ಸುಧಾಕರ ತಳವಾರ
ಚಿಕ್ಕೋಡಿ: ಸಾಂಪ್ರದಾಯಿಕ ಕೃಷಿಯೊಂದಿಗೆ ಪಶು ಸಂಗೋಪನೆ ಮಾಡಬೇಕು ಎಂಬ ಚಿಂತನೆಯೊಂದಿಗೆ ಕಳೆದೊಂದು ವರ್ಷದಿಂದ ಟಗರು ಸಾಕಾಣಿಕೆ ಮಾಡುತ್ತಿದ್ದೇವೆ. ಇದರಿಂದ ಉತ್ತಮ ಆದಾಯ ಹಾಗೂ ಆರೋಗ್ಯ ಲಭಿಸುತ್ತಿದೆ...
ತಾಲ್ಲೂಕಿನ ಹಿರೇಕೋಡಿ ಗ್ರಾಮದ ಕೃಷಿಕ ನಾರಾಯಣ ಬಸಪ್ಪ ಮಾಳಿ ಹೇಳುವ ಮಾತು ಇವು.
ಕಳೆದೊಂದು ವರ್ಷದಿಂದ ಟಗರು ಸಾಕಾಣಿಕೆ ಮಾಡುತ್ತಿರುವ ಅವರು, ಪ್ರತಿ ಮೂರು ತಿಂಗಳಿಗೆ ಟಗರು ಖರೀದಿಸಿ, ಅವುಗಳನ್ನು ಮೂರು ತಿಂಗಳು ಮೇಯಿಸಿ, ಆರನೇ ತಿಂಗಳಿಗೆ ಮಾರಾಟ ಮಾಡುತ್ತಾರೆ. ಮೊದಲ ಬಾರಿಗೆ 27, ಎರಡನೇ ಬಾರಿಗೆ 36 ಟಗರು ಮರಿಗಳನ್ನು ಖರೀದಿಸಿದ್ದ ಅವರು ಈ ಬಾರಿ ಮತ್ತೆ 30 ಟಗರು ಮರಿಗಳನ್ನು ಖರೀದಿಸಿ, ಸಾಕಾಣಿಕೆ ಮಾಡುತ್ತಿದ್ದಾರೆ.
ಅತಿವೃಷ್ಟಿ, ಅನಾವೃಷ್ಟಿ, ಕೃಷಿ ಉತ್ಪನ್ನಗಳ ಬೆಲೆ ಏರಿಳಿತ, ಬೆಳೆಗಳಿಗೆ ತಗುಲುತ್ತಿರುವ ವಿವಿಧ ರೋಗರುಜಿನುಗಳಿಂಂದ ಬೇಸತ್ತು ಕೃಷಿಗೆ ಪರ್ಯಾಯವಾಗಿ ಪಶುಸಂಗೋಪನೆಯತ್ತ ರೈತ ಚಿತ್ತ ಹರಿಸುತ್ತಿದ್ದಾರೆ. ಅಂತೆಯೇ ನಾರಾಯಣ ಮಾಳಿ ಅವರೂ ಟಗರು ಸಾಕಾಣಿಕೆಯತ್ತ ಒಲವು ಹರಿಸಿದ್ದು, ಅದರಲ್ಲಿ ಲಾಭವನ್ನೂ ಕಂಡುಕೊಂಡಿದ್ದಾರೆ.
ಸುಮಾರು ₹2.5 ಲಕ್ಷ ವೆಚ್ಚದಲ್ಲಿ 21X47 ವಿಸ್ತೀರ್ಣದ ಸುಸಜ್ಜಿತವಾದ ಶೆಡ್ ನಿರ್ಮಿಸಿದ್ದು, ಅದರಲ್ಲಿಯೇ ಟಗರು ಸಾಕಾಣಿಕೆ ಮಾಡುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆ ಅಮಿನಗಡದಿಂದ ಸುಮಾರು ಮೂರು ತಿಂಗಳ ವಯಸ್ಸಿನ ಟಗರು ಮರಿಗಳನ್ನು ಸರಾಸರಿ ತಲಾ ₹8000ಕ್ಕೆ ಖರೀದಿಸಿ ತರುತ್ತಾರೆ. ಅವುಗಳನ್ನು ಮೂರು ತಿಂಗಳ ಕಾಲ ಮೇಯಿಸಿ ಮಾರಾಟ ಮಾಡುತ್ತಾರೆ. ಖರ್ಚು ವೆಚ್ಚ ಕಳೆದು ಪ್ರತಿ ತಿಂಗಳು ಒಂದು ಟಗರು ಮರಿಯಿಂದ ಸರಾಸರಿ ಒಂದು ಸಾವಿರ ರೂಪಾಯಿ ಆದಾಯ ಲಭಿಸುತ್ತಿದೆ ಎಂದು ನಾರಾಯಣ ಮಾಳಿ ಹೇಳುತ್ತಾರೆ.
