ಚನ್ನಮ್ಮನ ಕಿತ್ತೂರು: ‘ಇಲ್ಲಿನ ತುಂಬುಗೆರೆ ದಂಡೆ ಮೇಲೆ ನಿರ್ಮಿಸಲು ಉದ್ದೇಶಿಸಿರುವ ವೃಕ್ಷೋದ್ಯಾನ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಪೂರ್ಣ ಕಾಮಗಾರಿ ಮುಗಿದು ಆಕರ್ಷಣೀಯ ತಾಣವಾಗುವುದು ಯಾವಾಗ’ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.
‘ಈ ಕೆರೆ ಸೌಂದರ್ಯ ಹೆಚ್ಚಿಸಲು ಲೋಕೋಪಯೋಗಿ ಇಲಾಖೆ ದಶಕದ ಹಿಂದೆಯೇ ಕಾಮಗಾರಿ ಕೈಗೆತ್ತಿಕೊಂಡಿತ್ತು. ₹80 ಲಕ್ಷ ವೆಚ್ಚದಲ್ಲಿ ಕೆರೆ ಅಂಗಳವನ್ನು ಸ್ವಲ್ಪ ಪ್ರಮಾಣ ಮುಚ್ಚಲಾಯಿತು. ತಂತಿ ಬೇಲಿ ಅಳವಡಿಸಲಾಯಿತು. ಕೆರೆದಂಡೆಗೆ ಆಗಮಿಸುವ ವಾಯು ವಿಹಾರಿಗಳಿಗೆ ಕುಳಿತುಕೊಳ್ಳಲು ಸಿಮೆಂಟ್ ಬೆಂಚ್ ಹಾಕಲಾಯಿತು. ಆದರೆ, ಕುಡುಕರಿಗೆ ಸೂಕ್ತ ತಾಣವಾಗಿ ಇದು ಪರಿವರ್ತನೆಯಾಯಿತು. ಕುಡುಕರು ಬೆಂಚುಗಳ ಮೇಲೆ ಕುಳಿತು ಪ್ರತಿದಿನ ಮೋಜು–ಮಸ್ತಿ ಮಾಡಿದರು. ಹಾಗಾಗಿ ಕೆಲವು ಮುರಿದು ಅನಾಥವಾಗಿ ಬಿದ್ದವು’ ಎಂದು ಜನರು ದೂರುತ್ತಾರೆ.
‘ಮುರಿದ ಬೆಂಚ್, ನೆಲೆಹಾಸು ಕಿಂಡಿಗಳಲ್ಲಿ ಬೆಳೆದು ನಿಂತ ಕಸಗಂಟಿಗಳು, ತಂತಿಬೇಲಿ ಹಾಕಿದ ಸ್ಥಳದ ಬಳಿ ಬೆಳೆದ ಆಳೆತ್ತರದ ಗಿಡಗಳು ಕೆರೆದಂಡೆಯ ಮೊದಲಿನ ಸಹಜ ಸೌಂದರ್ಯವನ್ನೂ ಕೆಡಿಸಿದವು. ಸಂಸ್ಥಾನ ಕಾಲದ, ನಶಿಸಿ ನಿಂತ ಸ್ಮಾರಕದಂತೆ ಕಾಣಲು ಆರಂಭಿಸಿತು. ಕೆರೆಯ ಅಂದ ಹೆಚ್ಚಿಸಬೇಕಿದ್ದ ಇಡೀ ಕಾಮಗಾರಿ ಹಳ್ಳ ಹಿಡಿಯಿತು. ವ್ಯಯಿಸಿದ ದುಡ್ಡು ಕೂಡ ‘ಕೃಷ್ಣಾರ್ಪಣ’ ಎನ್ನುವಂತಾಯಿತು’ ಎಂದು ಅವರು ಆರೋಪಿಸುತ್ತಾರೆ.
ಇನ್ನೂ ಆಗಬೇಕಿರುವ ಕೆಲಸ: ‘ಮೊದಲ ಹಂತದ ಕಾಮಗಾರಿಯಲ್ಲಿ ಚೈನ್ ಲಿಂಕ್ ಜಾಲರಿ, ಪ್ರವೇಶ ದ್ವಾರ, ಸ್ಟೋನ್ ವಾಲ್, ಇ–ಶೌಚಗೃಹ ನಿರ್ಮಾಣ, ಮಕ್ಕಳ ಆಟಿಕೆಗಳ ಅಳವಡಿಕೆ ಇದ್ದವು. ಇದರಲ್ಲಿ ಮಕ್ಕಳ ಆಟಿಕೆ ಅಳವಡಿಕೆ, ಇ–ಶೌಚಗೃಹ ನಿರ್ಮಾಣ ಕಾಮಗಾರಿ ನಡೆಯುತ್ತಿಲ್ಲ. ನಡೆಯುವ ಮುನ್ಸೂಚನೆಯೂ ಕಾಣದಂತಾಗಿದೆ’ ಎಂಬುದು ಜನರ ದೂರು.
