ADVERTISEMENT

ವೈದ್ಯಕೀಯ ಸೀಟ್‌ ಹೆಸರಿನಲ್ಲಿ ವಂಚನೆ: ಜಾಲ ಪತ್ತೆ

ಪ್ರಮುಖ ಆರೋಪಿ ಬಂಧನ, ₹12 ಲಕ್ಷ ನಗದು, ತಾಂತ್ರಿಕ ಸಲಕರಣೆ ವಶ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 18:44 IST
Last Updated 15 ಜುಲೈ 2024, 18:44 IST
ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಜಾಲದಿಂದ ವಶಕ್ಕೆ ಪಡೆದ ಹಣ ಹಾಗೂ ಸಲಕರಣೆಗಳನ್ನು ಬೆಳಗಾವಿ ಡಿಸಿಪಿ ರೋಹನ್‌ ಜಗದೀಶ್‌ ಅವರು ಸೋಮವಾರ ಮಾರ್ಕೆಟ್‌ ಠಾಣೆ ಎದುರು ಪ್ರದರ್ಶಿಸಿದರು – ಪ್ರಜಾವಾಣಿ ಚಿತ್ರ
ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಜಾಲದಿಂದ ವಶಕ್ಕೆ ಪಡೆದ ಹಣ ಹಾಗೂ ಸಲಕರಣೆಗಳನ್ನು ಬೆಳಗಾವಿ ಡಿಸಿಪಿ ರೋಹನ್‌ ಜಗದೀಶ್‌ ಅವರು ಸೋಮವಾರ ಮಾರ್ಕೆಟ್‌ ಠಾಣೆ ಎದುರು ಪ್ರದರ್ಶಿಸಿದರು – ಪ್ರಜಾವಾಣಿ ಚಿತ್ರ   

ಬೆಳಗಾವಿ: ಸರ್ಕಾರಿ ಕಾಲೇಜುಗಳಲ್ಲಿ ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ವಿದ್ಯಾರ್ಥಿಗಳನ್ನು ವಂಚಿಸುತ್ತಿದ್ದ ಜಾಲವನ್ನು  ಪತ್ತೆ ಮಾಡಿದ ಬೆಳಗಾವಿ ಪೊಲೀಸರು, ತೆಲಂಗಾಣದ ರಂಗಾರೆಡ್ಡಿ ಜಿಲ್ಲೆ ಗಚ್ಚಿಭೌಳಿಯ ಅರಗೊಂಡ ಅರವಿಂದ ಅಲಿಯಾಸ್‌ ಅರುಣಕುಮಾರ್ ಅರಗೊಂಡ ಪ್ರಕಾಶಂ (47) ಎಂಬ ಆರೋಪಿಯನ್ನು ಮುಂಬೈಯಲ್ಲಿ ಬಂಧಿಸಿದ್ದಾರೆ.

‘ಆರೋಪಿಯಿಂದ ₹12 ಲಕ್ಷ ಹಣ, 5 ಮೊಬೈಲ್, 15 ಸಿಪಿಯು ಮಾನಿಟರ್, 1 ಲ್ಯಾಪ್‌ಟಾಪ್, ತಲಾ ಮೂರು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್, 12 ಅಡಾಪ್ಟರ್, 1 ಬಯೋಮೆಟ್ರಿಕ್ ಹಾಗೂ 1 ಡಿವಿಆರ್ ವಶಪಡಿಸಿಕೊಳ್ಳಲಾಗಿದೆ. ಆತನ ವಿರುದ್ಧ ಈಗಾಗಲೇ ತೆಲಂಗಾಣದಲ್ಲಿ 6, ಭೂಪಾಲ್‌ನಲ್ಲಿ 1, ಬೆಂಗಳೂರಿನ ಅಶೋಕ ನಗರ ಹಾಗೂ ಆರ್.ಟಿ.ನಗರದ ಪೊಲೀಸ್ ಠಾಣೆಯಲ್ಲಿ ತಲಾ 1 ಪ್ರಕರಣ ದಾಖಲಾಗಿವೆ’ ಎಂದು ಡಿಸಿಪಿ ರೋಹನ್‌ ಜಗದೀಶ್‌ ತಿಳಿಸಿದ್ದಾರೆ.

