ಬೆಳಗಾವಿ/ ಬೈಲಹೊಂಗಲ: ಸಾಲ ಪಡೆದಿದ್ದ ಸವದತ್ತಿ ತಾಲ್ಲೂಕಿನ ಏಣಗಿ ಗ್ರಾಮದ ಐವರು ರೈತರಿಗೆ ಆ್ಯಕ್ಸಿಸ್ ಬ್ಯಾಂಕ್ ಈಚೆಗೆ ಕೋಲ್ಕತ್ತನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದೆ.
ಬಸಪ್ಪ ಹುಬ್ಬಳ್ಳಿ, ಚನ್ನಮಲ್ಲಪ್ಪ ಕರಡಿಗುದ್ದಿ, ಭೀಮಪ್ಪ ಪೂಜಾರ, ಬಾಳಪ್ಪ ಕುರಬಗಟ್ಟಿ, ಯಲ್ಲಪ್ಪ ಪೂಜಾರ ಅವರಿಗೆ ವಾರಂಟ್ ಜಾರಿಯಾಇದೆ. ಅವರು 2009ರಲ್ಲಿ ಸಾಲ ತೆಗೆದುಕೊಂಡಿದ್ದರು.
ಬೆಳೆ ಸಾಲ, ಕೃಷಿ ಉಪಕರಣ, ಟ್ರ್ಯಾಕ್ಟರ್, ಪಂಪ್‌ಸೆಟ್, ಕೃಷಿ ಭೂಮಿ ಅಭಿವೃದ್ಧಿಗಾಗಿ ಸಾಲ ಪಡೆದಿದ್ದ 180 ರೈತರಿಂದ ಭದ್ರತೆಗಾಗಿ ಆ್ಯಕ್ಸಿಸ್ ಬ್ಯಾಂಕ್‌ನವರು ಖಾಲಿ ಚೆಕ್‌ಗಳಿಗೆ ಸಹಿ ಪಡೆದಿದ್ದರು. ಹಣ ತುಂಬಿಲ್ಲವಾದ್ದರಿಂದ ಚೆಕ್‌ಗಳು ಬೌನ್ಸ್ ಆಗಿದ್ದವು. ಬ್ಯಾಂಕ್‌ನವರು ಈ ರೈತರ ವಿರುದ್ಧ ಕೋಲ್ಕತ್ತನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಅ. 17ರಂದು ಸಮನ್ಸ್ ಜಾರಿ ಮಾಡಲಾಗಿತ್ತು. ಇದೀಗ, ಎಲ್ಲ 180 ಮಂದಿಗೂ ವಾರಂಟ್ ಜಾರಿಯಾಗಿದೆ ಎಂದು ತಿಳಿದುಬಂದಿದೆ.
ಸಾಲಗಾರರ ಮನೆಗೆ ಪೊಲೀಸರು ಬಂಧನ ವಾರಂಟ್ ತೆಗೆದುಕೊಂಂಡು ಹೋಗಿದ್ದರು. ತೆಲೆಮರೆಸಿಕೊಂಡು ಬೈಲಹೊಂಗಲ ಆ್ಯಕ್ಸಿಸ್ ಬ್ಯಾಂಕ್ ಶಾಖೆಗೆ ಶನಿವಾರ ಬಂದ ರೈತರು, ಶಾಖಾಧಿಕಾರಿಗೆ ವಿಷಯ ತಿಳಿಸಿದ್ದಾರೆ. ಅವರು ಬ್ಯಾಂಕ್ ಕಾನೂನು ಘಟಕದವರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿದರು. ಅ. 17ರಂದೇ ಕಾನೂನು ಕ್ರಮಗಳನ್ನು ಕೈಬಿಡಲಾಗಿದೆ. ರೈತರು ಹೆದರುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದರಿಂದ, ರೈತರು ಸ್ವಗ್ರಾಮಕ್ಕೆ ತೆರಳಿದರು.
ಪ್ರತಿಭಟಿಸಿದ್ದರು
ಸಮನ್ಸ್ ನೀಡಿದ್ದನ್ನು ವಿರೋಧಿಸಿ ರೈತರು ಬೈಲಹೊಂಗಲ ಆ್ಯಕ್ಸಿಸ್ ಬ್ಯಾಂಕ್ ಶಾಖೆ ಎದುರು ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಸ್ಪಂದಿಸಿದ್ದ ಬ್ಯಾಂಕ್ ಅಧಿಕಾರಿಗಳು ರೈತರಿಗೆ ತೊಂದರೆ ಕೊಡುವುದಿಲ್ಲ ಎಂದು ಭರವಸೆ ನೀಡಿದ್ದರು. ನಂತರ, ಕೋಲ್ಕತ್ತನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದ ರೈತರ ವಿರುದ್ಧ ಬಂಧನ ವಾರಂಟ್ ರವಾನಿಸಲಾಗಿದೆ.
‘ರಾಜ್ಯ ಸರ್ಕಾರವು ಸಾಲ ಮನ್ನಾ ಮಾಡಿ ಆದೇಶ ಹೊರಡಿಸಿದೆ. ಬೆಳೆ ಸಾಲ ಪಡೆದ ರೈತರಿಗೆ ನೋಟಿಸ್ ನೀಡಿರುವುದು ಹಾಗೂ ಬಂಧನ ವಾರಂಟ್ ಜಾರಿಗೊಳಿಸಿರುವುದು ಆ್ಯಕ್ಸಿಸ್ ಬ್ಯಾಂಕ್‌ನ ಉದ್ದಟತನವನ್ನು ತೋರಿಸುತ್ತದೆ. ನೋಟಿಸ್ ಜಾರಿಗೊಳಿಸದಂತೆ ಮುಖ್ಯಮಂತ್ರಿಯೇ ಸೂಚನೆ ನೀಡಿದ್ದರು. ಆದರೆ, ಬ್ಯಾಂಕ್‌ನವರು ರೈತರನ್ನು ಹೆದರಿಸುವುದು ತಪ್ಪಿಲ್ಲ’ ಎಂದು ಭಾರತೀಯ ಕೃಷಿಕ ಸಮಾಜ ರಾಜ್ಯ ಸಂಘಟನಾ ಕಾರ್ಯದರ್ಶಿ ಮಹಾಂತೇಶ ಕಮತ ಆಕ್ರೋಶ ವ್ಯಕ್ತಪಡಿಸಿದರು.
‘ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಬ್ಯಾಂಕ್‌ನವರು ವಾರಂಟ್ ಹಿಂಪಡೆಯುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಭಾನುವಾರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ ಸುಧೀರ್‌ಕುಮಾರ್ ರೆಡ್ಡಿ, ‘180 ರೈತರ ವಿರುದ್ಧ ಪ್ರಕರಣ ದಾಖಲಾಗಿದೆ. ಐವರಿಗೆ ಬಂಧನ ವಾರಂಟ್ ಜಾರಿಯಾಗಿದೆ. ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಇರುವ ಸಾಧ್ಯತೆಗಳ ಕುರಿತು ಚರ್ಚಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಶೀಘ್ರವೇ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.