ADVERTISEMENT

ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರಿಗೆ ಮೊಟ್ಟೆ ಸಾಲದ ಹೊರೆ

ಅಂಗನವಾಡಿ ಕೇಂದ್ರಗಳಿಗೆ ಏ‍ಪ್ರಿಲ್‌, ಮೇ ತಿಂಗಳ ಅನುದಾನ ಬಿಡುಗಡೆ ವಿಳಂಬ

ಪ್ರಜಾವಾಣಿ ವಿಶೇಷ
Published 27 ಮೇ 2023, 0:20 IST
Last Updated 27 ಮೇ 2023, 0:20 IST
ಬೆಳಗಾವಿ ಜಿಲ್ಲೆಯ ಕಾಗವಾಡದ ಅಂಗನವಾಡಿ ಕೇಂದ್ರದಲ್ಲಿ ಫಲಾನುಭವಿಗಳಿಗೆ ಮೊಟ್ಟೆ ವಿತರಿಸಲಾಯಿತು
ಬೆಳಗಾವಿ ಜಿಲ್ಲೆಯ ಕಾಗವಾಡದ ಅಂಗನವಾಡಿ ಕೇಂದ್ರದಲ್ಲಿ ಫಲಾನುಭವಿಗಳಿಗೆ ಮೊಟ್ಟೆ ವಿತರಿಸಲಾಯಿತು   

ಬೆಳಗಾವಿ: ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳಿಗೆ ಮೊಟ್ಟೆ ವಿತರಿಸುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಎರಡು ತಿಂಗಳಿಂದ ಅನುದಾನವೇ ಬಿಡುಗಡೆಯಾಗಿಲ್ಲ. ಹೀಗಾಗಿ,
ಸಾಲದ ರೂಪದಲ್ಲಿ ಕಿರಾಣಿ ಅಂಗಡಿಗಳಿಂದ ಮೊಟ್ಟೆ ಖರೀದಿಸಿ ವಿತರಿಸಲಾಗುತ್ತಿದೆ.

ರಾಜ್ಯದಲ್ಲಿ 65,911 ಅಂಗನವಾಡಿ ಕೇಂದ್ರಗಳಿವೆ. ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳಿಗೆ ಪೌಷ್ಟಿಕಾಂಶ ದೊರೆಯಲಿ ಎಂಬ ಉದ್ದೇಶದಿಂದ ಅಂಗನವಾಡಿ ಕೇಂದ್ರಗಳ ಮೂಲಕ ಮೊಟ್ಟೆ ನೀಡಲಾಗುತ್ತಿದೆ. ಸ್ಥಳೀಯವಾಗಿ ಮೊಟ್ಟೆ ಖರೀದಿಸಿ, ಫಲಾನುಭವಿಗಳಿಗೆ ವಿತರಿಸಲಾಗುತ್ತದೆ. ಇದಕ್ಕೆ ವೆಚ್ಚವಾದ ಹಣವನ್ನು ಅಂಗನವಾಡಿ ಕೇಂದ್ರಗಳ ಬಾಲ ವಿಕಾಸ ಸಲಹಾ ಸಮಿತಿ ಹಾಗೂಕಾರ್ಯಕರ್ತೆಯರ ಜಂಟಿ ಖಾತೆಗೆ ನಿಯಮಿತವಾಗಿ ಜಮೆ ಮಾಡಲಾಗುತ್ತಿತ್ತು. ಕೆಲವೊಮ್ಮೆ ಮುಂಗಡವಾಗಿಯೇ ಹಣ ಕೈ ಸೇರುತ್ತಿತ್ತು. ಆದರೆ, ವಿಧಾನಸಭೆ ಚುನಾವಣೆ, ಮತ್ತಿತರ ಕಾರಣಗಳಿಂದಾಗಿ ಏಪ್ರಿಲ್‌ ಮತ್ತು ಮೇ ತಿಂಗಳ ಅನುದಾನ ಈವರೆಗೂ ಬಿಡುಗಡೆಯಾಗಿಲ್ಲ.

‘ನಾವು ಕಿರಾಣಿ ಅಂಗಡಿಗಳಲ್ಲಿ ಸಾಲದ ರೂಪದಲ್ಲಿ ಮೊಟ್ಟೆಗಳನ್ನು ಖರೀದಿಸಿದ್ದೇವೆ. ಅಂಗಡಿಯವರು ಹಣ ಕೊಡುವಂತೆ ಕೇಳುತ್ತಿದ್ದಾರೆ. ಆದರೆ, ಸರ್ಕಾರದಿಂದ ಸಕಾಲಕ್ಕೆ ಅನುದಾನ ಬಾರದ್ದರಿಂದ ತೊಂದರೆ
ಆಗಿದೆ’ ಎಂದು ಬೆಳಗಾವಿಯ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯೊಬ್ಬರು ‘ಪ್ರಜಾವಾಣಿ’ಗೆ
ತಿಳಿಸಿದ್ದಾರೆ.

ADVERTISEMENT

ಗರ್ಭಿಣಿಯರು, ಬಾಣಂತಿಯರಿಗೆ ವಾರದಲ್ಲಿ 6 ದಿನ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ವಾರದಲ್ಲಿ 5 ದಿನ ಹಾಗೂ ಸಾಮಾನ್ಯ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ ನೀಡಲಾಗುತ್ತಿದೆ. ಪ್ರತಿ ಮೊಟ್ಟೆಗೆ ₹6 ದರ ನಿಗದಿಪಡಿಸಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ 6 ತಿಂಗಳಿಂದ 6 ವರ್ಷದೊಳಗಿನ 3.81 ಲಕ್ಷ ಸಾಮಾನ್ಯ ಮಕ್ಕಳು, 20,022 ಅಪೌಷ್ಟಿಕ, 639 ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು, 84,521 ಗರ್ಭಿಣಿ
ಯರು ಮತ್ತು ಬಾಣಂತಿಯರಿದ್ದಾರೆ. ಬೆಳಗಾವಿ ಜಿಲ್ಲೆಯೊಂದಕ್ಕೆ ಸುಮಾರು ₹6.72 ಕೋಟಿ (ಎರಡು ತಿಂಗಳ ಅನುದಾನ) ಬರಬೇಕಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.