ADVERTISEMENT

‘ಹೊಸ ಟರ್ಮಿನಲ್‌ನಿಂದ ಬೆಳಗಾವಿಗೆ ಶಕ್ತಿ’

ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್‌ ಯೋಜನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2024, 14:13 IST
Last Updated 10 ಮಾರ್ಚ್ 2024, 14:13 IST
ಬೆಳಗಾವಿ ತಾಲ್ಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭಾನುವಾರ ನಡೆದ ಹೊಸ ಟರ್ಮಿನಲ್‌ಗೆ ಚಾಲನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್‌ ಮೂಲಕ ಮಾತನಾಡಿದರು
ಬೆಳಗಾವಿ ತಾಲ್ಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭಾನುವಾರ ನಡೆದ ಹೊಸ ಟರ್ಮಿನಲ್‌ಗೆ ಚಾಲನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್‌ ಮೂಲಕ ಮಾತನಾಡಿದರು   

ಬೆಳಗಾವಿ: ‘ನೆರೆಯ ಮಹಾರಾಷ್ಟ್ರ ಮತ್ತು ಗೋವಾದೊಂದಿಗೆ ಗಡಿ ಹಂಚಿಕೊಂಡಿರುವ ಬೆಳಗಾವಿ ಮೂರು ರಾಜ್ಯಗಳಿಗೆ ಕೇಂದ್ರಸ್ಥಾನವಾಗಿದೆ. ಹೊಸ ಟರ್ಮಿನಲ್ ನಿರ್ಮಾಣದಿಂದ ಸಂಪರ್ಕ ವ್ಯವಸ್ಥೆ ಸುಧಾರಿಸಲಿದ್ದು, ಎಲ್ಲ ದೃಷ್ಟಿಯಿಂದಲೂ ಬೆಳಗಾವಿಗೆ ಶಕ್ತಿ ಬರಲಿದೆ’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ತಾಲ್ಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭಾನುವಾರ ನಡೆದ ₹357 ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ಹೊಸ ಟರ್ಮಿನಲ್ ನಿರ್ಮಾಣ ಯೋಜನೆಗೆ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಐತಿಹಾಸಿಕ ನೆಲವಾದ ಬೆಳಗಾವಿಯಲ್ಲಿ ಭಾರತೀಯ ವಾಯುದಳ, ಮರಾಠಾ ಲಘು‌ಪದಾತಿ ದಳ ಸೇರಿದಂತೆ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಘಟಕಗಳಿವೆ. ಈ ಮಹಾನಗರದ ಬೆಳವಣಿಗೆಗೆ ಪೂರಕವಾದ ಎಲ್ಲ ಅವಕಾಶಗಳು ಇವೆ’ ಎಂದ ಅವರು, ‘ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾದರಿಯಲ್ಲಿ ಸಾಂಬ್ರಾ ನಿಲ್ದಾಣದ ಮುಂಭಾಗಕ್ಕೆ ವಿಶೇಷ ವಿನ್ಯಾಸ ಮಾಡಬೇಕು. ನಿಲ್ದಾಣ ಪ್ರವೇಶಿಸಿದ ತಕ್ಷಣ, ಪ್ರಯಾಣಿಕರಿಗೆ ಬೆಳಗಾವಿ ಜಿಲ್ಲೆಯ ಸಮಗ್ರ ಇತಿಹಾಸ ತಿಳಿಯಬೇಕು. ಈ ದಿಸೆಯಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

‘ಬ್ರಿಟಿಷರ ವಿರುದ್ಧ ವೀರರಾಣಿ ಕಿತ್ತೂರು ಚನ್ನಮ್ಮ ತನ್ನ ಸಂಸ್ಥಾನದೊಂದಿಗೆ ಹೋರಾಡಿ, ವಿಜಯ ಗಳಿಸಿದ ಐತಿಹಾಸಿಕ ಕ್ಷಣಕ್ಕೆ ಇದೇವರ್ಷ 200 ವಸಂತ ತುಂಬಲಿದೆ. ಇದರ ಸವಿನೆನಪಿಗಾಗಿ ಸಾಂಬ್ರಾ ವಿಮಾ‌ನ ನಿಲ್ದಾಣಕ್ಕೆ ರಾಣಿ ಚನ್ನಮ್ಮನ ಹೆಸರು ನಾಮಕಾರಣ ಮಾಡಬೇಕು. ನಿಲ್ದಾಣದ ಆವರಣದಲ್ಲಿ ಚನ್ನಮ್ಮನ ಪ್ರತಿಮೆ ಪ್ರತಿಷ್ಠಾಪಿಸಬೇಕು’ ಎಂದು ಆಗ್ರಹಿಸಿದರು.