‘ನೀಟ್‌ನಲ್ಲಿ ಕಡಿಮೆ ಅಂಕ ಪಡೆದಿದ್ದರೂ ಸರ್ಕಾರಿ ಕಾಲೇಜಿನಲ್ಲಿ ಎಂಬಿಬಿಎಸ್‌ ಸೀಟ್‌ ಕೊಡಿಸುವುದಾಗಿ ಹಣ ಪಡೆದು ವಿದ್ಯಾರ್ಥಿಗಳನ್ನು ನಂಬಿಸಿದ್ದ ಆರೋಪಿ ಎಂಬಿಎ ಪದವೀಧರ. ಕೆಲ ಜಿಲ್ಲಾ ಕೇಂದ್ರಗಳಲ್ಲಿ ಹೈಟೆಕ್‌ ಕಚೇರಿಗಳನ್ನು ತೆರೆದು,  ‘ನೀಟ್‌’ ತರಬೇತಿ ನೀಡುವುದಾಗಿ ನಂಬಿಸಿದ್ದ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಜಾಲ ಪತ್ತೆಯಾಗಿದ್ದು ಹೇಗೆ?: 2023ರಲ್ಲಿ ಬೆಳಗಾವಿಯಲ್ಲಿ ನೀಟ್‌ ಮಾರ್ಗದರ್ಶನ ಕೇಂದ್ರ ತೆರೆದಿದ್ದ ಆರೋಪಿ, ಎಂಬಿಬಿಎಸ್‌ ಸೀಟ್‌ ಕೊಡಿಸುವುದಾಗಿ ಬೀದರ್‌ನ ವಿದ್ಯಾರ್ಥಿನಿಯಿಂದ ₹3.75 ಲಕ್ಷ ಪಡೆದಿದ್ದ. 10 ವಿದ್ಯಾರ್ಥಿಗಳಿಂದ ಒಟ್ಟು ₹ 1.31 ಕೋಟಿ ಹಣ ಪಡೆದು ಪರಾರಿಯಾಗಿದ್ದ. ಒಬ್ಬ ವಿದ್ಯಾರ್ಥಿನಿ ಕಳೆದ ನವೆಂಬರ್‌ನಲ್ಲಿ ಇಲ್ಲಿನ ಮಾರ್ಕೆಟ್‌ ಠಾಣೆಗೆ ದೂರು ನೀಡಿದ್ದರು.

ಆರು ತಿಂಗಳಿಂದ ಹುಡುಕಾಡಿದ ಪೊಲೀಸರಿಗೆ ಆರೋಪಿ ಮುಂಬೈನಲ್ಲಿರುವುದು ಗೊತ್ತಾಯಿತು. ವಿಶೇಷ ತಂಡ ಅಲ್ಲಿಗೆ ಭೇಟಿ ನೀಡಿದಾಗ ‘ಅದ್ವಯ ವಿದ್ಯಾ ಪ್ರವೇಶ ಮಾರ್ಗದರ್ಶಕ ಪ್ರೈ.ಲಿ’ ಎಂಬ ಹೆಸರಲ್ಲಿ ನೀಟ್ ಮಾರ್ಗದರ್ಶನ ಸೆಂಟರ್‌ ನಡೆಸುತ್ತಿರುವುದು ಖಾತ್ರಿಯಾಗಿತ್ತು.

ನೀಟ್‌ ಮಾರ್ಗದರ್ಶನ ಹೆಸರಿನಲ್ಲಿ ವಂಚಿಸುತ್ತಿದ್ದ ಜಾಲ ದೊಡ್ಡದಿದೆ. ಇನ್ನಷ್ಟು ತನಿಖೆ ಆಗಬೇಕಿದೆ. ಜಾಲ ಪತ್ತೆ ಮಾಡಿದ ತಂಡಕ್ಕೆ ಬಹುಮಾನ ನೀಡಲಾಗುವುದು
– ರೋಹನ್ ಜಗದೀಶ, ಡಿಸಿಪಿ, ಕಾನೂನು ಮತ್ತು ಸುವ್ಯವಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.