ADVERTISEMENT

ಬೆಳಗಾವಿ: ಮೂವರು ಸರ್ಕಾರಿ ನೌಕರರ ಮನೆ ಮೇಲೆ ಎಸಿಬಿ ದಾಳಿ, ದಾಖಲೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 7:13 IST
Last Updated 24 ನವೆಂಬರ್ 2021, 7:13 IST
ವೈಭವ ನಗದಲ್ಲಿರುವ ನಾಥಾಜಿ ಪಾಟೀಲ ಮನೆ
ವೈಭವ ನಗದಲ್ಲಿರುವ ನಾಥಾಜಿ ಪಾಟೀಲ ಮನೆ    

ಬೆಳಗಾವಿ: ಆದಾಯಕ್ಕಿಂತ ಹೆಚ್ಚು ಆರೋಪದ ಮೇಲೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಮೂವರು ನೌಕರರ ಮನೆ, ಕಚೇರಿ ಹಾಗೂ ಅವರ ನಿಕಟವರ್ತಿಗಳ ಮನೆಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದವರು ಬುಧವಾರ ಬೆಳಿಗ್ಗೆ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಬೆಳಗಾವಿ ನಗರ, ಬೈಲಹೊಂಗಲ, ಗೋಕಾಕದಲ್ಲಿ ದಾಳಿ ನಡೆದಿದೆ. ಇಲ್ಲಿನ ಹೆಸ್ಕಾಂ‌ನ ಮಹಾಂತೇಶ ನಗರ ಶಾಖೆ ಲೈನ್ ಮೆಕ್ಯಾನಿಕ್ ಗ್ರೇಡ್‌–2 ನಾಥಾಜಿ ಪಾಟೀಲ, ರಾಯಬಾಗದ ಎಆರ್‌ಸಿಎಸ್‌ ಕಚೇರಿಯ ಸಹಕಾರ ಅಭಿವೃದ್ಧಿ ಅಧಿಕಾರಿ ಅಡವಿಸಿದ್ದೇಶ್ವರ ಕರೆಪ್ಪ ಮಸ್ತಿ, ಗೋಕಾಕದ ಎಆರ್‌ಟಿಒದ ಹಿರಿಯ ಮೋಟಾರು ವಾಹನ ಇನ್‌ಸ್ಪೆಕ್ಟರ್‌ ಸದಾಶಿವ ಮರಲಿಂಗಣ್ಣವರ ನಿವಾಸದಲ್ಲಿ ಶೋಧ ನಡೆಯುತ್ತಿದೆ. ಅವರಿಗೆ ಸಂಬಂಧಿಸಿದ ಒಟ್ಟು 12 ಸ್ಥಳಗಳಲ್ಲಿ ಪ್ರಕ್ರಿಯೆ ನಡೆಯುತ್ತಿದೆ.

ಎಸ್ಪಿ, ಐವರು ಡಿವೈಎಸ್‌ಪಿ, 13 ಇನ್ಸ್‌ಪೆಕ್ಟರ್‌ಗಳು ಮತ್ತು 51 ಸಿಬ್ಬಂದಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ADVERTISEMENT

ಇಲ್ಲಿನ ವೈಭವ ನಗದಲ್ಲಿರುವ ನಾಥಾಜಿ ಪಾಟೀಲ ಮನೆ ಕಚೇರಿ ಮೇಲೆ ಎಸ್ಪಿ ಬಿ.ಎಸ್. ನೇಮಗೌಡ ನೇತೃತ್ವದಲ್ಲಿ ದಾಳಿ ನಡೆದಿದೆ. ಅಲ್ಲಿ 2 ವಿದೇಶಿ ಕರೆನ್ಸಿಗಳು ಪತ್ತೆಯಾಗಿದೆ. ಅಪಾರ ಪ್ರಮಾಣದ ಆಸ್ತಿ ದಾಖಲೆಗಳು ಮತ್ತು ನಗದು ಪತ್ತೆಯಾಗಿದೆ. ಬೆಳ್ಳಿ, ಚಿನ್ನ ಹಾಗೂ ವಜ್ರದ ಆಭರಣಗಳು ಪತ್ತೆಯಾಗಿವೆ. ಹೆಸ್ಕಾಂಗೆ ಸಂಬಂಧಿಸಿದ ಕೆಲವು ಕಡತಗಳು, ಜಮೀನಿನ ಪತ್ರಗಳು ಮೊದಲಾದ ದಾಖಲೆಗಳು ಲಭ್ಯವಾಗಿವೆ ಎಂದು ಮೂಲಗಳು ತಿಳಿಸಿವೆ.

