ADVERTISEMENT

ಮಳೆಕರ್ಣಿ: ಪ್ರಾಣಿ ಬಲಿ ಸಂ‍ಪೂರ್ಣ ನಿಷೇಧ

​ಪ್ರಜಾವಾಣಿ ವಾರ್ತೆ
Published 31 ಮೇ 2024, 16:06 IST
Last Updated 31 ಮೇ 2024, 16:06 IST
ಬೆಳಗಾವಿ ತಾಲ್ಲೂಕಿನ ಉಚಗಾಂವ ಗ್ರಾಮದಲ್ಲಿ ಮಳೆಕರ್ಣಿ ದೇವಿಗೆ ಪ್ರಾಣಿ ಬಲಿ ನೀಡಲು ಬಂದಿದ್ದ ಭಕ್ತರಿಗೆ ತಿಳಿವಳಿಕೆ ಮೂಡಿಸಲಾಯಿತು – ಪ್ರಜಾವಾಣಿ ಚಿತ್ರ
ಬೆಳಗಾವಿ ತಾಲ್ಲೂಕಿನ ಉಚಗಾಂವ ಗ್ರಾಮದಲ್ಲಿ ಮಳೆಕರ್ಣಿ ದೇವಿಗೆ ಪ್ರಾಣಿ ಬಲಿ ನೀಡಲು ಬಂದಿದ್ದ ಭಕ್ತರಿಗೆ ತಿಳಿವಳಿಕೆ ಮೂಡಿಸಲಾಯಿತು – ಪ್ರಜಾವಾಣಿ ಚಿತ್ರ   

ಬೆಳಗಾವಿ: ತಾಲ್ಲೂಕಿನ ಉಚಗಾಂವ ಗ್ರಾಮದಲ್ಲಿನ ಮಳೆಕರ್ಣಿ ದೇವಿಗೆ ಪ್ರಾಣಿ ಬಲಿ ನೀಡುವುದನ್ನು ಶುಕ್ರವಾರದಿಂದ ಸಂಪೂರ್ಣ ನಿಲ್ಲಿಸಲಾಯಿತು. ನಿಷೇಧದ ನಡುವೆಯೂ ಹಲವು ವರ್ಷಗಳಿಂದ ಪ್ರತಿ ಶುಕ್ರವಾರ ಹಾಗೂ ಮಂಗಳವಾರ ಇಲ್ಲಿ ಕುರಿ ಬಲಿ ನಡೆಯುತ್ತಲೇ ಇತ್ತು. ಗ್ರಾಮ ಪಂಚಾಯಿತಿಯಲ್ಲಿ ಈಚೆಗೆ ನಿರ್ಣಯ ಅಂಗೀಕರಿಸುವ ಮೂಲಕ ಬಲಿ ನೀಡುವುದಕ್ಕೆ ತಡೆ ಒಡ್ಡಲಾಯಿತು.

ಉಚಗಾಂವ ಗ್ರಾಮದೇವತೆ ಮಳೆಕರ್ಣಿಯ ದೇವಸ್ಥಾನ ಪುರಾತನವಾದದ್ದು. ಬಹುಪಾಲು ಮರಾಠಿಗರು ಈ ದೇವಿಗೆ ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ. ಮಳೆಕರ್ಣಿದೇವಿ ಬೇಡಿದ ವರವನ್ನು ನೀಡುತ್ತಾಳೆ ಎಂಬ ನಂಬಿಕೆ ಭಕ್ತರಲ್ಲಿದೆ. ಕುರಿ– ಮೇಕೆಗಳನ್ನು ಬಲಿ ಅರ್ಪಿಸುವ ಹರಕೆ ಹೊತ್ತುಕೊಳ್ಳುವುದು ಸಂಪ್ರದಾಯ. ಪ್ರಾಣಿ ಬಲಿ ನಿಷೇಧ ಕಾಯ್ದೆ ಜಾರಿಯಾದ ಮೇಲೆ ಕದ್ದುಮುಚ್ಚಿ ಬಲಿ ನೀಡುವುದು ಮುಂದುವರಿದಿತ್ತು. ಪ್ರತಿ ಶುಕ್ರವಾರ ಹಾಗೂ ಮಂಗಳವಾರ ಐನೂರಕ್ಕೂ ಹೆಚ್ಚು ಕುರಿ– ಮೇಕೆಗಳನ್ನು ಹರಕೆ ನೀಡಲಾಗುತ್ತಿತ್ತು.

