ADVERTISEMENT

ಅಥಣಿ ಪುರಸಭೆ: ಸವದಿ– ಜಾರಕಿಹೊಳಿಗೆ ಪ್ರತಿಷ್ಠೆ ಕಣ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 8:16 IST
Last Updated 31 ಆಗಸ್ಟ್ 2024, 8:16 IST
<div class="paragraphs"><p>ಅಥಣಿ ಪುರಸಭೆ ಕಾರ್ಯಾಲಯ</p></div>

ಅಥಣಿ ಪುರಸಭೆ ಕಾರ್ಯಾಲಯ

   

ಅಥಣಿ: ಅಥಣಿ ‍ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಮತ್ತೊಮ್ಮೆ ರಾಜಕೀಯ ಗುದ್ದಾಟಕ್ಕೆ ವೇದಿಕೆ ನೀಡಿದೆ. ಮೂಲ ಕಾಂಗ್ರೆಸ್ಸಿಗರಾದ ಪುರಸಭೆ 15 ಸದಸ್ಯರು ರೆಸಾರ್ಟ್‌ಗೆ ತೆರಳಿದ್ದಾರೆ. ಈ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಶಾಸಕ ಲಕ್ಷ್ಮಣ ಸವದಿ ಮಧ್ಯೆ ಪ್ರತಿಷ್ಠೆ ತಂದೊಡ್ಡಿದೆ.

ಪುರಸಭೆ ಗಾದಿಗೆ ಸೆ.2ರಂದು ಚುನಾವಣೆ ನಿಗದಿಯಾಗಿದೆ. 27 ಸದಸ್ಯ ಬಲದಲ್ಲಿ 15 ಕಾಂಗ್ರೆಸ್‌, 9 ಬಿಜೆಪಿ ಹಾಗೂ 3 ಪಕ್ಷೇತರರು ಇದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರೂ ಲಕ್ಷ್ಮಣ ಸವದಿ ಅವರನ್ನು ಬೆಂಬಲಿಸಿದ್ದರು. ಎಲ್ಲರೂ ಕಾಂಗ್ರೆಸ್‌ ಕಡೆಗೇ ಇರುವುದರಿಂದ ಪುರಸಭೆ ಗಾದಿ ಸುಲಭವಾಗಿ ಕಾಂಗ್ರೆಸ್‌ಗೆ ಸಿಗಲಿದೆ. ಆದರೆ, ಜಿದ್ದಾಜಿದ್ದಿ ಬಂದಿರುವುದು ಮೂಲ ಕಾಂಗ್ರೆಸ್ಸಿಗರು ಹಾಗೂ ಸವದಿ ಬೆಂಬಲಿತರ ಮಧ್ಯೆ.

ADVERTISEMENT

ಲೋಕಸಭಾ ಚುನವಣೆ ವೇಳೆ ಸಚಿವ ಸತೀಶ ಜಾರಕಿಹೊಳಿ ಹಾಗೂ ಶಾಸಕ‌ ಲಕ್ಷ್ಮಣ ಸವದಿ ನಡುವಿನ‌ ಅಸಮಾಧಾನ ಈಗ ಇನ್ನೊಂದು ಹಂತ ತಲುಪಿದೆ ಎಂಬುದು ಪಟ್ಟಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

15 ಮೂಲ ಕಾಂಗ್ರೆಸ್‌ ಸದಸ್ಯರು ಲಕ್ಷ್ಮಣ ಸವದಿ ಅವರನ್ನು ಕಡೆಗಣಿಸಿ, ಸತೀಶ ಜಾರಕಿಹೊಳಿ ಬೆನ್ನು ಹತ್ತಿದ್ದಾರೆ. ವಲಸೆ ಕಾಂಗ್ರೆಸ್ಸಿಗರಿಗೆ ಚುನಾವಣೆಯಲ್ಲಿ ಹಿನ್ನಡೆ ಮಾಡಲು ವಾರದಿಂದ ರೆಸಾರ್ಟ್‌ನಲ್ಲಿ ತಲೆಮರೆಸಿಕೊಂಡಿದ್ದಾರೆ. ಉಳಿದ 9 ವಲಸೆ ಕಾಂಗ್ರೆಸ್ಸಿಗರು ಹಾಗೂ 3 ಪಕ್ಷೇತರರು ಸವದಿ ಜತೆಗಿದ್ದಾರೆ.

