ADVERTISEMENT

₹2 ಕೋಟಿ ನಕಲಿ ಬಿಲ್‌: ರಾಜ್ಯ ಸರ್ಕಾರಕ್ಕೆ ದೂರು

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅವ್ಯವಹಾರ ಆರೋಪ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2023, 21:02 IST
Last Updated 22 ಡಿಸೆಂಬರ್ 2023, 21:02 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಳಗಾವಿ: ‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಈ ಹಿಂದಿನ ಉಪನಿರ್ದೇಶಕ ಆರ್‌.ನಾಗರಾಜ ₹2 ಕೋಟಿಗೂ ಅಧಿಕ ಮೊತ್ತದ ಸುಳ್ಳು ಬಿಲ್‌ ತೆಗೆದು ಅವ್ಯವಹಾರ ನಡೆಸಿದ್ದಾರೆ. ಅವರ ಮೇಲೆ ತನಿಖೆ ನಡೆಸಬೇಕು’ ಎಂದು ಇನ್ನೊಬ್ಬ ಉಪನಿರ್ದೇಶಕ ಎ.ಎಂ. ಬಸವರಾಜ್‌ ಅವರು ರಾಜ್ಯ ಸರ್ಕಾರಕ್ಕೆ ದೂರು ನೀಡಿದ್ದಾರೆ.

‘ಡಿ.20ರಂದು ನಾನು ಬೆಳಗಾವಿ ಗ್ರಾಮೀಣ, ರಾಮದುರ್ಗ, ಬೈಲಹೊಂಗಲ ಮತ್ತು ಸವದತ್ತಿ ಎಂಎಸ್‌ಪಿಸಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಇದಕ್ಕೂ ಮುನ್ನ ಉಪನಿರ್ದೇಶಕರಾಗಿದ್ದ ಆರ್‌.ನಾಗರಾಜ ಮತ್ತು ವಿಷಯ ನಿರ್ವಾಹಕ ವಿಕ್ರಮ್‌ ಸೇರಿ ಇದೇ ವರ್ಷದ ಅಕ್ಟೋಬರ್‌, ನವೆಂಬರ್‌ ತಿಂಗಳಲ್ಲಿ ಅವ್ಯವಹಾರ ಎಸಗಿದ್ದು ಗೊತ್ತಾಗಿದೆ. ಬೆಂಗಳೂರಿನ ರಾಜಾಜಿನಗರದ ಜಗಾದಿ ಎಂಟರ್‌ಪ್ರೈಸಸ್‌ ಹೆಸರಿನಲ್ಲಿ ಪೂರಕ ಪೌಷ್ಟಿಕ ಆಹಾರ ಪಡೆದಿದ್ದಾಗಿ ಸುಳ್ಳು ಬಿಲ್‌ ಸೃಷ್ಟಿಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘1,550 ಕೆ.ಜಿ ಶೇಂಗಾ ಬೀಜ ₹1.86 ಲಕ್ಷ, 900 ಕೆ.ಜಿ ಹುರಿಗಡಲೆ ₹89 ಸಾವಿರ, 2,150 ಕೆ.ಜಿ ಹೆಸರುಕಾಳು ₹2.36 ಲಕ್ಷ, 540 ಕೆ.ಜಿ ತೊಗರಿಬೇಳೆ ₹65 ಸಾವಿರ, 390 ಕೆ.ಜಿ ಹೆಸರುಬೇಳೆ ₹45 ಸಾವಿರ, ಉಪ್ಪು, ಬೆಲ್ಲ ಸೇರಿ ₹1.08 ಲಕ್ಷ ಹೀಗೆ ವಿವಿಧ ಸಾಮಗ್ರಿಗಳು ಸೇರಿ ಒಟ್ಟು ₹4.57 ಲಕ್ಷ ಬಿಲ್‌ ತೆಗೆಯಲಾಗಿದೆ. ಇದೇ ರೀತಿ ಬೆಳಗಾವಿ ಗ್ರಾಮೀಣದಲ್ಲಿ ಒಟ್ಟು ₹7.45 ಲಕ್ಷ, ರಾಮದುರ್ಗದಲ್ಲಿ ₹5.53 ಲಕ್ಷದ ಬಿಲ್‌ ತೆಗೆಯಲಾಗಿದೆ. ಈ ಎಲ್ಲ ಬಿಲ್‌ಗಳನ್ನು ನಾನು ಪರಿಶೀಲಿಸಿದ ಬಳಿಕ ಇವು ನಕಲಿ ಎಂದು ಕಂಡುಬಂದಿದೆ’ ಎಂದೂ ಬಸವರಾಜ್‌ ದೂರಿನಲ್ಲಿ ತಿಳಿಸಿದ್ದಾರೆ.

