ADVERTISEMENT

ಅರಣ್ಯ ಸಿದ್ಧೇಶ್ವರ ಜಾತ್ರೆ 14ರಿಂದ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2024, 3:17 IST
Last Updated 12 ಮಾರ್ಚ್ 2024, 3:17 IST

ಹಾರೂಗೇರಿ ಕ್ರಾಸ್‌: ರಾಯಬಾಗ ತಾಲ್ಲೂಕಿನ ಯಲ್ಪಾರಟ್ಟಿ ಗ್ರಾಮದ ಅರಣ್ಯ ಸಿದ್ಧೇಶ್ವರ ಜಾತ್ರೆ ಮಾರ್ಚ್‌ 14ರಿಂದ 21ರ ವರೆಗೆ ನಡೆಯಲಿದೆ. ಜಾತ್ರೆಯ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಅಮವಾಸ್ಯೆ ನಂತರ 3ನೇ ದಿನಕ್ಕೆ ಆರಂಭಗೊಳ್ಳುವ ಈ ಜಾತ್ರೆ ಐದು ದಿನಗಳವರೆಗೆ ನಡೆಯುವುದು ವಾಡಿಕೆ. ಕರ್ನಾಟಕ ಹಾಗೂ ಮಹಾರಾಷ್ಟ್ರದಿಂದ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಳ್ಳಲಿದ್ದಾರೆ.

ಸುಮಾರು 900 ವರ್ಷಗಳ ಹಿಂದೆ, 12ನೇ ಶತಮಾನದಲ್ಲಿ ಕೆರೂರಿನಲ್ಲಿ ಜನಾಬಾಯಿ ಹಾಗೂ ಭೀರಪ್ಪ ಎಂಬ ದಂಪತಿಗೆ ಜನಿಸಿದ ಸಿದ್ಧೇಶ್ವರರು ಬಾಲ್ಯದಲ್ಲಿ ಗೋವುಗಳನ್ನು ಕಾಯುತ್ತಿದ್ದರು. ನಂತರ ಊರೂರು ಸಂಚರಿಸಿ ಧರ್ಮ ಬೋಧನೆ ಮಾಡಿದರು. ಹಲವು ಪವಾಡಗಳನ್ನು ಮಾಡಿದರು. ಹೀಗಾಗಿ, ಅವರಿಗೆ ಕಾಮಧೇನು ಎಂದೇ ಕರೆಯುವುದು ರೂಢಿ. ದಟ್ಟ ಅರಣ್ಯದಿಂದ ಕೂಡಿದ್ದ ಯಲ್ಪಾರಟ್ಟಿಗೆ ಬಂದು ಅಲ್ಲಿಯೇ ತಳ ಊರಿದರು. ಹೀಗಾಗಿ ಅರಣ್ಯ ಸಿದ್ಧೇಶ್ವರ ಎಂದು ಹೆಸರು ಬಂದಿದೆ ಎನ್ನುವುದು ಹಿರಿಯರ ಹೇಳಿಕೆ.

ADVERTISEMENT

14ರಂದು ಕರಿಕಟ್ಟುವ ಮೂಲಕ ಜಾತ್ರೆ ಆರಂಭಗೊಳ್ಳುವುದು. 17ರಂದು ನೈವೇದ್ಯ, 18ರಂದು ನಿವಾಳಿಕೆ ನಡೆಯಲಿದೆ. ನಿತ್ಯ 15 ಡೊಳ್ಳಿನ ಸ್ಪರ್ಧೆಗಳು ನಡೆಯಲಿವೆ. 19ರಂದು ಕುದುರೆ ಶರ್ಯತ್ತು, 20ರಂದು ಸೈಕಲ್ ಸ್ಪರ್ಧೆ, 21ರಂದು ಓಟದ ಸ್ಪರ್ಧೆ ನಡೆಯಲಿದೆ ಎಂದು ಜಾತ್ರಾ ಸಮಿತಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.