ಬೆಳಗಾವಿ: ಇಲ್ಲಿನ ತಹಶೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಯಡವಣ್ಣವರ (35) ಅವರುಮಂಗಳವಾರ ಬೆಳಿಗ್ಗೆ ತಹಶೀಲ್ದಾರ್ ಮೇಜಿನ ಎದುರೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
‘ನನ್ನ ಸಾವಿಗೆ ತಹಶೀಲ್ದಾರ್ ಬಸವರಾಜ ನಾಗರಾಳ, ಇನ್ನೊಬ್ಬ ಅಧಿಕಾರಿ ಅಶೋಕ ಕಬ್ಬಲಿಗೇರ ಮತ್ತು ಸೋಮು ಎಂಬ ವ್ಯಕ್ತಿಯೇ ನೇರ ಕಾರಣ. ನಮ್ಮ ಕಚೇರಿಯಲ್ಲಿ ತುಂಬ ಅನ್ಯಾಯ ನಡೆಯುತ್ತಿದೆ. ದಯವಿಟ್ಟು ಎಲ್ಲರೂ ಹೋರಾಡಿ’ ಎಂದು ರುದ್ರಣ್ಣ ಅವರು ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ವಾಟ್ಸ್‌ಆ್ಯಪ್ ಗ್ರೂಪಿನಲ್ಲಿ ಸಂದೇಶ ಹಾಕಿದ್ದಾರೆ. ಅದರೊಂದಿಗೆ ವರ್ಗಾವಣೆ ಆದೇಶ ಪ್ರತಿಯನ್ನೂ ಹಂಚಿಕೊಂಡಿದ್ದಾರೆ.
ರುದ್ರಣ್ಣ ಸೋಮವಾರ ಸಂಜೆ 7.31ಕ್ಕೆ ವಾಟ್ಸ್‌ಆ್ಯಪ್ ಗ್ರೂಪಿನಲ್ಲಿ ಈ ಸಂದೇಶ ಹಾಕಿದ್ದರು. ಒಂದು ನಿಮಿಷದ ಬಳಿಕ ತಹಶೀಲ್ದಾರರು ರುದ್ರಣ್ಣ ಅವರ ಮೊಬೈಲ್ ಸಂಖ್ಯೆಯನ್ನು ಗ್ರೂಪಿನಿಂದ ಹೊರಹಾಕಿದ್ದರು. ಅದರೆ, ಅವರನ್ನು ಕಾಪಾಡುವ ಗೋಜಿಗೆ ಯಾರೂ ಹೋಗಲಿಲ್ಲ.
‘ಮಂಗಳವಾರ ಬೆಳಿಗ್ಗೆ 7ರ ಸುಮಾರಿಗೆ ಕಚೇರಿಗೆ ಬಂದ ರುದ್ರಣ್ಣ, ತಹಶೀಲ್ದಾರ್ ಕೊಠಡಿಯ ಫ್ಯಾನ್‌ಗೆ ದುಪಟ್ಟಾದಿಂದ ನೇಣು ಹಾಕಿಕೊಂಡರು. ಬೆಳಿಗ್ಗೆ 10ರ ಬಳಿಕ ಬೇರೆ ಸಿಬ್ಬಂದಿ ಕಚೇರಿಗೆ ಬಂದಾಗಲೇ ವಿಷಯ ಗೊತ್ತಾಗಿದೆ’ ಎಂದು ಡಿಸಿಪಿ ರೋಹನ್ ಜಗದೀಶ ತಿಳಿಸಿದ್ದಾರೆ.
‘ರುದ್ರಣ್ಣ ಅವರ ಕೆಲಸದ ವೈಖರಿ ತೃಪ್ತಿದಾಯಕವಾಗಿಲ್ಲ. ಬೇರೆ ತಾಲ್ಲೂಕಿಗೆ ವರ್ಗಾವಣೆ ಮಾಡುವಂತೆ ತಹಶೀಲ್ದಾರರು ಜಿಲ್ಲಾಧಿಕಾರಿಗೆ ವರದಿ ನೀಡಿದ್ದರು. ಅದನ್ನು ಆಧರಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಸವದತ್ತಿ ಯಲ್ಲಮ್ಮ ಅಭಿವೃದ್ಧಿ ಮಂಡಳಿಗೆ ವರ್ಗಾವಣೆ ಮಾಡಿದ್ದರು. ನವೆಂಬರ್ 5ರಂದು ರುದ್ರಣ್ಣ ವರ್ಗಾವಣೆಯಾದ ಸ್ಥಳಕ್ಕೆ ಹಾಜರಾಗಬೇಕಿತ್ತು.