‘ಎಂಎಸ್‌‍ಪಿಸಿಗಳಲ್ಲೂ ಸಿಬ್ಬಂದಿಯನ್ನು ಹೆದರಿಸಿ, ಒತ್ತಾಯಪೂರ್ವಕವಾಗಿ ಪ್ರಮಾಣ ಪತ್ರಗಳಿಗೆ ಸಹಿ ಹಾಕಿಸಿದ್ದಾರೆ. ಸಂಬಂಧಪಟ್ಟ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ದೃಢೀಕರಿಸಿದ ಬಿಲ್‌ಗಳನ್ನು ತಯಾರಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬೆಂಗಳೂರು ಕಚೇರಿಗೆ ಸಲ್ಲಿಸಿ, ಸಹಿ ಪಡೆದಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಈ ಯೋಜನೆಯಡಿ ಕೇಂದ್ರ ಸರ್ಕಾರದಿಂದ ₹28.16 ಕೋಟಿ ಮತ್ತು ರಾಜ್ಯ ಸರ್ಕಾರದಿಂದ ₹28.22 ಕೋಟಿ ಜಿಲ್ಲೆಗೆ ಬಿಡುಗಡೆಯಾಗಿದೆ. ಎಲ್ಲವನ್ನೂ ಮರು ಪರಿಶೀಲಿಸಬೇಕಿದೆ. ಜಿಲ್ಲೆಯ ಎಲ್ಲ 14 ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ 9 ಮಹಿಳಾ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಘಟಕಗಳ ಮುಖಾಂತರ ಬಿಲ್‌ ತಯಾರಿಸಿದ್ದಾರೆ. ಆದರೆ, ಎಲ್ಲೂ ಪದಾರ್ಥಗಳ ‘ಸ್ಟಾಕ್‌’ ತೆಗೆದುಕೊಂಡಿಲ್ಲ. ಎಲ್ಲ ಲೆಕ್ಕ ಹಾಕಿದರೆ ಅಂದಾಜು ₹2 ಕೋಟಿಗೂ ಹೆಚ್ಚು ಮೊತ್ತದ ಅಕ್ರಮ ಬಿಲ್‌ ತಯಾರಿಸಿದ್ದು ಕಂಡುಬಂದಿದೆ. ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಬರಬೇಕಿದ್ದ ಪೌಷ್ಟಿಕ ಆಹಾರವನ್ನು ಕಳೆದ ಆರು ತಿಂಗಳಿಂದ ವಂಚಿಸಿದ್ದಾರೆ’ ಎಂದೂ ಪತ್ರದಲ್ಲಿ ಲೆಕ್ಕ ನೀಡಲಾಗಿದೆ.

‘ನಾಗರಾಜ್‌ ಹಾಗೂ ವಿಕ್ರಮ್‌ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದಾರೆ. ಇವರ ಮೇಲೆ ಉನ್ನತಮಟ್ಟದ ತನಿಖೆ ನಡೆಸಬೇಕು’ ಎಂದೂ ಬಸವರಾಜ್‌ ಅವರು ಇಲಾಖೆಯ ಕಾರ್ಯದರ್ಶಿ ಅವರಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ.

ಕುರ್ಚಿಗಾಗಿ ಸಮರ: ಬಸವರಾಜ್‌ ಅವರು ವರ್ಷದ ಹಿಂದೆ ಬೆಳಗಾವಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾಗಿದ್ದರು. ಅವರ ವರ್ಗಾವಣೆ ನಂತರ ಆ ಸ್ಥಾನಕ್ಕೆ ನಾಗರಾಜ ಅವರನ್ನು ನಿಯೋಜಿಸಲಾಗಿತ್ತು. ಆದರೆ, ಕೆಎಟಿ ಮೂಲಕ ಆದೇಶ ತಂದ ಬಸವರಾಜ್‌ ಮತ್ತೆ ತಮ್ಮ ಕುರ್ಚಿ ಮೇಲೆ ಬಂದು ಕುಳಿತರು. ಇಬ್ಬರ ಮಧ್ಯೆ ಕುರ್ಚಿಗಾಗಿ ಸಮರ ನಡೆದೇ ಇದೆ.

ಅಧಿಕಾರ ದುರುಪಯೋಗ, ಕಚೇರಿಯ ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡಿದ ದೂರಿನ ಮೇರೆಗೆ ಬಸವರಾಜ್ ಅವರನ್ನು ಈಗಾಗಲೇ ಅಮಾನತು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.