ಅವರಿಗೆ ಸೇರಿದ ಕಂಗ್ರಾಳಿ ಬಿ.ಕೆ. ಗ್ರಾಮದ ಮರಾಠಾ ಕಾಲೊನಿಯ ಮನೆ ಹಾಗೂ ಅವರು ಕಾರ್ಯನಿರ್ವಹಿಸುವ ಕಚೇರಿಯಲ್ಲೂ ಅಧಿಕಾರಿಗಳು ಶೋಧ ಮುಂದುವರಿಸಿದ್ದಾರೆ. ಐಷಾರಾಮಿ ಮೂರಂತಸ್ತಿನ ಕಟ್ಟಡಕ್ಕೆ ಲಿಫ್ಟ್ ವ್ಯವಸ್ಥೆ ಕೂಡ ಮಾಡಿಕೊಂಡಿರುವ ನಾಥಾಜಿ. ನಿವಾಸದ ಪ್ರತಿ ಕೊಠಡಿಯಲ್ಲೂ ಪರಿಶೀಲನೆ ನಡೆಸಲಾಗುತ್ತಿದೆ. ಅಡುಗೆ ಮನೆಯಲ್ಲಿರುವ ಡಬ್ಬಿಗಳನ್ನೂ ಪರಿಶೀಲಿಸಿದ್ದಾರೆ. ಚಿನ್ನಾಭರಣ, ಆಸ್ತಿಪತ್ರಗಳ ಮಾಹಿತಿಯನ್ನು ಲ್ಯಾಪ್‌ಟಾಪ್‌ನಲ್ಲಿ ದಾಖಲಿಸಿಕೊಳ್ಳುತ್ತಿದ್ದಾರೆ.

ಗೋಕಾಕದ ವಿವೇಕಾನಂದ ನಗರದಲ್ಲಿರುವ ಸದಾಶಿವ ಮರಲಿಂಗಣ್ಣವರ ಅವರಿಗೆ ಸೇರಿದ ಮನೆ ಸೇರಿ 6 ಕಡೆಗಳಲ್ಲಿ ಡಿಎಎಸ್ಪಿ ಕರುಣಾಕರ ಶೆಟ್ಟಿ ನೇತೃತ್ವದ ತಂಡದವರು ನಡೆಸಿದ್ದಾರೆ. ರಾಮದುರ್ಗ ತಾಲ್ಲೂಕಿನ ಕುಳ್ಳೂರದಲ್ಲಿರುವ ಮನೆ, ಬೆಳಗಾವಿಯ ರಾಮತೀರ್ಥ ನಗರದಲ್ಲಿ ಬಾಡಿಗೆ ನೀಡಿರುವ ಮನೆ, ಮುಧೋಳದಲ್ಲಿ ಸಹೋದರ ವಾಸವಿರುವ ಮನೆ ಹಾಗೂ ಅವರ ಸಂಬಂಧಿಕರಿರುವ ಗೋಕಾಕ ತಾಲ್ಲೂಕಿನ ಕಲ್ಲೋಳಿಯಲ್ಲಿರುವ ಮನೆಯಲ್ಲಿ ಶೋಧ ನಡೆಸುತ್ತಿದ್ದಾರೆ.

ಅಡವಿಸಿದ್ದೇಶ್ವರ ಅವರಿಗೆ ಸೇರಿದ ಬೈಲಹೊಂಗಲ ಪಟ್ಟಣದಲ್ಲಿರುವ ಮನೆ, ಅಲ್ಲಿನ ಶಿವಾನಂದ ಭಾರತಿ ನಗರದಲ್ಲಿರುವ ಅವರ ಆಪ್ತನ ಮನೆ ಮತ್ತು ರಾಯಬಾಗದ ಸಹಕಾರ ಅಭಿವೃದ್ಧಿ ಅಧಿಕಾರಿ ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಸ್ನೇಹಿತನ ಮನೆಯಲ್ಲಿ ಹಣ ಇಟ್ಟಿದ್ದಾರೆಂಬ ಮಾಹಿತಿ ಆಧರಿಸಿ ದಾಳಿ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.