ADVERTISEMENT

ಬೆಳಗಾವಿ | ಜಲಮೂಲಗಳ ಅತಿಕ್ರಮಣ: ಅಂಬೇಡ್ಕರ್‌ ಕೆರೆಯೊಡಲು ಬರಿದು...

ಚಳಿಗಾಲದಲ್ಲೇ ಬರಿದಾಗುತ್ತಿರುವ ಕೆರೆಯೊಡಲು

ಇಮಾಮ್‌ಹುಸೇನ್‌ ಗೂಡುನವರ
Published 2 ಜೂನ್ 2024, 4:20 IST
Last Updated 2 ಜೂನ್ 2024, 4:20 IST
<div class="paragraphs"><p>ಬೆಳಗಾವಿಯ ಅನಗೋಳದ ಅಂಬೇಡ್ಕರ್‌ ಕೆರೆಯೊಡಲು ಬರಿದಾಗಿದೆ</p></div>

ಬೆಳಗಾವಿಯ ಅನಗೋಳದ ಅಂಬೇಡ್ಕರ್‌ ಕೆರೆಯೊಡಲು ಬರಿದಾಗಿದೆ

   

-ಪ್ರಜಾವಾಣಿ ಚಿತ್ರ

ಬೆಳಗಾವಿ: ಒಂದು ಕಾಲಕ್ಕೆ ಕೃಷಿ ಚಟುವಟಿಕೆ ಕೈಗೊಳ್ಳಲು ರೈತರಿಗೆ ನೆರವಾಗಿದ್ದ, ಅಕ್ಕಪಕ್ಕದ ಜಮೀನುಗಳ ಕೊಳವೆಬಾವಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಿದ ಇಲ್ಲಿನ ಅನಗೋಳದ ಅಂಬೇಡ್ಕರ್‌ ಕೆರೆ ಈಗ ಬರಿದಾಗಿದ್ದು, ಆಟದ ಮೈದಾನವಾಗಿ ಮಾರ್ಪಟ್ಟಿದೆ. ಇದನ್ನು ಮಾದರಿಯಾಗಿ ಅಭಿವೃದ್ಧಿಪಡಿಸಬೇಕೆಂಬ ಬೇಡಿಕೆ ನನೆಗುದಿಗೆ ಬಿದ್ದಿದೆ.

ADVERTISEMENT

9 ಎಕರೆ ಪರಿಸರದಲ್ಲಿ ಹರಡಿಕೊಂಡಿರುವ ಕೆರೆಯಲ್ಲಿ ಈ ಹಿಂದೆ ಬೇಸಿಗೆಯವರೆಗೂ ನೀರು ಸಂಗ್ರಹವಿರುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಚಳಿಗಾಲದ ಹೊತ್ತಿಗೆ ಕೆರೆಯೊಡಲು ಖಾಲಿಯಾಗುತ್ತಿದೆ.

ಹಾಗಾಗಿ ನಿತ್ಯ ಸಂಜೆಯಾಗುತ್ತಿದ್ದಂತೆ ಇಲ್ಲಿಗೆ ಲಗ್ಗೆ ಇಡುತ್ತಿರುವ ಯುವಕರು ಮತ್ತು ಮಕ್ಕಳು, ಕ್ರಿಕೆಟ್‌, ಫುಟ್‌ಬಾಲ್‌ ಆಟವಾಡಲು ಕೆರೆ ಬಳಸಿಕೊಳ್ಳುತ್ತಿದ್ದಾರೆ.

ಜಲಮೂಲಗಳ ಅತಿಕ್ರಮಣ: ‘ದಶಕದ ಹಿಂದೆ ಅನಗೋಳದಲ್ಲಿ ಉತ್ತಮ ಮಳೆಯಾದರೆ, ಕೆರೆಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿತ್ತು. ಮುಖ್ಯರಸ್ತೆಗೆ ಹೊಂದಿಕೊಂಡ ಕೆರೆ ಜೀವಜಲದಿಂದ ಮೈದುಂಬಿಕೊಂಡು ಕಂಗೊಳಿಸುತ್ತಿತ್ತು. ಆದರೆ, ಈಗ ಜಲಮೂಲಗಳ ಅತಿಕ್ರಮಣವಾಗಿದೆ. ಕೆರೆಗೆ ನೀರು ಹರಿದುಬರುವ ಮಾರ್ಗದಲ್ಲಿ ಮನೆಗಳು ತಲೆ ಎತ್ತಿವೆ. ಇದರಿಂದಾಗಿ ಕೆರೆ ತುಂಬುತ್ತಿಲ್ಲ. ಈ ವರ್ಷ ವರುಣ ಕೈಕೊಟ್ಟ ಪರಿಣಾಮ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ’ ಎಂದು ಸ್ಥಳೀಯರು ಆರೋಪಿಸಿದರು.

