ADVERTISEMENT

ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದದ ಅಡೆತಡೆ ನಿವಾರಣೆಗೆ ತಿದ್ದುಪಡಿ: ಸಂಸದ ಮಾನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2024, 15:32 IST
Last Updated 4 ಜನವರಿ 2024, 15:32 IST
<div class="paragraphs"><p>ಬೆಳಗಾವಿಯಲ್ಲಿ ಗುರುವಾರ ಸಂಸದ ಧೈರ್ಯಶೀಲ ಮಾನೆ (ಎಡದಿಂದ 5ನೆಯವರು) ಅವರು ಮಹಾರಾಷ್ಟ್ರ ಸರ್ಕಾರದ ಆರೋಗ್ಯ ವಿಮೆಯ ಮಾರ್ಗದರ್ಶಿ ಕೈಪಿಡಿ ಬಿಡುಗಡೆ ಮಾಡಿದರು. ಎಂಇಎಸ್‌ ಮುಖಂಡರು&nbsp;ಸಾಥ್‌&nbsp;ನೀಡಿದರು</p></div>

ಬೆಳಗಾವಿಯಲ್ಲಿ ಗುರುವಾರ ಸಂಸದ ಧೈರ್ಯಶೀಲ ಮಾನೆ (ಎಡದಿಂದ 5ನೆಯವರು) ಅವರು ಮಹಾರಾಷ್ಟ್ರ ಸರ್ಕಾರದ ಆರೋಗ್ಯ ವಿಮೆಯ ಮಾರ್ಗದರ್ಶಿ ಕೈಪಿಡಿ ಬಿಡುಗಡೆ ಮಾಡಿದರು. ಎಂಇಎಸ್‌ ಮುಖಂಡರು ಸಾಥ್‌ ನೀಡಿದರು

   

ಬೆಳಗಾವಿ: ‘ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದ ಪ್ರಕರಣದಲ್ಲಿ ಕೆಲವು ಕಾನೂನು ಅಡೆತಡೆಗಳಿವೆ. ಇದೇ ಕಾರಣಕ್ಕೆ ಸುಪ್ರೀಂಕೋರ್ಟಿನಲ್ಲಿ ಪ್ರಕರಣ ನಿಲ್ಲುತ್ತಿಲ್ಲ. ಅಡೆತಡೆಗಳನ್ನು ಸರಿಪಡಿಸಲು ಮಹಾರಾಷ್ಟ್ರ ಸರ್ಕಾರ ತಿದ್ದುಪಡಿಗೆ ಮುಂದಾಗಿದೆ’ ಎಂದು ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದದ ಮಹಾರಾಷ್ಟ್ರದ ಉನ್ನತಾಧಿಕಾರ ಸಮಿತಿ ಅಧ್ಯಕ್ಷ ಹಾಗೂ ಸಂಸದ ಧೈರ್ಯಶೀಲ ಮಾನೆ ಹೇಳಿದರು.

ನಗರದಲ್ಲಿ ಗುರುವಾರ ಎಂಇಎಸ್‌ ಆಯೋಜಿಸಿದ್ದ ‘ಮಹಾರಾಷ್ಟ್ರ ಸರ್ಕಾರದ ಆರೋಗ್ಯ ವಿಮೆಯ ಫಲಾನುಭವಿಗಳ ಸಭೆ, ಮಾರ್ಗದರ್ಶಿ ಕೈಪಿಡಿ ಬಿಡುಗಡೆ ಹಾಗೂ ಉದ್ಯೋಗ ಭರವಸೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಮ್ಮ ಸರ್ಕಾರ ಗಡಿ ವಿವಾದಕ್ಕೆ ಅಗ್ರಸ್ಥಾನ ನೀಡಿದೆ’ ಎಂದರು.

