ಬೆಳಗಾವಿ: ವಿಶ್ವ ಬ್ಯಾಂಕ್ ನೆರವಿನೊಂದಿಗೆ ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆಯಲ್ಲಿ ನಗರದಲ್ಲಿ ಅನುಷ್ಠಾನಗೊಳ್ಳುತ್ತಿರುವ 24x7 ನಿರಂತರ ನೀರು ಸರಬರಾಜು ಯೋಜನೆಯ ಭಾಗವಾಗಿ ನೆಲಮಟ್ಟದ ಹಾಗೂ ಮೇಲ್ಮಟ್ಟದ ಜಲಸಂಗ್ರಹಗಾರ ಮತ್ತು ಪಂಪ್‌ಹೌಸ್ ನಿರ್ಮಾಣಕ್ಕೆ ಹೊರವಲಯದ ಬಸವನಕೊಳ್ಳದಲ್ಲಿ ಚಾಲನೆ ನೀಡಲಾಗಿದೆ.
ಸಂಸದೆ ಮಂಗಲಾ ಅಂಗಡಿ ಹಾಗೂ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಪೂಜೆ ಸಲ್ಲಿಸಿ ಬುಧವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಬೆನಕೆ, ‘ದಿನದ 24 ಗಂಟೆಯೂ ನೀರು ಪೂರೈಸಬೇಕು ಎನ್ನುವುದು ನಗರದ ಎಲ್ಲ ಬಡಾವಣೆಗಳ ಜನರ ಬಹುದಿನಗಳ ಬೇಡಿಕೆಯಾಗಿದೆ. ಅದಕ್ಕೆ ತಕ್ಕಂತೆ ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸಲಾಗಿದೆ. ಪ್ರಸ್ತುತ 10 ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ. ನೀರು ಪೂರೈಕೆಯಲ್ಲಿ ಸುಧಾರಣಾ ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಭವಿಷ್ಯದಲ್ಲಿ ಇಲ್ಲಿನ 9 ಲಕ್ಷ ಜನರಿಗೆ ಅನುಕೂಲ ಕಲ್ಪಿಸಬಹುದಾಗಿದೆ. ಇದಕ್ಕಾಗಿ ಒಟ್ಟು ₹ 804 ಕೋಟಿ ವಿನಿಯೋಗಿಸಲಾಗುತ್ತಿದೆ’ ಎಂದು ತಿಳಿಸಿದರು.
‘ಜನರಿಗೆ ಎಲ್ಲ ರೀತಿಯ ಮೂಲ ಸೌಲಭ್ಯ ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ನಾವು ಮಾಡಿದ್ದೇವೆ. ಹಿಡಕಲ್ ಡ್ಯಾಂನಿಂದ ಬೆಳಗಾವಿಗೆ ನೀರು ತರಲು ₹31 ಕೋಟಿ ವೆಚ್ಚದಲ್ಲಿ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಶೀಘ್ರದಲ್ಲೇ ಈ ಯೋಜನೆ ಪೂರ್ಣಗೊಳಿಸಲಾಗುವುದು’ ಎಂದು ಹೇಳಿದರು.
‘ಈಗಾಗಲೇ 30 ಎಂಎಲ್‌ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕವಿದೆ. ಈಗ 31 ಎಂಎಲ್‌ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕಕ್ಕೆ ಪೂಜೆ ನೆರವೇರಿಸಲಾಗಿದೆ. ತ್ವರಿತವಾಗಿ ನಿರ್ಮಿಸಲಾಗುವುದು’ ಎಂದರು.
‘ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆಯು ತ್ವರಿತವಾಗಿ ಪೂರ್ಣಗೊಂಡು ನಗರದ ಜನರು ಸೌಲಭ್ಯ ಪಡೆಯುವಂತಾಗಲಿ’ ಎಂದು ಸಂಸದೆ ಮಂಗಲಾ ಆಶಿಸಿದರು.
