ಅಥಣಿ (ಬೆಳಗಾವಿ ಜಿಲ್ಲೆ): ಪಟ್ಟಣ ಹೊರವಲಯದ ಮೀರಜ್ ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ಖಾಸಗಿ ಕಾಲೇಜಿಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಹಾಗೂ ಕ್ಯಾಂಟರ್ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಎರಡೂ ವಾಹನಗಳ ಚಾಲಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 10 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಅಪಘಾತವಾದ ತಕ್ಷಣ ಧಾವಿಸಿದ ಜನ ಮಕ್ಕಳನ್ನು ಹೊರಗೆಳೆದು ಆಸ್ಪತ್ರೆಗೆ ದಾಖಲಿಸಿದರು. ಘಟನೆಯಿಂದ ಬೆಚ್ಚಿಬಿದ್ದ ವಿದ್ಯಾರ್ಥಿಗಳ ರೋದನ, ಗಾಯಗೊಂಡು ಒದ್ದಾಡುತ್ತಿದ್ದವರ ಸಂಕಟ ಹೇಳತೀರದಾಗಿತ್ತು.
ಅಥಣಿ ಹೊರವಲಯದ ಬಣಜವಾಡ ಶಿಕ್ಷಣ ಸಂಸ್ಥೆಗೆ ಸೇರಿದ ಬಸ್ ಎಂದಿನಂತೆ ಶನಿವಾರ ಬೆಳಿಗ್ಗೆ ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಕಾಲೇಜಿಗೆ ಹೊರಟಿತ್ತು. ಇದರಲ್ಲಿ ಪಿಯುಸಿ ಓದುತ್ತಿರುವ 20 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.
ಬಸ್ ಪಟ್ಟಣದಿಂದ ತುಸು ಹೊರಗೆ ಹೋಗುತ್ತಿದ್ದ ವೇಳೆ, ಕ್ರಾಸ್ ರಸ್ತೆಯಲ್ಲಿ ಬಂದ ಕ್ಯಾಂಟರ್ ವಾಹನ ನೇರವಾಗಿ ಬಸ್ಸಿಗೆ ಗುದ್ದಿತು. ಎರಡೂ ವಾಹನಗಳ ಮುಂಭಾಗ ನಜ್ಜುಗುಜ್ಜಾಗಿದ್ದು, ಚಾಲಕರು ಸ್ಥಳದಲ್ಲೇ ಪ್ರಾಣಬಿಟ್ಟರು.
ಕ್ಯಾಂಟರ್ ಚಾಲಕ ರಾತ್ರಿಯಿಡೀ ಸಂಚರಿಸಿದ್ದು ನಿದ್ರೆಯ ಮಂಪರಿನಲ್ಲಿದ್ದ. ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.
ಘಟನೆಯಿಂದ ಆತಂಕಗೊಂಡ ಪಾಲಕರು ಸ್ಥಳಕ್ಕೆ ಧಾವಿಸಿದರು. ಆಸ್ಪತ್ರೆಯಲ್ಲಿಯೂ ಅಪಾರ ಜನ ಸೇರಿದರು. ಹಲವರು ವಿದ್ಯಾರ್ಥಿಗಳಿಗೆ ಅಗತ್ಯ ಚಿಕಿತ್ಸೆಗೆ ನೆರವಾದರು.
ಅಥಣಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.