‘ಹೆಚ್ಚಿನ ಪ್ರಯಾಣಿಕರು ಸಂಚರಿಸುತ್ತಿರುವ ರಾಜ್ಯದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಬೆಂಗಳೂರು, ಮಂಗಳೂರು ಬಿಟ್ಟರೆ, ಸಾಂಬ್ರಾ ಸ್ಥಾನ ಪಡೆದಿದೆ. ಇಲ್ಲಿಂದ ವಿವಿಧ ಮಹಾನಗರಗಳಿಗೆ ವಿಮಾನ ಸೇವೆ ವಿಸ್ತರಿಸುವ ಕುರಿತಾಗಿ ಸಂಬಂಧಿತರಿಗೆ ಮನವಿ ಸಲ್ಲಿಸಿದ್ದೇವೆ. ಮುಂದಿನ ದಿನಗಳಲ್ಲಿ ಬೆಳಗಾವಿ ಲಾಜಿಸ್ಟಿಕ್ ಹಬ್ ಆಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಸದೆ ಮಂಗಲಾ ಅಂಗಡಿ, ‘ಸಾಂಬ್ರಾ ವಿಮಾನ ನಿಲ್ದಾಣದ ಅಭಿವೃದ್ಧಿಗೆ ನನ್ನ ಪತಿ, ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿ ನಿರಂತರವಾಗಿ ಶ್ರಮಿಸಿದ್ದರು. ಭವಿಷ್ಯದಲ್ಲಿ ಈ ನಿಲ್ದಾಣ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆ. ಹೊಸ ಟರ್ಮಿನಲ್‌ನಿಂದ ಪ್ರಯಾಣಿಕರಿಗೆ ಹೆಚ್ಚಿನ ಸೌಕರ್ಯ ಸಿಗಲಿವೆ’ ಎಂದು ಹೇಳಿದರು.

ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ‘ದೇಶದ ಹಳೆಯ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ಸಾಂಬ್ರಾ ನಿಲ್ದಾಣದ ಸುಧಾರಣೆಗೆ ಸಂಬಂಧಿಸಿ, 2013ರಲ್ಲಿ ಆಗಿನ ಕೇಂದ್ರ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಅವರಿಗೆ ಮನವಿ ಸಲ್ಲಿಸಿದ್ದೆ. ಆಗ ವಿವಿಧ ಅಭಿವೃದ್ಧಿ ಕಾಮಗಾರಿ ನಡೆದವು. ಈಗ ಹೊಸ ಟರ್ಮಿನಲ್ ಕಾಮಗಾರಿಗೆ ಚಾಲನೆ ಸಿಕ್ಕಿರುವುದು ಸಂತಸದ ವಿಚಾರ. ನಿಗದಿತ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದರು.

ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಯೋಜನೆಗೆ ಚಾಲನೆ ಕೊಟ್ಟರು. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ, ಮೇಯರ್ ಸವಿತಾ ಕಾಂಬಳೆ, ವಿಮಾನ‌ ನಿಲ್ದಾಣ ನಿರ್ದೇಶಕ ಎಸ್‌.ತ್ಯಾಗರಾಜನ್‌, ಕಾರ್ಯನಿರ್ವಾಹಕ ನಿರ್ದೇಶಕ(ಆಪರೇಷನ್‌) ಎಸ್‌.ಎಸ್‌.ರಾಜು ಇತರರಿದ್ದರು.

ಹೆಬ್ಬಾಳಕರಗಿಲ್ಲ ಆಹ್ವಾನ:

ಸಾಂಬ್ರಾ ವಿಮಾನ ನಿಲ್ದಾಣ ಬೆಳಗಾವಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ಆದರೆ ಹೊಸ ಟರ್ಮಿನಲ್‌ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಗ್ರಾಮೀಣ ಕ್ಷೇತ್ರದ ಶಾಸಕಿಯೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಆಹ್ವಾನ ನೀಡದಿರುವುದು ಚರ್ಚೆಗೆ ಗ್ರಾಸವಾಯಿತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.