ADVERTISEMENT

ಕಿತ್ತೂರು ವಿಜಯೋತ್ಸವ: ಕಲಾವಿದರಿಗೆ ಮನಸೋತ ಜನಸಾಗರ

ಇಮಾಮ್‌ಹುಸೇನ್‌ ಗೂಡುನವರ
Published 24 ಅಕ್ಟೋಬರ್ 2024, 6:29 IST
Last Updated 24 ಅಕ್ಟೋಬರ್ 2024, 6:29 IST
ಚನ್ನಮ್ಮನ ಕಿತ್ತೂರಿನಲ್ಲಿ ಬುಧವಾರ ನಡೆದ ಜಾನಪದ ಕಲಾವಾಹಿನಿ ಮೆರವಣಿಗೆಯಲ್ಲಿ ಯಕ್ಷಗಾನ ಕಲಾವಿದರು ಗಮನ ಸೆಳೆದರು  ಪ್ರಜಾವಾಣಿ ಚಿತ್ರ
ಚನ್ನಮ್ಮನ ಕಿತ್ತೂರಿನಲ್ಲಿ ಬುಧವಾರ ನಡೆದ ಜಾನಪದ ಕಲಾವಾಹಿನಿ ಮೆರವಣಿಗೆಯಲ್ಲಿ ಯಕ್ಷಗಾನ ಕಲಾವಿದರು ಗಮನ ಸೆಳೆದರು  ಪ್ರಜಾವಾಣಿ ಚಿತ್ರ   

ಚನ್ನಮ್ಮನ ಕಿತ್ತೂರು: ಕಿತ್ತೂರ ನಾಡು ಹತ್ತೂರು ಕಲಾವಿದರನ್ನು ಬುಧವಾರ ಚುಂಬಕಶಕ್ತಿಯಂತೆ ಸೆಳೆಯಿತು. ಜನಪದರು, ಸಂಗೀತಗಾರರು, ನೃತ್ಯಪಟುಗಳು ಸೇರಿ ಕಲಾವಿದರ ದಂಡೇ ಕ್ರಾಂತಿಯ ನೆಲದತ್ತ ಹರಿದುಬಂದಿತ್ತು. ಬೆಳಿಗ್ಗೆ ಆರಂಭಗೊಂಡ ಜಾನಪದ ಕಲಾವಾಹಿನಿ ಮೆರವಣಿಗೆ ಮಧ್ಯಾಹ್ನದವರೆಗೂ ಸಾಗಿತು.

ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಯಿಂದ ಈ ಮೆರವಣಿಗೆ ಮೇಲೂ ಕಾರ್ಮೋಡ ಕವಿದಿತ್ತು. ಆದರೆ, ವರುಣ ಬಿಡುವು ಕೊಟ್ಟಿದ್ದರಿಂದ ಮೆರವಣಿಗೆ ರಂಗೇರಿತು.

ಉತ್ಸವದ ಹಿನ್ನೆಲೆಯಲ್ಲಿ ಬೈಲಹೊಂಗಲ ಮತ್ತು ಕಿತ್ತೂರು ತಾಲ್ಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಹಾಗಾಗಿ ಶಾಲಾ ಮಕ್ಕಳೂ ಮೆರವಣಿಗೆಯಲ್ಲಿ ಉತ್ಸಾಹದಿಂದ ಹೆಜ್ಜೆಹಾಕಿದರು. ಚನ್ನಮ್ಮನ ಪರ ಜೈಕಾರಗಳನ್ನು ಕೂಗಿದರು. ಕೆಲವರು ಕುದುರೆ ಮೇಲೆ ಸವಾರಿ ಮಾಡಿ ಕಣ್ಮನಸೆಳೆದರು.

ADVERTISEMENT

ವೈಭವಯುತವಾಗಿ ನಡೆದ ಮೆರವಣಿಗೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಮಾತ್ರವಲ್ಲ; ಕರಾವಳಿ ಭಾಗದ ಹಾಗೂ ಹೊರರಾಜ್ಯದ ಕಲೆಗಳ ಅನಾವರಣಕ್ಕೆ ವೇದಿಕೆ ಕಲ್ಪಿಸಿತು.

ಕೇರಳದ ನಾಲ್ಕು ತಂಡಗಳು ಈ ಸಲದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ರವಿಶಂಕರ ತಂಡದವರು ಶಿವ–ಪಾರ್ವತಿ ರೂಪಕ, ಅಜಯ ತಂಡದವರು ತ್ರೈಯಂ, ಕಿಶನ್‌ ತಂಡದವರು ಕಥಕ್ಕಳಿ, ರಾಜೇಶ ತಂಡದವರು ಕವಾಡಿ ಪ್ರದರ್ಶಿಸಿ ಮೆರವಣಿಗೆಗೆ ಮೆರುಗು ತಂದರು.

ಚಿಕ್ಕಮಗಳೂರಿನ ಕೆ.ಬಿ.ಶೈಲಜಾ ತಂಡದವರು ಪ್ರದರ್ಶಿಸಿದ ಮಹಿಳಾ ವೀರಗಾಸೆ, ದಾವಣಗೆರೆಯ ವಸಂತಕುಮಾರ್‌ ಆರ್‌. ತಂಡದವರ ವೀರಗಾಸೆ, ಮಂಡ್ಯ ಜಿಲ್ಲೆಯ ಮಳವಳ್ಳಿಯ ಸವಿತಾ ಚಿರಕುಣ್ಣಯ್ಯ ತಂಡದವರ ಪೂಜಾ ಕುಣಿತ, ಸಾಗರದ ಶ್ರೀವತ್ಸ ಅವರ ಈಶ್ವರ ವೇಷ ಜನರಲ್ಲಿ ಧಾರ್ಮಿಕ ಪ್ರಜ್ಞೆ ಜಾಗೃತಗೊಳಿಸಿದವು. ಕೊರಟಗೆರೆಯ ಗಾರುಡಿ ಗೊಂಬೆ, ಶ್ರೀರಂಗಪಟ್ಟಣದ ಚಿಲಿಪಿಲಿ ಗೊಂಬೆ ಪುಟಾಣಿಗಳನ್ನು ಆಕರ್ಷಿಸಿತು. ಬೆಂಗಳೂರಿನ ಶಾಲಿನಿ ತಂಡದವರ ಯಕ್ಷಗಾನವು ಕರಾವಳಿಯ ಸಾಂಪ್ರದಾಯಿಕ ಕಲೆಯನ್ನು ಪರಿಚಯಿಸಿತು.