ADVERTISEMENT

‘ಗಡಿ ತಂಟೆಯ ಪ್ರಕರಣ ಇಷ್ಟು ದೀರ್ಘಾವಧಿ ತೆಗೆದುಕೊಳ್ಳಬಾರದಿತ್ತು. ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ಎಂಇಎಸ್‌ ಮಾಡಿದ ಕೆಲವು ಲೋಪಗಳ ಕಾರಣ ಸುಪ್ರೀಂಕೋರ್ಟ್‌ ಕೈಗೆತ್ತಿಕೊಳ್ಳುತ್ತಿಲ್ಲ. ಈ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಕಾನೂನು ತಜ್ಞರೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಆದಷ್ಟು ಬೇಗ ತಿದ್ದುಪಡಿಯ ಮೂಲಕ ಅಡೆತಡೆ ನಿವಾರಣೆ ಮಾಡುವ ಭರವಸೆ ಇದೆ’ ಎಂದರು.

‘ಮುಖ್ಯಮಂತ್ರಿ ಏಕನಾಥ ಶಿಂಧೆ ಗಡಿ ವಿವಾದದ ಪ್ರತ್ಯಕ್ಷ ಸಾಕ್ಷಿ ಆಗಿದ್ದಾರೆ. ಗಡಿ ಹೋರಾಟದ ಮೂಲಕವೇ ಅವರು ರಾಜಕೀಯದಲ್ಲಿ ಬೆಳೆದಿದ್ದಾರೆ. ಅವರಿಗೆ ಸಾಕಷ್ಟು ಹಿಡಿತವಿದೆ. ಪ್ರಕರಣದಲ್ಲಿ ಏನೇನು ಅಡ್ಡಿಗಳು ಇವೆ ಹಾಗೂ ಕರ್ನಾಟಕದಲ್ಲಿ ಮರಾಠಿಗರಿಗೆ ಏನೇನು ಸನ್ಯಾಯ ಆಗುತ್ತಿದೆ ಎಂಬ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದಾರೆ. ಸದನದಲ್ಲಿ ಚರ್ಚೆ ಮಾಡಲಾಗಿದೆ’ ಎಂದರು.

‘ಮಹಾರಾಷ್ಟ್ರದ ಎಲ್ಲ ಸಂಸದರೊಂದಿಗೆ ಚರ್ಚೆ ನಡೆಸಿದ್ದು, ಸಂಸತ್‌ ಅಧಿವೇಶನದಲ್ಲಿ ಧ್ವನಿ ಎತ್ತಲು ತಿಳಿಸಲಾಗಿದೆ. ಸರ್ವಪಕ್ಷಗಳ ಮುಖಂಡರ ನಿಯೋಗದೊಂದಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸುವ ಸಿದ್ಧತೆ ನಡೆದಿದೆ’ ಎಂದೂ ಹೇಳಿದರು.

‘ಮೇಲಿಂದ ಮೇಲೆ ಗಡಿ ತಂಟೆಗಳು ನಡೆಯುತ್ತಿದ್ದವು. ಗೃಹಸಚಿವ ಅಮಿತ್‌ ಶಾ ಅವರು ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡನವೀಸ್‌ ಹಾಗೂ ಕರ್ನಾಟಕ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಕರೆದು ಸಮನ್ವಯ ಸಮಿತಿ ರಚಿಸಿದ್ದರು. ಇದರಿಂದ ಏನೂ ಪ್ರಯೋಜನ ಆಗಲಿಲ್ಲ. ಮರಾಠಿಗರ ಅನ್ಯಾಯ ನಿಂತಿಲ್ಲ’ ಎಂದೂ ಆರೋಪಿಸಿದರು.

‘ವಿವಾದಕ್ಕೆ ಒಳಪಟ್ಟ ಗಡಿಯ 865 ಹಳ್ಳಿಗಳ ಜನರನ್ನೂ ನಾವು ಮಹಾರಾಷ್ಟ್ರದ ಪ್ರಜೆಗಳು ಎಂದೇ ಪರಿಗಣಿಸಿದ್ದೇವೆ’ ಎಂದೂ ಮಾನೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.