ಅಧ್ಯಕ್ಷ ಗಾದಿಗೆ ಪೈಪೋಟಿ: ಈ ಬಾರಿ ಪುರಸಭೆ ಅಧ್ಯಕ್ಷ ಗಾದಿ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಮೂಲ ಕಾಂಗ್ರೆಸ್‌ನ ವಿದ್ಯಾ ರಾವಸಾಬ ಐಹೊಳೆ, ಶಿವಲೀಲಾ ಸದಾಶಿವ ಬುಟಾಳಿ, ಜುಲೈಕಾ ಖೇಮಲಾಪುರ ಹಾಗೂ ಸವದಿ ಬೆಂಬಲಿತರಲ್ಲಿ ಪಕ್ಷೇತರ ಶಾಂತಾ ದಿಲೀಪ ಲೋಣಾರಿ, ಲತಾ ತಿಪ್ಪಣ್ಣ ಭಜಂತ್ರಿ ಆಕಾಂಕ್ಷಿ ಆಗಿದ್ದಾರೆ. ಒಬ್ಬ ಶಾಸಕ, ಒಬ್ಬ ಸಂಸದೆ ಸೇರಿ 29 ಮತಗಳಿವೆ.

‘ಲೋಕಸಭೆಯಲ್ಲಿ ಅಥಣಿಯಲ್ಲಿ ಮೂಲ ಕಾಂಗ್ರೆಸ್ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಶಾಸಕ ಸವದಿಯೊಂದಿಗೆ ಬಂದವರು ಸರಿಯಾಗಿ ಪ್ರಚಾರ ಮಾಡಿಲ್ಲ’ ಎಂದು ಸಚಿವ ಸತೀಶ ಜಾರಕಿಹೊಳಿ ಚುನಾವಣೋತ್ತರ ಹೇಳಿಕೆ ನೀಡಿದ್ದರು. ಅಂದಿನಿಂದ ಕಾಂಗ್ರೆಸ್‌ ಒಡೆದ ಮನೆಯಾಗಿದೆ.

ಈಚೆಗೆ ನಡೆದ ಮುಖಂಡತ್ವ ಆಯ್ಕೆಯಲ್ಲೂ ಅಸಮಾಧಾನಗಳು ಸೃಷ್ಟಿಯಾಗಿವೆ. ಅದು ಪುರಸಭೆ ಚುನಾವಣೆ ಮೇಲೂ ಪ್ರಭಾವ ಬೀರುವುದು ನಿಚ್ಚಳವಾಗಿದೆ.

ಈಗತಾನೆ ವಿದೇಶ ಪ್ರವಾಸ ಮುಗಿಸಿ ಬಂದಿರುವ ಲಕ್ಷ್ಮಣ ಸವದಿ ತಂತ್ರ ಏನು ಎಂಬುದು ಇನ್ನೂ ಗೊತ್ತಾಗಬೇಕಿದೆ.

ಸತೀಶ ಜಾರಕಿಹೊಳಿ
ಲಕ್ಷ್ಮಣ ಸವದಿ
ಅಥಣಿ ಪುರಸಭೆಯಲ್ಲಿ ಮೂಲ ಕಾಂಗ್ರೆಸ್‌ನ 15 ಸದಸ್ಯರಲ್ಲಿ ಒಬ್ಬರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುವುದು ಖಚಿತ
ಸಿದ್ಧಾರ್ಥ ಶಿಂಗೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಥಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.