ಅರಣ್ಯ ಇಲಾಖೆಗೆ ವಹಿಸಲಾಗಿತ್ತು:
‘ಶಾಸಕ ಬಾಬಾಸಾಹೇಬ ಪಾಟೀಲ ಅವರ ನೇತೃತ್ವದಲ್ಲಿ ಅಂದಾಜು ₹2.5 ಕೋಟಿ ವೆಚ್ಚದಲ್ಲಿ ಕೆರೆ ಸೌಂದರ್ಯೀಕರಣಕ್ಕೆ ಮತ್ತೊಂದು ಪ್ರಯತ್ನ ನಡೆಯಿತು. ಆ ಕಾಮಗಾರಿ ಅನುಷ್ಠಾನವನ್ನು ಅರಣ್ಯ ಇಲಾಖೆಗೆ ವಹಿಸಿ ಕೊಡಲಾಯಿತು. ವೃಕ್ಷೋದ್ಯಾನದ ಜತೆಗೆ, ಸಾರ್ವಜನಿಕರಿಗೆ ಆಕರ್ಷಣೀಯ ತಾಣವಾಗಿಸಲು ಉದ್ದೇಶಿಸಲಾಯಿತು. ಶಾಸಕರ ಪ್ರಯತ್ನದಿಂದ ಮೊದಲ ಕಂತಿನಲ್ಲಿ ₹50 ಲಕ್ಷ ಬಿಡುಗಡೆಯೂ ಆಯಿತು. ಮೊದಲಿದ್ದ ಆವರಣ ಬೇಲಿಯ ಮುರಿದ ಭಾಗವನ್ನು ದುರಸ್ತಿ ಮಾಡಲಾಯಿತು. ಸುತ್ತಲೂ ಅರಣ್ಯ ಇಲಾಖೆಯ ಸಾಂಪ್ರದಾಯಿಕ ಬಣ್ಣ ಬಳಿದು, ಹುಲಿ, ಕರಡಿ, ಮಂಗಗಳ ಚಿತ್ರ ಬಿಡಿಸಲಾಯಿತು. ಆದರೆ, ಪೂರ್ಣ ಕಾಮಗಾರಿಯಾಗದೆ ಹಾಗೆ ನಿಂತಿದ್ದು, ಈಗ ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಾಗಿದೆ’ ಎಂಬ ಆರೋಪ ಕೇಳಿಬರುತ್ತಿದೆ.
ಮೊದಲ ಹಂತದಲ್ಲಿ ಕೆಲವು ಕೆಲಸಗಳಾಗಿವೆ. ಹಿಂದೆ ಮಂಜೂರಾಗಿದ್ದ ನಕ್ಷೆ ಪರಿಷ್ಕರಿಸಿ ಸರ್ಕಾರಕ್ಕೆ ಮತ್ತೆ ಹೊಸ ಪ್ರಸ್ತಾವ ಸಲ್ಲಿಸಲಾಗಿದೆ. ಮಂಜೂರಾದ ನಂತರ ಕಾಮಗಾರಿ ಆರಂಭವಾಗಲಿದೆ.ಸಂತೋಷ ಎಸ್. ಗೋಲಿಹಳ್ಳಿ, ಆರ್‌ಎಫ್ಒ
ಎಕರೆ ಜಾಗದಲ್ಲಿ ಪಕ್ಷಿಧಾಮ ನಿರ್ಮಿಸಬೇಕು. ಪ್ರವಾಸಿಗರಿಗೆ ಆಕರ್ಣೀಯ ತಾಣವಾಗುವಂತೆ ಕೆಲಸಗಳು ನಡೆಯಬೇಕು. ತುಂಬುಗೆರೆ ಸುತ್ತಲೂ ವಾಕಿಂಗ್ ಟ್ರ್ಯಾಕ್ ನಿರ್ಮಿಸಬೇಕು.ಚಂದ್ರಗೌಡ ಪಾಟೀಲ, ನಾಗರಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.