ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಾಮೂಹಿಕ ಅಗ್ನಿಹೋತ್ರ ಕಾರ್ಯಕ್ರಮವನ್ನು ಶನಿವಾರ ನಡೆಸಲಾಗಿದೆ.
ನಿಲ್ದಾಣದ ನಿರ್ದೇಶಕ ರಾಜೇಶಕುಮಾರ್ ಮೌರ್ಯ ನೇತೃತ್ವದಲ್ಲಿ ಎಕ್ಸ್‌ಪರ್ಟ್ ವಾಲ್ವ್ಸ್ ಇಂಡಿಯಾ ಪ್ರೈ.ಲಿ. ಸಿಎಂಡಿ ವಿನಾಯಕ ಲೋಕೂರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನೆರವೇರಿದೆ. ಮಹಿಳೆಯರೂ ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಸಣ್ಣ ಸಣ್ಣ ಅಗ್ನಿಕುಂಡಗಳನ್ನು ಇಟ್ಟುಕೊಂಡು ಅಗ್ನಿಹೋತ್ರದ ಹೋಮ–ಹವನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಫೋಟೊ ಹಾಗೂ ವಿಡಿಯೊಗಳನ್ನು ನಿಲ್ದಾಣದ ನಿರ್ದೇಶಕರೆ ನಿಲ್ದಾಣದ ಟ್ವಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
‘ವಾತಾವರಣದ ಶುದ್ಧಿಗೆ ಅಗ್ನಿಹೋತ್ರ ಚಟುವಟಿಕೆ ಸಹಕಾರಿಯಾಗಿದೆ. ಇದು ದೇಶದ ಪ್ರಾಚೀನ ಸಂಪ್ರದಾಯವಾಗಿದೆ. ಅಧಿಕಾರಿಗಳು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿನಾಯಕ ಲೋಕೂರ ತಂಡದವರು ಪಾಲ್ಗೊಂಡಿದ್ದರು. ಮುಂದೆಯೂ ಆಗಾಗ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದು ವಿಡಿಯೊದಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ನಿರ್ದೇಶಕ ರಾಜೇಶ್‌ಕುಮಾರ್ ಮೌರ್ಯ, 'ಆ ಕಾರ್ಯಕ್ರಮ ವೈಯಕ್ತಿಕ ಹಿತಾಸಕ್ತಿಯದ್ದೇನಲ್ಲ. ವಿಮಾನನಿಲ್ದಾಣ ಪ್ರಾಧಿಕಾರದಿಂದ ನಿರ್ದೇಶನವೂ ಇರಲಿಲ್ಲ. ಅಗ್ನಿಹೋತ್ರದಿಂದ ವಾತಾವರಣ ಶುದ್ಧಿಯಾಗುತ್ತದೆ ಎನ್ನುವುದು ವೈಜ್ಞಾನಿಕವಾಗಿ ರುಜುವಾತಾಗಿದೆ. ಹೀಗಾಗಿ, ನಮ್ಮ ಸಂಪ್ರದಾಯವೂ ಆಗಿರುವ ಅ ಕಾರ್ಯಕ್ರಮವನ್ನು ಸದುದ್ದೇಶದಿಂದ ನಡೆಸಿದ್ದೇವೆ. ಸ್ಥಳೀಯರನ್ನು ಒಳಗೊಳ್ಳುವ ಚಟುವಟಿಕೆಯ ಭಾಗವಾಗಿಯೂ ಮಾಡಿದ್ದೇವೆ' ಎಂದು ತಿಳಿಸಿದರು.
'ಇದನ್ನು ಇತರ ವಿಮಾನನಿಲ್ದಾಣದವರೂ ಅನುಸರಿಸಬಹುದು. ಇದರಲ್ಲಿ ನಿಯಮ ಉಲ್ಲಂಘನೆ ಪ್ರಶ್ನೆಯೇ ಬರುವುದಿಲ್ಲ' ಎಂದು ಹೇಳಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.