ADVERTISEMENT

ಆಷಾಢ: ಗುಳ್ಳವನ ಪೂಜೆಯ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 16:35 IST
Last Updated 10 ಜುಲೈ 2024, 16:35 IST
ಬೈಲಹೊಂಗಲದಲ್ಲಿ ಕುಂಬಾರರು ಮಣ್ಣಿನಿಂದ ತಯಾರಿಸಿದ ಗುಳ್ಳವ್ವ, ಈಶ್ವರ, ಬಸವಣ್ಣನ ಮೂರ್ತಿಗಳನ್ನು ನಾಗರಿಕರು ಖರೀದಿಸಿ ಮನೆಗೆ ಕೊಂಡೊಯ್ದರು
ಬೈಲಹೊಂಗಲದಲ್ಲಿ ಕುಂಬಾರರು ಮಣ್ಣಿನಿಂದ ತಯಾರಿಸಿದ ಗುಳ್ಳವ್ವ, ಈಶ್ವರ, ಬಸವಣ್ಣನ ಮೂರ್ತಿಗಳನ್ನು ನಾಗರಿಕರು ಖರೀದಿಸಿ ಮನೆಗೆ ಕೊಂಡೊಯ್ದರು   

ಬೈಲಹೊಂಗಲ: ಆಷಾಢ ಮಾಸದ ಮಂಗಳವಾರ ಎಂದರೆ ಉತ್ತರ ಕರ್ನಾಟಕದ ಹಳ್ಳಿಯ ಮಹಿಳೆಯರಿಗೆ ಎಲ್ಲಿಲ್ಲದ ಸಡಗರ. ಈ ದಿನಗಳಲ್ಲಿ ಮನೆ, ಮನೆಗಳಲ್ಲಿ ಗುಳ್ಳವ್ವನ ಪೂಜೆ ನಡೆಯುತ್ತದೆ.

ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಕುಂಬಾರರು ತಯಾರಿಸಿದ ಗುಳ್ಳವ್ವ, ಈಶ್ವರ, ಬಸವಣ್ಣನ ಮೂರ್ತಿಗಳನ್ನು ಜನರು ಮಂಗಳವಾರ ಮನೆಗೆ ಕೊಂಡೊಯ್ದು ಪೂಜೆ ಸಲ್ಲಿಸಿದರು. ಗುಳ್ಳವ್ವನನ್ನು ಗುಲಗಂಜಿ, ಜೋಳ, ಅಗಸಿ, ಗೋಧಿ, ವಿವಿಧ ಧಾನ್ಯಗಳಿಂದ ಸಿಂಗರಿಸಲಾಗಿತ್ತ. ಜಾಲಿಗಿಡದ ಹಸಿರು ಮೊಗ್ಗು, ಹಳದಿ, ಹೂವುಗಳಿಂದಲೂ ಅಲಂಕರಿಸಲಾಗಿತ್ತು.

ಆಷಾಢ ಮಾಸದ ಪ್ರತಿ ಮಂಗಳವಾರ ಮಣ್ಣಿನ ಗುಳ್ಳವ್ವಗಳನ್ನು ತಯಾರಿಸಿ ಪೂಜಿಸುವುದು ಸಂಪ್ರದಾಯ. ಮೊದಲೆಲ್ಲ ಮಹಿಳೆಯರು ನದಿ, ಕೆರೆಯ ದಡದ ಮಣ್ಣು ತಂದು ಸೋಮವಾರದಿಂದಲೇ ಗುಳ್ಳವ್ವನನ್ನು ತಯಾರಿಸುತ್ತಿದ್ದರು. ನಂತರ ಕುಂಬಾರರು ತಯಾರಿಸಿ ಮಣೆ ಮೇಲೆ ಮಣ್ಣಿನ ಗುಳ್ಳವ್ವಗಳನ್ನು ಸಾಲಾಗಿ ಜೋಡಿಸಿಕೊಂಡು ತಲೆ ಮೇಲೆ ಹೊತ್ತು ಮನೆ ಬಾಗಿಲಿಗೆ ತಂದು ಮಾರುವ ರೂಢಿ ಬೆಳೆದು ಬಂತು.

ADVERTISEMENT

ಮಳೆ ತರುವ ದೇವತೆ ಎಂದು ನಂಬಲಾಗುವ ಗುಳ್ಳವ್ವನಿಗೆ ಜೋಳದಿಂದ ತಯಾರಿಸಿದ ಅರಳು, ಉಸುಳಿ, ವಿವಿಧ ನೈವೇದ್ಯ ತಯಾರಿಸಿ ಮನೆ, ಮನೆಗೆ ಹೋಗಿ ಆರತಿ ಬೆಳಗಿ ಸಾಮೂಹಿಕವಾಗಿ ಪೂಜಿಸಲಾಯಿತು.

‘ಆಷಾಢ ಮಾಸದ ಕೊನೆಯ ಮಂಗಳವಾರ ವಿಶೇಷ ಖಾದ್ಯ ತಯಾರಿಸಿ ಗುಳ್ಳವ್ವನೊಂದಿಗೆ ಇನ್ನುಳಿದ ದೇವರ ಪ್ರತಿಮೆಗಳನ್ನು ತೆಗೆದುಕೊಂಡು ಜಮೀನು, ಉದ್ಯಾನಗಳಿಗೆ ತೆರಳಿ ಸಾಮೂಹಿಕ ಪೂಜೆ ಸಲ್ಲಿಸಿ ಭೋಜನದ ಮೂಲಕ ಆಚರಣೆಗೆ ತೆರೆ ಎಳೆಯುತ್ತಾರೆ’ ಎಂದು ಹಿರಿಯ ಅಜ್ಜಿ ಸಿದ್ಧಮ್ಮ ಹೋಟಿ 'ಪ್ರಜಾವಾಣಿ'ಗೆ ತಿಳಿಸಿದರು.

‘ಗುಳ್ಳವ್ವ, ಈಶ್ವರ, ಬಸವಣ್ಣನ ಪ್ರತಿಮೆಗಳಿಗೆ ₹50 ನಿಗದಿ ಮಾಡಲಾಗಿದೆ. ಮೊದಲು 100–200 ಪ್ರತಿಮೆಗಳು ಮಾರಾಟವಾಗುತ್ತಿದ್ದವು. ಕ್ರಮೇಣ ಕಡಿಮೆ ಆಗಿದೆ’ ಎಂದರು ಮೂರ್ತಿ ತಯಾರಕರಾದ ಶಾಂತವ್ವ ಕುಂಬಾರ.

ಬೈಲಹೊಂಗಲದಲ್ಲಿ ಕುಂಬಾರರು ಮಣ್ಣಿನಿಂದ ತಯಾರಿಸಿದ ಗುಳ್ಳವ್ವ ಈಶ್ವರ ಬಸವಣ್ಣನ ಮೂರ್ತಿಗಳನ್ನು ನಾಗರಿಕರು ಖರೀದಿಸಿ ಮನೆಗೆ ಕೊಂಡೊಯ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.