ADVERTISEMENT

ಸಂತೋಷ್ ಪಾಟೀಲ ಪತ್ನಿಗೆ ಸರ್ಕಾರಿ ನೌಕರಿ, ಬಿಲ್ ಕೊಡಿಸಲು ಕ್ರಮ: ಮುರುಗೇಶ ನಿರಾಣಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2022, 2:43 IST
Last Updated 16 ಏಪ್ರಿಲ್ 2022, 2:43 IST
ಮುರುಗೇಶ ನಿರಾಣಿ
ಮುರುಗೇಶ ನಿರಾಣಿ   

ಬೆಳಗಾವಿ: ‘ಸಂತೋಷ್ ಪಾಟೀಲ ಒಳ್ಳೆಯ ಕಾರ್ಯಕರ್ತರಾಗಿದ್ದರು. ಚೆನ್ನಾಗಿ ಕೆಲಸ ಮಾಡಿದ್ದಾರೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ತಾಲ್ಲೂಕಿನ ಬಡಸ ಕೆ.ಎಚ್. ಗ್ರಾಮದಲ್ಲಿ ಸಂತೋಷ್ ಕುಟುಂಬದವರಿಗೆ ಗುರುವಾರ ರಾತ್ರಿ ಸಾಂತ್ವನ ಹೇಳಿ, ವೈಯಕ್ತಿಕವಾಗಿ ₹ 5 ಲಕ್ಷ ಧನಸಹಾಯ (ಚೆಕ್) ನೀಡಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಅವರನ್ನು ಕಳೆದುಕೊಂಡ ಕುಟುಂಬ ತೊಂದರೆಗೆ ಸಿಲುಕಬಾರದೆಂಬ ದೃಷ್ಟಿಯಿಂದ, ಬಿಎ ಪದವೀಧರೆಯಾದ ಪತ್ನಿ ಜಯಶ್ರೀ ಪಾಟೀಲ ಅವರಿಗೆ ಸರ್ಕಾರಿ ನೌಕರಿ ಕೊಡಬೇಕು ಮತ್ತು ಸಂತೋಷ್ ಮಾಡಿದ್ದ ಕೆಲಸಗಳನ್ನು ಅಧಿಕಾರಿಗಳಿಂದ ತನಿಖೆ ಮಾಡಿಸಿ, ಕ್ರಮಬದ್ಧಗೊಳಿಸಿ ₹ 4 ಕೋಟಿ ಬಿಲ್ ಕೊಡಿಸಲಾಗುವುದು’ ಎಂದು ಭರವಸೆ ನೀಡಿದರು. ‘ಈ ಕುರಿತ ನನ್ನ ಮನವಿಗೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಹೇಳಿದರು.

ADVERTISEMENT

‘ನಮ್ಮ ಸರ್ಕಾರ ಬರಲು ಪ್ರಮುಖ ಕಾರಣಕರ್ತರಾದವರಲ್ಲಿ ಕೆ.ಎಸ್. ಈಶ್ವರಪ್ಪ ಒಬ್ಬರು. ಸಂಘಟನೆಗೆ ಬಹಳ ದುಡಿದಿದ್ದಾರೆ. ಈಗ, ಪಕ್ಷದ ವರ್ಚಸ್ಸಿಗೆ ಧಕ್ಕೆ ಬಾರದಿರಲೆಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದಾರೆ. ಪಕ್ಷದ ಮೇಲಿನ ಗೌರವ–ನಂಬಿಕೆಯಿಂದ ಸ್ವಇಚ್ಛೆಯಿಂದ ಈ ತೀರ್ಮಾನ ಮಾಡಿದ್ದಾರೆ. ಅವರಿಂದ ತಪ್ಪು ನಡೆದಿಲ್ಲ ಎನ್ನುವುದು ಈ ಮೂಲಕ ಸ್ಪಷ್ಟವಾಗಿ ಗೊತ್ತಾಗುತ್ತದೆ’ ಎಂದು ಸಮರ್ಥಿಸಿಕೊಂಡರು.

ಪಕ್ಷದ ಮುಖಂಡ ಮಹಾಂತೇಶ ಕವಟಗಿಮಠ ಜೊತೆಗಿದ್ದರು. ಸಚಿವರು ಬುಧವಾರವೂ ಇಲ್ಲಿನ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.