ಬೆಳಗಾವಿ: ‘ಮಹಿಳೆಯರು ಕುಟುಂಬದ ಸಂಪೂರ್ಣ ಜವಾಬ್ದಾರಿ ವಹಿಸುವ ಭರದಲ್ಲಿ ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ತಮ್ಮ ಮನಸಿಗೆ ಆಹ್ಲಾದ ನೀಡುವ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸದೃಢವಾಗಿ ಉಳಿಸಿಕೊಳ್ಳಲು ಸಾಧ್ಯ’ ಎಂದು ಹೋಮಿಯೋಪತಿ ವೈದ್ಯೆ ಸೋನಾಲಿ ಸರ್ನೋಬತ್ ಸಲಹೆ ನೀಡಿದರು.
ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ(ರಿ) ನಗರದಲ್ಲಿ ಬುಧವಾರ ಆಯೋಜಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಇಂದಿನ ದಿನದಲ್ಲಿ ಸಾಮಾಜಿಕ ಜಾಲತಾಣಗಳ ಬೆನ್ನು ಬಿದ್ದು ನಾವು ಚಟುವಟಿಕೆಗಳಿಂದ ದೂರವಾಗುತ್ತಿದ್ದೇವೆ. ಮೊಬೈಲ್ ಹಿಡಿದು ಕುಳಿತಲ್ಲೇ ಕುಳಿತುಕೊಳ್ಳುವುದರಿಂದ ದೈಹಿಕ ವ್ಯಾಯಾಮ ಇಲ್ಲದೆ ಶರೀರದಲ್ಲಿ ರೋಗ ಹೆಚ್ಚುತ್ತಿದೆ. ದಿನವೂ ವಾಕಿಂಗ್, ಯೋಗ ಮತ್ತು ಧ್ಯಾನದ ಜತೆಜತೆಗೆ ಉತ್ತಮ ಪುಸ್ತಕಗಳ ಓದು ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಸಹಕಾರಿ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ನೀಲಗಂಗಾ ಚರಂತಿಮಠ ಮಾತನಾಡಿ, ‘ಯಾವುದೇ ಕಥೆ ರಚಿಸುವಾಗ ಕತೆಗಾರ ಪ್ರತಿಯೊಂದು ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಬೇಕು. ಯಾವ ಪ್ರದೇಶದ ಕಥೆ ಬರೆಯುವನೋ ಅಲ್ಲಿನ ಬಗ್ಗೆ ತಿಳಿದುಕೊಳ್ಳಬೇಕು’ ಎಂದು ಹೇಳಿದರು.
ಕಂಪಾ ಸೋಮಶೇಖರರಾವ್ ದತ್ತಿ ದಾನಿಗಳಾದ ಕೀರ್ತಿ ಶೇಖರ ಕಾಸರಗೋಡು, ದುರದುಂಡೇಶ್ವರ ಸಿದ್ದಯ್ಯ ಮಲ್ಲಾಪುರ ದತ್ತಿ ದಾನಿಗಳಾದ ಸುಮಿತ್ರಾ ಮಲ್ಲಾಪುರ, ಸರಸ್ವತಿಶ್ರೀ ದೇಸಾಯಿ ದತ್ತಿದಾನಿಗಳಾದ ರೇಖಾ ಶ್ರೀನಿವಾಸ, ಮಲ್ಲಪ್ಪ ಮುದುಕಪ್ಪ ಚೌಗಲೆ ದತ್ತಿ ದಾನಿಗಳಾದ ಹೀರಾ ಚೌಗಲೆ ವೇದಿಕೆಯಲ್ಲಿದ್ದರು.
ಸಂಘದ ಸದಸ್ಯೆಯರಿಗಾಗಿ ಕಿರುಕಥಾ ಸ್ಪರ್ಧೆ ಆಯೋಜಿಸಲಾಗಿತ್ತು. ಸಂಘದ ಕಾರ್ಯದರ್ಶಿ ಭಾರತಿ ಮಠದ ಅತಿಥಿಗಳನ್ನು ಸ್ವಾಗತಿಸಿದರು. ಅನ್ನಪೂರ್ಣಾ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಸುಮಾ ಕಿತ್ತೂರು ಜಾನಪದ ಗೀತೆ ಹಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.