ಬೆಳಗಾವಿ: ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದರಿಂದ ಗಾಯಗೊಂಡ ಮಹಿಳೆಯನ್ನು ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ದೌಡಾಯಿಸಿದ ಗೃಹಸಚಿವ ಡಾ.ಜಿ.ಪರಮೇಶ್ವರ ಮಹಿಳೆ ಆರೋಗ್ಯ ವಿಚಾರಿಸಿದರು.
ಮಹಿಳೆ ಆರೋಗ್ಯದ ಸ್ಥಿತಿ ಕುರಿತು ವೈದ್ಯರಿಂದ ಮಾಹಿತಿ ಪಡೆದರು. ಅವರ ಮೇಲೆ ನಿಗಾ ವಹಿಸುವಂತೆ ಅವರು ಸೂಚನೆ ನೀಡಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಪರಮೇಶ್ವರ, ‘ಮಹಿಳೆಯನ್ನು ಬೆತ್ತಲೆಗೊಳಿಸಿ, ಕಂಬಕ್ಕೆ ಕಟ್ಟಿ ಹೊಡೆಯಲಾಗಿದೆ. ಇದೊಂದು ಅಮಾನವೀಯ ಘಟನೆ. ನಡೆಯಬಾರದು ನಡೆದಿದೆ. 24 ವರ್ಷದ ಯುವಕ ದುಂಡಪ್ಪ ಹಾಗೂ ಪ್ರಿಯಾಂಕ ಎಂಬ ಯುವತಿಯ ಪ್ರೇಮ ಪ್ರಕರಣ ಇದಕ್ಕೆ ಕಾರಣವಾಗಿದೆ. 8ರಿಂದ 10 ಜನ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ. ಈಗಾಗಲೇ 7 ಮಂದಿಯನ್ನು ಬಂಧಿಸಲಾಗಿದೆ. ಇನ್ನಿಬ್ಬರ ಹುಡುಕಾಟ ನಡೆದಿದೆ. ಪೊಲೀಸರು ತುರ್ತು ಕ್ರಮ ಜರುಗಿಸಿದ್ದಾರೆ’ ಎಂದರು.
‘ಓಡಿ ಹೋದ ಹುಡುಗ– ಹುಡುಗಿಯ ಬಗ್ಗೆಯೂ ಕಾಳಜಿ ವಹಿಸಬೇಕಿದೆ. ಅವರನ್ನು ಪೊಲೀಸರು ಹುಡುಕಾಡುತ್ತಿದ್ದಾರೆ’ ಎಂದರು.
‘ಇದು ಇಷ್ಟೊಂದು ದೀರ್ಘಕ್ಕೆ ಹೋಗಬಾರದಿತ್ತು. ಪ್ರೇಮ ಪ್ರಕರಣದ ಬಗ್ಗೆ ಮನೆಯ ಹಿರಿಯರು ಅಥವಾ ಗ್ರಾಮದ ಮುಖಂಡರು ಮಾತನಾಡಿ ಬಗೆಹರಿಸಬೇಕಿತ್ತು. ಯುವಕ– ಯುವತಿ ಪೊಲೀಸರಿಗೆ ದೂರು ನೀಡಿದ್ದರೂ ಸಮಸ್ಯೆ ಬಗೆಹರಿಸಬಹುದಿತ್ತು’ ಎಂದರು.
ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ರಾಮಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.