ಬೆಳಗಾವಿ: ಸೈನಿಕರಾಗಬೇಕು ಎಂಬ ಕನಸು ಹೊತ್ತು ನಗರಕ್ಕೆ ಶನಿವಾರ ರಾತ್ರಿ ಬಂದಿದ್ದ ಸಾವಿರಾರು ಯುವಕರು, ಆಶ್ರಯಕ್ಕಾಗಿ ವ್ಯವಸ್ಥೆ ಇಲ್ಲದೆ ರಸ್ತೆಬದಿಯೇ ನಿದ್ರೆಗೆ ಜಾರಿಗೆ ಜಾರಿದರು. ಮೈಕೊರೆಯುವ ಚಳಿಯಲ್ಲೂ ಪಾದಚಾರಿ ಮಾರ್ಗದ ಮೇಲೆಯೇ ಮಲಗಿದರು.
ಟೆರಿಟೋರಿಯಲ್ ಆರ್ಮಿಯಲ್ಲಿನ ಸೈನಿಕರ ಹುದ್ದೆಗಳ ನೇಮಕಾತಿಗಾಗಿ ಭಾನುವಾರ ನಡೆದ ರ್‍ಯಾಲಿಯಲ್ಲಿ ಪಾಲ್ಗೊಳ್ಳಲು 16 ಜಿಲ್ಲೆಗಳಿಂದ ಸಾವಿರಾರು ಯುವಕರ ದಂಡು ಇಲ್ಲಿಗೆ ಬಂದಿತ್ತು. ಇಲ್ಲಿನ ಸಿಪಿಎಡ್ ಮೈದಾನ ಮುಂಭಾಗದ ರಸ್ತೆಯಲ್ಲೇ ಅವರು ಇಡೀ ರಾತ್ರಿ ಕಳೆದರು. ಕೆಲವರು ಪಾದಚಾರಿ ಮಾರ್ಗದ ಮೇಲೆ ಚಾಪೆ, ಹಾಸಿಗೆ ಹಾಸಿ ಮಲಗಿದರೆ, ಇನ್ನೂ ಕೆಲವರು ನೆಲದ ಮೇಲೆಯೇ ಮಲಗಿದ್ದು ಕಂಡುಬಂತು. ಮೂಲಸೌಕರ್ಯ ಕೊರತೆಯಿಂದಾಗಿ ಅವರು ಪರದಾಡಿದರು. ದೇಶ ಕಾಯಬೇಕೆಂಬ ಅವರ ಕನಸು ಕಮರಿದವು.
‘ಇಂಥ ರ್‍ಯಾಲಿ ಬೆಳಿಗ್ಗೆ ಬೇಗ ಆರಂಭವಾಗುತ್ತವೆ. ಹಾಗಾಗಿ ನಮ್ಮೂರಿನಿಂದ ಅದೇ ದಿನ ಪ್ರಯಾಣಿಸುವುದು ಕಷ್ಟ. ಹೋಟೆಲ್ ಅಥವಾ ಲಾಡ್ಜ್‌ನಲ್ಲಿ ಇರಬೇಕೆಂದರೆ ಆರ್ಥಿಕ ಸಂಕಷ್ಟ. ಆದರೆ, ಸೈನಿಕರಾಗುವ ಹಂಬಲದಿಂದ ಇಂಥ ತೊಂದರೆಯನ್ನೆಲ್ಲ ಸಹಿಸಿಕೊಳ್ಳುತ್ತೇವೆ’ ಎನ್ನುತ್ತಿದ್ದ ಆ ಯುವಕರ ಚಿತ್ತ ದೈಹಿಕ ಸಾಮರ್ಥ್ಯ ಪರೀಕ್ಷೆಯತ್ತ ಹರಿಯುತ್ತಿತ್ತು.
‘ನಾನು ಪದವಿ ಓದಾತೇನ್ರಿ. ಸೈನಿಕನಾಗೋ ಆಸೆಯಿಂದ ಶನಿವಾರ ರಾತ್ರಿನೇ ಇಲ್ಲಿಗೆ ಬಂದೇನ್ರಿ. ಇಲ್ಲಿಗೆ ಬಂದಾವ್ರಲ್ಲಿ ಹೆಚ್ಚಿನಾವ್ರ ಬಡವರ ಮಕ್ಕಳೇ ಅದೇವ್ರಿ. ಹಂಗಾಗಿ ಎಲ್ಲಿ ರೂಮ್ ಮಾಡೋದಂತ, ಫುಟ್‌ಪಾತ್ ಮ್ಯಾಗ ಮಲಗೇವ್ರಿ’ ಎಂದು ಯುವಕ ಆದಿತ್ಯ ಗುರವ ಹೇಳಿದರು.