‘ನನಗೆ ಇಲ್ಲಿ ಕೆಲಸ ಮಾಡಲು ಆಗುತ್ತಿಲ್ಲ. ಸಾಹೇಬರು ಬಹಳ ಕಿರುಕುಳ ನೀಡುತ್ತಾರೆ. ಸಾಕಾಗಿ ಹೋಗಿದೆ ಎಂದು ಪದೇ ಪದೇ ಗೋಳಾಡುತ್ತಿದ್ದ ರುದ್ರಣ್ಣಗೆ ನಾವು ಧೈರ್ಯ ಹೇಳುತ್ತಲೇ ಇದ್ದೆವು. ಯಾರದೋ ತಪ್ಪಿಗೆ ಆತ ಹೆಣವಾದ’ ಎಂದು ರುದ್ರಣ್ಣ ತಾಯಿ ಮಲ್ಲವ್ವ, ಪತ್ನಿ ಗಿರಿಜಾ ಮತ್ತು ಸಹೋದರಿ ಸುದ್ದಿಗಾರರಿಗೆ ತಿಳಿಸಿದರು.
ರುದ್ರಣ್ಣ ಪತ್ನಿ ಗಿರಿಜಾ ಕೂಡ ಇದೇ ತಹಶೀಲ್ದಾರ್ ಕಚೇರಿಯಲ್ಲಿ ನೌಕರಿ ಮಾಡುತ್ತಿದ್ದರು. ಎರಡು ತಿಂಗಳ ಹಿಂದೆ ಅನಗೋಳ ಗ್ರಾಮ ಲೆಕ್ಕಾಧಿಕಾರಿಯಾಗಿ ಅವರನ್ನು ವರ್ಗಾವಣೆ ಮಾಡಲಾಗಿದೆ.
ಸಾವು ಬೆಳಿಗ್ಗೆ 7ರ ಸುಮಾರಿಗೆ ಸಂಭವಿಸಿದ್ದರೂ ಮಧ್ಯಾಹ್ನ 3.45ರವರೆಗೂ ಶವ ಹೊರತೆಗೆಯಲಿಲ್ಲ.
ಪೊಲೀಸರು ಎಂಟು ಗಂಟೆಗೂ ಹೆಚ್ಚು ಸಮಯ ಮಹಜರು ನಡೆಸಿದರು. ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವ ಹಸ್ತಾಂತರಿಸಲಾಯಿತು. ಖಡೇಬಜಾರ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಪ್ರಕರಣವನ್ನು ಅತಿ ಸೂಕ್ಷ್ಮವಾಗಿ, ಯಾವುದೇ ಒತ್ತಡವಿಲ್ಲದೇ ತನಿಖೆ ಮಾಡಲು ತಿಳಿಸಿದ್ದೇನೆ. ಪೊಲೀಸರಿಗೆ ಎಲ್ಲ ಸಹಕಾರ ನೀಡಲಾಗುವುದುಮೊಹಮ್ಮದ್ ರೋಷನ್, ಜಿಲ್ಲಾಧಿಕಾರಿ
ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪರ್ಸೆಂಟೇಜ್ ಅಂಗಡಿ ತೆಗೆದಿದ್ದಾರೆ. ರುದ್ರಣ್ಣ ಆತ್ಮಹತ್ಯೆಗೆ ಸಚಿವರ ಒತ್ತಡ ಕಾರಣ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಅವರು ರಾಜೀನಾಮೆ ನೀಡಬೇಕುಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಭ್ರಷ್ಟಾಚಾರದ ಪಾಪದ ಫಲ ತುಂಬಿದೆ. ಬೆಳಗಾವಿಯಲ್ಲಿ ಸಣ್ಣ ಕೆಲಸಕ್ಕೂ ಜನ ಲಂಚ ಕೊಡುವ ಪರಿಸ್ಥಿತಿ ಬಂದಿದೆ. ಸಮಗ್ರ ತನಿಖೆ ಆಗಲಿಬಸನಗೌಡ ಪಾಟೀಲ ಯತ್ನಾಳ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.