ಮಹಾನಗರ ಪಾಲಿಕೆಯ ಆಯುಕ್ತ ರುದ್ರೇಶ ಘಾಳಿ, ಬಿಜೆಪಿ ಮುಖಂಡರಾದ ಮಹಾದೇವ ಕೆ. ರಾಠೋಡ, ಮುರುಘೇಂದ್ರಗೌಡ ಪಾಟೀಲ, ಭೈರೇಗೌಡ ಪಾಟೀಲ, ಬಸಪ್ಪ ಚಿಕ್ಕಲದಿನ್ನಿ, ನಗರಪಾಲಿಕೆ ಸದಸ್ಯ ರಾಜಶೇಖರ ಡೋಣಿ, ಕೆಆರ್‌ಡಿಎಸ್ ಅಧಿಕಾರಿ ಪ್ರಭಾಕರ ಶೆಟ್ಟಿ, ಎಲ್ ಅಂಡ್ ಟಿ ಕಂಪನಿಯ ಅಧಿಕಾರಿ ಹರಿಕಾಂತ ದೇಸಾಯಿ ಇದ್ದರು.
ಯೋಜನೆಯ ವಿವರ
* ಯೋಜನೆಯಲ್ಲಿ ಪ್ರಾಯೋಗಿಕವಾಗಿ ನಗರಪಾಲಿಕೆಯ 10 ವಾರ್ಡ್‌ಗಳಲ್ಲಿ ದಿನದ 24 ಗಂಟೆಯೂ ನಿರಂತರವಾಗಿ ನೀರು ಪೂರೈಸುವ ವ್ಯವಸ್ಥೆ ಕಲ್ಪಿಸಲಾಗಿದೆ.
* ಇದುವರೆಗೆ 11,378 ನೀರಿನ ಸಂಪರ್ಕ ನೀಡಲಾಗಿದ್ದು, 1,17,246 ಜನರು ಯೋಜನೆಯ ಲಾಭವನ್ನು 2008ರಿಂದ ಪಡೆಯುತ್ತಿದ್ದಾರೆ. ನೀರು ಪೂರೈಕೆ ವ್ಯವಸ್ಥೆಯಲ್ಲಿ ಸುಧಾರಣೆ ಸಾಧಿಸಲಾಗಿದೆ. ನೀರು ಪೋಲಾಗುವಿಕೆ ಪ್ರಮಾಣ ತಗ್ಗಿದೆ.
* ಶೇ.100ರಷ್ಟು ಸಂಪರ್ಕಗಳಿಗೆ ಮೀಟರ್ ಅಳವಡಿಸಲಾಗಿದ್ದು, ಶೇ 90ರಷ್ಟು ಕರ ವಸೂಲಾತಿ ಸಾಧಿಸಲಾಗಿದೆ.
* ನಿರಂತರ ಒತ್ತಡ ಸಹಿತ ನೀರು ಸರಬರಾಜಿನಿಂದ ಪಂಪ್ ಬಳಸುವ ಅಗತ್ಯ ಇರುವುದಿಲ್ಲ. ಹೀಗಾಗಿ, ಗ್ರಾಹಕರ ವಿದ್ಯುತ್ ಬಿಲ್‌ನಲ್ಲಿ ಶೇ.20ರಷ್ಟು ಉಳಿತಾಯ ಗಮನಿಸಲಾಗಿದೆ.
* ಯೋಜನೆಯಲ್ಲಿ ಎಲ್ಲ 58 ವಾರ್ಡ್‌ಗಳಲ್ಲೂ ನಿರಂತರ ನೀರು ಸರಬರಾಜು ಮಾಡಲಾಗುತ್ತದೆ. 2053ರಲ್ಲಿ ನಗರದಲ್ಲಿರಬಹುದಾದ ಜನಸಂಖ್ಯೆಗೆ ಅನುಗುಣವಾಗಿ ತಯಾರಿಸಲಾಗಿದೆ. 9.67 ಲಕ್ಷ ಜನರಿಗೆ 184 ಎಂಎಲ್‌ಡಿ ನೀರು ಬೇಕಾಗುತ್ತದೆ. ಹಾಲಿ ಇರುವ 2 ಜಲಾಶಯಗಳಿಂದ 136 ಎಂಎಲ್‌ಡಿ ನೀರು ಲಭ್ಯವಿದೆ. ಹೆಚ್ಚುವರಿ 48 ಎಂಎಲ್‌ಡಿ ಸಲುವಾಗಿ ಹಿಡಕಲ್ ಜಲಾಶಯದಿಂದ ಹಂಚಿಕೆಗೆ ನೀರಾವರಿ ಇಲಾಖೆಯಿಂದ ಅನುಮೋದನೆ ಪಡೆಯಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.