ಇದಕ್ಕೆ ಧ್ವನಿಗೂಡಿಸಿದ ನಿಪ್ಪಾಣಿ ತಾಲ್ಲೂಕಿನ ಕಾರದಗಾ ಗ್ರಾಮದ ಯುವಕ ಪೃಥ್ವಿರಾಜ್ ನಾಯಕವಾಡಿ, ‘ಸೇನಾ ರ್‍ಯಾಲಿಗಾಗಿ ನಾನು ಮತ್ತು ನನ್ನ ಗೆಳೆಯರು ಬಂದಿದ್ದೇವೆ. ವಸತಿಗೆ ವ್ಯವಸ್ಥೆ ಇಲ್ಲದ್ದರಿಂದ ರಸ್ತೆಬದಿ ಮಲಗಿದ್ದೇವೆ’ ಎಂದರು.
‘ನಾನು ಬೀದರ್, ಕೊಪ್ಪಳ, ಬೆಂಗಳೂರಿನಲ್ಲಿ ನಡೆದ ಸೈನಿಕರ ರ್‍ಯಾಲಿಗಳಿಗೆ ಹೋಗಿದ್ದೆ. ಸೈನಿಕನಾಗಬೇಕು ಎನ್ನುವ ಉತ್ಕಟ ಹಂಬಲದಿಂದ ಈಗ ಬೆಳಗಾವಿ ರ್‍ಯಾಲಿಗೂ ಬಂದಿದ್ದೇನೆ. ಏನೇ ಸಮಸ್ಯೆಗಳಿರಲಿ. ಈ ರ್‍ಯಾಲಿಯಲ್ಲಿ ಪಾಲ್ಗೊಂಡು, ಸೈನಿಕನಾಗಿ ಆಯ್ಕೆಯಾಗುವುದೇ ನನ್ನ ಗುರಿ’ ಎಂದು ಯೋಗೇಶ ಉಗಳೆ ಹೇಳಿದರು.
‘ಯಾವುದೇ ರ್‍ಯಾಲಿಗೆ ಇಷ್ಟೊಂದು ಯುವಕರು ಬರಬಹುದೆಂದು ನಿರೀಕ್ಷಿಸಲಾಗಿರುತ್ತದೆ. ಅದಕ್ಕೆ ತಕ್ಕಂತೆ ನೇಮಕಾತಿ ವಿಭಾಗದವರು ಅಥವಾ ಜಿಲ್ಲಾಡಳಿತದವರು, ಒಂದುಕಡೆ ಸಾಮೂಹಿಕವಾಗಿ ವಸತಿ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತದೆ’ ಎಂಬ ಅಭಿಪ್ರಾಯ ಯುವಕರಿಂದ ಕೇಳಿಬಂತು.
ಬೆಳಗಾವಿಯಲ್ಲಿ ನ.4ರಿಂದ ಆರಂಭಗೊಂಡ ರ್‍ಯಾಲಿ ನ.12ರವರೆಗೆ ನಡೆಯಲಿದೆ. ಪ್ರತಿದಿನ ಬೇರೆ ಬೇರೆ ರಾಜ್ಯಗಳ ಯುವಕರು ಪಾಲ್ಗೊಳ್ಳುತ್ತಿದ್ದಾರೆ. ನ.7ರಂದು ಕರ್ನಾಟಕದ 15 ಜಿಲ್ಲೆಗಳ ಯುವಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಭಾನುವಾರದ ರ್‍ಯಾಲಿಯಲ್ಲಿ ಬೆಳಗಾವಿ ಬಾಗಲಕೋಟೆ ಧಾರವಾಡ ಕಲಬುರಗಿ ಕೊಪ್ಪಳ ರಾಯಚೂರು ಗದಗ ಹಾವೇರಿ ಬಳ್ಳಾರಿ ಬೀದರ್ ವಿಜಯಪುರ ವಿಜಯನಗರ ದಕ್ಷಿಣ ಕನ್ನಡ ಉತ್ತರ ಕನ್ನಡ ಉಡುಪಿ ಯಾದಗಿರಿ ಸೇರಿ 16 ಜಿಲ್ಲೆಗಳ ಯುವಕರು ಪಾಲ್ಗೊಂಡರು. ನಸುಕಿನ ಜಾವದಿಂದಲೇ ಪ್ರಕ್ರಿಯೆ ಆರಂಭವಾದವು. ಹಾಗಾಗಿ ಹಿಂದಿನ ದಿನ ರಾತ್ರಿಯೇ ಯುವಕರ ದಂಡು ಇಲ್ಲಿಗೆ ಬಂದು ತಂಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.