‘ತರಬೇತಿ ಪಡೆಯದೆಯೂ ಯಶಸ್ಸು’ ಟಗರು ಸಾಕಾಣಿಕೆ ಕುರಿತು ಎಲ್ಲಿಯೂ ತರಬೇತಿ ಪಡೆದಿಲ್ಲ. ಹಂತ ಹಂತವಾಗಿ ಇದರ ಕುರಿತು ಅನುಭವ ಲಭಿಸುತ್ತಿದೆ. ಎಲ್ಲಿ ದೋಷ ಕಂಡು ಬರುತ್ತಿದೆಯೋ ಅದನ್ನು ಸರಿಪಡಿಸಿಕೊಂಡು ಟಗರು ಸಾಕಾಣಿಕೆಯಲ್ಲಿ ಪರಿಣಿತಿಯನ್ನು ಪಡೆಯುತ್ತಿದ್ದೇನೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟಗರು ಸಾಕಾಣಿಕೆ ಮಾಡುವ ಗುರಿ ಇದೆ.ನಾರಾಯಣ ಮಾಳಿ, ಕೃಷಿಕ
‘ಅಮಿನಗಡ ಟಗರು ವಿಶೇಷ ಪ್ರಸಿದ್ದಿ ಪಡೆದಿದ್ದು, ಅಲ್ಲಿಂದಲೇ ಟಗರು ಮರಿಗಳನ್ನು ಖರೀದಿಸಿ ತರುತ್ತೇನೆ. ಮರಿಗಳಿಗೆ ಪ್ರತಿದಿನ ಬೆಳಿಗ್ಗೆ ತೊಗರಿಹೊಟ್ಟು, ಗೋವಿನಜೋಳದ ನುಚ್ಚು, ಶೇಂಗಾ ಹಿಂಡಿ ಮತ್ತು ಸೊಯಾಬೀನ್ ಸೇರಿದಂತೆ ಒಂದು ಮರಿಗೆ 250 ಗ್ರಾಂ ಖಾದ್ಯ ಮತ್ತು ಹಸಿ ಮೇವು ನೀಡುತ್ತೇನೆ. ಸಂಜೆ ಹೊತ್ತೂ ಕೂಡ ಇದೇ ಪ್ರಮಾಣದಲ್ಲಿ ಖಾದ್ಯ ನೀಡುತೇನೆ. ಮರಿಗಳು ಬೆಳೆದಂತೆ ಅದರ ಪ್ರಮಾಣ ಹೆಚ್ಚಾಗುತ್ತ ಹೋಗುತ್ತದೆ. ಪ್ರತಿ ತಿಂಗಳು ಒಂದು ಮರಿ ಸಾಕಾಣಿಕೆಗೆ ಹಸಿ ಮೇವು ಹೊರತುಪಡಿಸಿ ಸರಾಸರಿ ₹800 ಮೌಲ್ಯದ ಖಾದ್ಯ ನೀಡಬೇಕಾಗುತ್ತದೆ. ವಾರದಲ್ಲಿ ಒಂದು ಸಲ ಟಾನಿಕ್, ಪಶು ವೈದ್ಯರ ಸಲಹೆ ಮೇರೆಗೆ ಕಾಲ ಕಾಲಕ್ಕೆ ವ್ಯಾಕ್ಸಿನ್ ನೀಡುತ್ತೇನೆ’ ಎಂದು ಅವರು ಹೇಳುತ್ತಾರೆ.
ಬೆಳೆಸಿದ ಟಗರು ಮರಿಗಳ ಮಾರಾಟ ಸುಲಭ. ಸ್ಥಳೀಯ ವ್ಯಾಪಾರಿಗಳೇ ಬಂದು ಟಗರುಗಳನ್ನು ಖರೀದಿ ಮಾಡಿಕೊಂಡು ಹೋಗುತ್ತಾರೆ. ಕೆಲವೊಮ್ಮೆ ಸುತ್ತಮುತ್ತಲಿನ ರಾಯಬಾಗ, ನಿಪ್ಪಾಣಿ ಮಾರುಕಟ್ಟೆಗಳಿಗೆ ಒಯ್ದು ಮಾರಾಟ ಮಾಡುತ್ತೇವೆ. ಆರು ತಿಂಗಳ ಮರಿಯೊಂದು ಮಾರುಕಟ್ಟೆಯಲ್ಲಿ ಸರಾಸರಿ ₹12 ಸಾವಿರದಿಂದ ₹15 ಸಾವಿರಕ್ಕೆ ಮಾರಾಟವಾಗುತ್ತದ’ ಎಂದು ಕೃಷಿಕ ವಿವರಿಸುತ್ತಾರೆ.
ಅವರ ಸಂಪರ್ಕಕ್ಕೆ 9902130662.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.