ಶುಚಿತ್ವ ಮಾಯ: ‘ನಿತ್ಯ ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕಾಗಿ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಆದರೆ, ನಿರೀಕ್ಷೆಯಂತೆ ಮೂಲಸೌಕರ್ಯವಿಲ್ಲ. ಶುಚಿತ್ವವೂ ಮಾಯವಾಗಿದೆ. ಗಿಡಗಂಟಿಗಳು ಹೇರಳವಾಗಿ ಬೆಳೆದಿದ್ದು, ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದೆ’ ಎಂದು ಸ್ಥಳೀಯ ರವಿ ಕೊಂಕಣಿ ಬೇಸರಿಸಿದರು.

ಬೇಕಿದೆ ಸಮುದಾಯ ಭವನ

‘ಅನಗೋಳದಲ್ಲಿ ವಿವಿಧ ಸಭೆ–ಸಮಾರಂಭಗಳ ಆಯೋಜನೆಗಾಗಿ ಪರಿಶಿಷ್ಟ ಸಮುದಾಯದವರಿಗೆ ಸಮುದಾಯ ಭವನಗಳಿಲ್ಲ. ಹಾಗಾಗಿ ಕೆರೆಗೆ ಹೊಂದಿಕೊಂಡ ಜಮೀನಿನಲ್ಲಿ ಸಮುದಾಯ ಭವನ ಕಟ್ಟಬೇಕು. ಕೆರೆಯನ್ನು ಇನ್ನಷ್ಟು ಆಕರ್ಷಣೀಯವಾಗಿಸಿ ಪ್ರವಾಸಿಗರನ್ನು ಸೆಳೆಯುವ ಕೆಲಸ ಮಾಡಬೇಕೆಂದು ಮಹಾನಗರ ಪಾಲಿಕೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯ ಮುಖಂಡ ರಾಜು ಮಾತಂಗಿ ಹೇಳಿದರು.

ಕೆರೆ ಸಂರಕ್ಷಣೆಗಾಗಿ ಮಹಾನಗರ ಪಾಲಿಕೆಯಿಂದ ಇಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಬೇಕು. ಕಣಬರ್ಗಿ ಕೆರೆ ಮಾದರಿಯಲ್ಲಿ ಇದನ್ನೂ ಅಭಿವೃದ್ಧಿಪಡಿಸಬೇಕು.
-ರಾಜು ಮಾತಂಗಿ, ಸ್ಥಳೀಯ ಮುಖಂಡ
ಅಂಬೇಡ್ಕರ್‌ ಕೆರೆ ಮತ್ತು ಅದರ ಪಕ್ಕದ ಉದ್ಯಾನ ಅಭಿವೃದ್ಧಿಪಡಿಸಿ ಜನರನ್ನು ಆಕರ್ಷಿಸುವ ಕೆಲಸವಾಗಬೇಕಿದೆ
-ರವಿ ಕೊಂಕಣಿ, ಸ್ಥಳೀಯ
ಅಂಬೇಡ್ಕರ್‌ ಕೆರೆ ಅಭಿವೃದ್ಧಿಗಾಗಿ ₹1.75 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ವಾಕಿಂಗ್‌ ಟ್ರ್ಯಾಕ್‌ ನಿರ್ಮಾಣ ಹೊಸದಾಗಿ ಅಂಬೇಡ್ಕರ್‌ ಪುತ್ಥಳಿ ಅಳವಡಿಕೆ ಶುಚಿತ್ವ ಕಾಪಾಡುವುದು ಮತ್ತಿತರ ಕಾಮಗಾರಿ ಕೈಗೊಳ್ಳಲಾಗುವುದು.
-ಸುರೇಶ ಮೂರ್ತೆನ್ನವರ, ಕಾರ್ಯನಿರ್ವಾಹಕ ಎಂಜಿನಿಯರ್‌ ಮಹಾನಗರ ಪಾಲಿಕೆ ಬೆಳಗಾವಿ ದಕ್ಷಿಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.