ADVERTISEMENT

ಬೆಳಗಾವಿ: ಮುಚ್ಚಿದ ರಸ್ತೆ– ಹಳ್ಳದಲ್ಲಿ ನಡೆದು ಶಾಲೆಗೆ ಹೋಗುವ ಮಕ್ಕಳು!

ನಾಗನೂರ–ಪಿಎ ಗ್ರಾಮದ ಶಾಲೆಗೆ ಹಳ್ಳದಲ್ಲಿ ನಡೆದುಕೊಂಡೇ ಹೋಗಬೇಕಿದೆ.

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 4:26 IST
Last Updated 1 ಅಕ್ಟೋಬರ್ 2024, 4:26 IST
<div class="paragraphs"><p>ಅಥಣಿ ತಾಲ್ಲೂಕಿನ ನಾಗನೂರು–ಪಿಎ ಗ್ರಾಮದ ಶಾಲೆಗೆ ಕಂಟೇಕರ ತೋಟದ ವಸತಿ ಪ್ರದೇಶದ ಮಕ್ಕಳು ಹಳ್ಳದಲ್ಲೇ ನಡೆದುಕೊಂಡು ಹೋಗುವುದು ಹೀಗೆ</p></div>

ಅಥಣಿ ತಾಲ್ಲೂಕಿನ ನಾಗನೂರು–ಪಿಎ ಗ್ರಾಮದ ಶಾಲೆಗೆ ