ಬೆಳಗಾವಿ: ‘ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಹೊಸ ಆವಿಷ್ಕಾರಗಳನ್ನು ಮಾಡಲು ಪ್ರಯತ್ನಿಸಬೇಕು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಸಲಹೆ ನೀಡಿದರು.
ನಗರದ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯಲ್ಲಿ ‘ಅಟಲ್ ಟಿಂಕರಿಂಗ್ ಪ್ರಯೋಗಾಲಯ’ವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಬೇಕು ಎನ್ನುವುದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸಾಗಿತ್ತು. ಅದನ್ನು ಸಾಕಾರಗೊಳಿಸಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ. ದೇಶದಾದ್ಯಂತ ಅಟಲ್ ಹೆಸರಲ್ಲಿ ಪ್ರಯೋಗಾಲಯ ಆರಂಭಿಸುತ್ತಿದೆ’ ಎಂದು ಹೇಳಿದರು.
‘ಭಾರತದ ಆರ್ಥಿಕ ಹಾಗೂ ತಾಂತ್ರಿಕ ಅಭಿವೃದ್ಧಿಗಾಗಿ ತಮ್ಮ ಬುಧ್ಧಿವಂತಿಕೆಯನ್ನು ಬಳಸಿಕೊಳ್ಳಬೇಕು. ಕ್ರಿಯಾಶೀಲರಾಗಿರಬೇಕು ಹಾಗೂ ಗುರುಗಳ ಮಾರ್ಗದರ್ಶನ ಪಡೆಯಬೇಕು’ ಎಂದು ಸಲಹೆ ನೀಡಿದರು.
ಬೆಳಗಾವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅವಿನಾಶ್ ಪೋತದಾರ ಮಾತನಾಡಿದರು. ಬೆಳಗಾವಿ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಸುಧೀರ ಕುಲಕರ್ಣಿ, ಕಾರ್ಯದರ್ಶಿಗಳಾದ ಶ್ರೀನಿವಾಸ ಶಿವಣಗಿ, ಮುಖ್ಯಶಿಕ್ಷಕ ಎಂ.ಕೆ. ಮಾದಾರ,ಬೆಳಗಾವಿ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳಾದ ವಿ.ಆರ್. ಗುಡಿ, ಆರ್.ಎನ್. ಕಂಕಣವಾಡಿ, ಸಂಸ್ಥೆಯ ಎಲ್ಲ ಶಾಲೆಗಳ ಮುಖ್ಯಶಿಕ್ಷಕರು ಇದ್ದರು.
ಶ್ರೀನಿವಾಸ ಶಿವಣಗಿ ಪ್ರಾಸ್ತಾವಿಕ ಮಾತನಾಡಿದರು. ನಿರೂಪಮಾ ತಾಳುಕರ ನಿರೂಪಿಸಿದರು. ಸುಧೀರ ಕುಲಕರ್ಣಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.