಳುತ್ತಾರೆ’ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಡಿ.ಕೆ.ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರು. ಹಾಗಾಗಿ ಚನ್ನಪಟ್ಟಣ ಕ್ಷೇತ್ರದ ಬಗ್ಗೆ ಗಮನ ಹರಿಸಿದ್ದಾರೆ. ಯಾವುದೇ ಕ್ಷಣದಲ್ಲಿ ಉಪಚುನಾವಣೆ ಘೋಷಣೆ ಆಗಬಹುದು. ಅಭ್ಯರ್ಥಿ ಯಾರೆಂದು ಇನ್ನೂ ತೀರ್ಮಾನವಾಗಿಲ್ಲ’ ಎಂದು ಹೇಳಿದರು. ‘ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ. ನಮ್ಮ ತಂದೆ ಮಾಡಲಾಗದ ಕೆಲಸಗಳನ್ನೂ ಮಾಡುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ. ಅವರು ಕೆಲಸ ಮಾಡಿದರೆ ನಾನು ಹೆಚ್ಚು ಖುಷಿಪಡುತ್ತೇನೆ. ಅವರ ಬಗ್ಗೆ ಟೀಕೆ–ಟಿಪ್ಪಣಿ ಮಾಡುವುದಿಲ್ಲ’ ಎಂದು ಹೇಳಿದರು. ‘ಎಚ್‌.ಡಿ.ದೇವೇಗೌಡರ ಕುಟುಂಬದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ವೈಯಕ್ತಿಕವಾಗಿ ಪ್ರತಿಕ್ರಿಯಿಸುವುದಿಲ್ಲ. ನ್ಯಾಯಾಲಯವೇ ಆ ಬಗ್ಗೆ ತೀರ್ಮಾನಿಸುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.