ಹಾಸನದ ಚಂದ್ರಶೇಖರ ತಂಡದವರ ಚಿಟ್ಟಿಮೇಳ, ಬೆಂಗಳೂರಿನ ಗಂಗಾಧರ ತಂಡದವರ ಮೀನು ನೃತ್ಯ, ರಾಮನಗರದ ಮುತ್ತುಹನುಮಯ್ಯ ತಂಡದವರ ಕಂಸಾಳೆ, ದಾವಣಗೆರೆಯ ಬಸವರಾಜ ತಂಡದವರ ಕುದುರೆ ಕುಣಿತ, ಮದ್ದೂರಿನ ಮಾನಶ್ರೀ ತಂಡದ ಪಟಾ ಕುಣಿತ, ಮಂಡ್ಯದ ಜಗದೀಶ ತಂಡದವರ ಕೊಂಬು ಕಹಳೆ, ಚಿತ್ರದುರ್ಗದ ಮಿಥುನ್ ತಂಡದವರ ನಗಾರಿ ವಾದ್ಯ, ಪಲ್ಲವಿ ತಂಡದವರ ತಮಟೆ ವಾದ್ಯ ಜನರನ್ನು ಸೆಳೆದವು.

ಗದುಗಿನ ಮಹಾಂತೇಶ ವಾಲಿ ತಂಡದ ಡೊಳ್ಳು ಕುಣಿತ, ಹಾವೇರಿಯ ಮಹಾರುದ್ರಪ್ಪ ಇಟಗಿ ತಂಡದ ದೊಡ್ಡ ಸಂಬಾಳ, ಜಮಖಂಡಿಯ ಸದಾಶಿವ ಮಾಟೊಳ್ಳಿ ತಂಡದವರ ಕರಡಿ ಮಜಲು, ಧಾರವಾಡದ ಕಲ್ಲಪ್ಪ ಹಂಚಿನಮನಿ ಅವರ ಜಗ್ಗಲಗಿ ಮತ್ತಿತರ ಕಲಾ ಪ್ರಕಾರಗಳು ಗ್ರಾಮೀಣ ಸಂಸ್ಕೃತಿ ಅನಾವರಣಗೊಳಿಸಿದವು.

ಚನ್ನಮ್ಮನ ಕಿತ್ತೂರಿನಲ್ಲಿ ಬುಧವಾರ ಕಿತ್ತೂರು ವಿಜಯೋತ್ಸವ ಅಂಗವಾಗಿ ಸಚಿವ ಸತೀಶ ಜಾರಕಿಹೊಳಿ ನಂದಿ ಧ್ವಜಾರೋಹಣ ನೆರವೇರಿಸಿದರು. ಚನ್ನರಾಜ ಹಟ್ಟಿಹೊಳಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಶಾಸಕರಾದ ಬಾಬಾಸಾಹೇಬ ಪಾಟೀಲ ಮಹಾಂತೇಶ ಕೌಜಲಗಿ ಆಸಿಫ್‌ ಸೇಠ್‌ ಹಾಗೂ ಅಧಿಕಾರಿಗಳೂ ಜತೆಯಾದರು  ಪ್ರಜಾವಾಣಿ ಚಿತ್ರ

ಚನ್ನಮ್ಮನ ಕಿತ್ತೂರಿನಲ್ಲಿ ಬುಧವಾರ ನಡೆದ ಜಾನಪದ ಕಲಾವಾಹಿನಿ ಮೆರವಣಿಗೆಯಲ್ಲಿ ಮಹಿಳೆಯರು ಪೂರ್ಣಕುಂಬ ಹೊತ್ತು ಸಾಗಿದರು  ಪ್ರಜಾವಾಣಿ ಚಿತ್ರ
ಜಿಲ್ಲೆಯ 32 ತಂಡಗಳು ಭಾಗಿ
ಬೆಳಗಾವಿ ಜಿಲ್ಲೆಯ 32 ತಂಡಗಳು ಪ್ರದರ್ಶಿಸಿದ ಪುರವಂತಿಕೆ ತಾಸೇವಾದನ ದಟ್ಟಿ ಕುಣಿತ ಸಂಬಳ ವಾದನ ಹಲಗೆ ವಾದನ ಕರಬಲ್‌ ಕುಣಿತ ಜಾಂಝ್‌ಪಥಕ್‌ ಹೆಜ್ಜೆಮೇಳ ಗೊಂಬೆಕುಣಿತ ಜನರನ್ನು ರಂಜಿಸಿದವು. ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಸರ್ಕಾರದ ಯೋಜನೆಗಳ ಮಾಹಿತಿ ನೀಡಿದವು. ಸಾರ್ವಜನಿಕರು ಮತ್ತು ಸಂಘ–ಸಂಸ್ಥೆಗಳು ಕುಡಿಯುವ ನೀರು ತಂಪು ಪಾನೀಯ ನೀಡಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.