ADVERTISEMENT

ಚನ್ನಮ್ಮನ ಕಿತ್ತೂರು: ಶಿವನೂರಿನ ಯೋಧನಿಗ ಭಾವುಕ ವಿದಾಯ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 15:57 IST
Last Updated 27 ಜೂನ್ 2024, 15:57 IST
ಅನಾರೋಗ್ಯದಿಂದ ಬುಧವಾರ ನಿಧನರಾದ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಶಿವನೂರಿನ ಯೋಧ ವಿಜಯ ಹುಬ್ಬಳ್ಳಿ ಪಾರ್ಥಿವ ಶರೀರಕ್ಕೆ ಮಿಲಿಟರಿ ಅಧಿಕಾರಿಗಳು ರಾಷ್ಟ್ರಧ್ವಜ ಹೊದಿಸಿ ಗೌರವ ಸಲ್ಲಿಸಿದರು
ಅನಾರೋಗ್ಯದಿಂದ ಬುಧವಾರ ನಿಧನರಾದ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಶಿವನೂರಿನ ಯೋಧ ವಿಜಯ ಹುಬ್ಬಳ್ಳಿ ಪಾರ್ಥಿವ ಶರೀರಕ್ಕೆ ಮಿಲಿಟರಿ ಅಧಿಕಾರಿಗಳು ರಾಷ್ಟ್ರಧ್ವಜ ಹೊದಿಸಿ ಗೌರವ ಸಲ್ಲಿಸಿದರು   

ಚನ್ನಮ್ಮನ ಕಿತ್ತೂರು: ಉಸಿರಾಟದ ತೊಂದರೆಯಿಂದಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಿಧನರಾದ ತಾಲ್ಲೂಕಿನ ಶಿವನೂರು ಗ್ರಾಮದ ಯೋಧ ವಿಜಯ ಬ.ಹುಬ್ಬಳ್ಳಿ ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವದೊಂದಿಗೆ ಗ್ರಾಮದ ರುದ್ರಭೂಮಿಯಲ್ಲಿ ಗುರುವಾರ ನಡೆಯಿತು.

‘ಸಶಸ್ತ್ರ 16ನೇ ಪಡೆಯಲ್ಲಿ ಹವಾಲ್ದಾರ್ ಆಗಿದ್ದ ಅವರಿಗೆ ಕೆಲವು ತಿಂಗಳುಗಳ ಹಿಂದೆ ತಲೆಗೆ ಏಟಾಗಿತ್ತು. ಚೇತರಿಸಿಕೊಂಡು ಅವರು ಕರ್ತವ್ಯಕ್ಕೆ ಹಾಜರಾಗಿದ್ದರು. ಮತ್ತೆ ಅನಾರೋಗ್ಯ ಕಾಡಿದ್ದರಿಂದ ಆರು ದಿನಗಳ ಹಿಂದೆ ಊರಿಗೆ ಬಂದಿದ್ದರು’ ಎಂದು ಗ್ರಾಮಸ್ಥರು ತಿಳಿಸಿದರು.

ಗುರುವಾರ ಬೆಳಿಗ್ಗೆ ಇಲ್ಲಿಯ ಚನ್ನಮ್ಮ ವರ್ತುಲದಿಂದ ಸ್ವಗ್ರಾಮ ಶಿವನೂರುವರೆಗೆ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು.ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಅಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮೃತ ಯೋಧನ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. 

ADVERTISEMENT

ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಆಡಳಿತ ಮಂಡಳಿಯವರು, ಮಾಜಿ ಯೋಧರು, ಶಿವನೂರು ಸೇರಿ ಸುತ್ತಲಿನ ಗ್ರಾಮಗಳ ಸಾರ್ವಜನಿಕರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಮೃತ ಯೋಧ ವಿಜಯ ಅವರಿಗೆ ತಾಯಿ, ಪತ್ನಿ, ಇಬ್ಬರು ಪುತ್ರರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.