ಬಲಿಯ ಕುರಿ– ಮೇಕೆಗಳ ಮಾಂಸದಿಂದ ಸುತ್ತಲಿನ ಹೊಲಗಳಲ್ಲಿ ಮಾಂಸಾಹಾರ ತಯಾರಿಸಿ ಭಕ್ತರಿಗೆ ನೀಡಲಾಗುತ್ತಿತ್ತು. ಕುಡುಕರ ಹಾವಳಿ ಕೂಡ ಹೆಚ್ಚಾಗಿದ್ದು, ರಾತ್ರಿ ಹೊತ್ತು ಹೊಲಗಳಿಗೆ ಹೋಗಿ ಮದ್ಯ ಕುಡಿದು ಮಾಂಸದೂಟ ಮಾಡುವ ರೂಢಿ ಬೆಳೆಸಿಕೊಂಡಿದ್ದರು. ಇದರಿಂದ ಸುತ್ತಲಿನ ಹೊಲಗಳಲ್ಲಿ, ರಸ್ತೆ ಬದಿಯಲ್ಲಿ ಅಪಾರ ಪ್ರಮಾಣದ ಮಾಂಸದ ತ್ಯಾಜ್ಯ ಬೀಳುತ್ತಿತ್ತು. ದೇವಸ್ಥಾನಕ್ಕೆ ಬರುವ ಭಕ್ತರು, ವರ್ತಕರು ಹಾಗೂ ಊರಿನ ಜನರಿಗೂ ಸಮಸ್ಯೆ ಆಗುತ್ತಿತ್ತು.

ADVERTISEMENT

ಪ್ರಾಣಿಗಳ ಬಲಿ ಜಾತ್ರೆ ನಡೆಯುತ್ತಿದ್ದ ಕಾರಣ ಈ ಊರಿನಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿತ್ತು. ದೇವಸ್ಥಾನದ ಸುತ್ತಲೂ ಹಲವು ಮಳಿಗೆಗಳು ತಲೆಎತ್ತಿದ್ದವು.

ಈ ಎಲ್ಲ ಅಂಶಗಳನ್ನು ಪರಿಗಣಿಸಿ ಉಚಗಾಂವ ಗ್ರಾಮ ಪಂಚಾಯಿತಿ ಇದಕ್ಕೆ ಕೊನೆಹಾಡಲು ಮುಂದಾಯಿತು. ಬಲಿಯನ್ನು ಸಂಪೂರ್ಣ ನಿಷೇಧ ಮಾಡುವ ಸಂಬಂಧ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಯಿತು. ಅದರಂತೆ, ಪೊಲೀಸ್‌ ಇಲಾಖೆ, ಪಶು ಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು, ದೇವಸ್ಥಾನದ ಆಡಳಿತ ಮಂಡಳಿ ಆಶ್ರಯದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ಪದ್ಧತಿಯಂತೆ ಶುಕ್ರವಾರ ಕೂಡ ಹಲವು ಭಕ್ತರು ಕುರಿ– ಮೇಕೆಗಳನ್ನು ಬಲಿ ನೀಡಲು ತಂದಿದ್ದರು. ಆದರೆ, ಅವುಗಳನ್ನು ವಶಕ್ಕೆ ಪಡೆದ ಪೊಲೀಸರು ಭಕ್ತರಿಗೆ ಕಾಯ್ದೆಯ ಮನವರಿಕೆ ಮಾಡಿ ಮರಳಿಸಿದರು. ಮಾಂಸಾಹಾರದ ನೈವೇದ್ಯ ಅರ್ಪಿಸುವ ಹರಕೆ ಹೊತ್ತವರು ತಮ್ಮ ಮನೆಯಲ್ಲೇ ಬಲಿ ಮಾಡಿ ನೈವೇದ್ಯವನ್ನು ದೇವರಿಗೆ ಅರ್ಪಿಸಬಹುದು ಎಂದು ತಿಳಿಸಿದರು.

ಎಸಿಪಿ ಬಿ.ಎಂ. ಗಂಗಾಧರ, ಎಇಒ ರಾಮರೆಡ್ಡಿ ಪಾಟೀಲ, ಬಸವರಾಜ, ಪಶು ವೈದ್ಯಕೀಯ ಇಲಾಖೆ ಅಧಿಕಾರಿ ಆನಂದ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸ್ಮಿತಾ ಗೋಡ್ಸೆ ನೇತೃತ್ವಲ್ಲಿ ಪೊಲೀಸರ ವಿಶೇಷ ತಂಡ ಇಡೀ ದಿನ ಕಾರ್ಯಾಚರಣೆ ನಡೆಸಿತು. ಜನರಿಗೆ ಅರಿವು ಮೂಡಿಸುವ ಜತೆಗೆ, ಅಶಾಂತಿ ಹರಡದಂತೆ ಎಚ್ಚರಿಕೆ ವಹಿಸಿತು.

ಟ್ರ್ಯಾಕ್ಟರ್‌, ಟೆಂಪೊ, ಸರಕು ಆಟೊಗಳಲ್ಲಿ ಪ್ರಾಣಿಗಳನ್ನು ತಂದಿದ್ದ ಭಕ್ತರು ದೇವಿ ದರ್ಶನ ಮಾತ್ರ ಪಡೆದು ಮರಳಿದರು.

ಬೆಳಗಾವಿ ತಾಲ್ಲೂಕಿನ ಉಚಗಾಂವ ಗ್ರಾಮದಲ್ಲಿ ಮಳೆಕರ್ಣಿ ದೇವಿಗೆ ಪ್ರಾಣಿ ಬಲಿ ನೀಡಲು ಬಂದಿದ್ದ ಭಕ್ತರನ್ನು ಪೊಲೀಸರು ತಡೆದರು – ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.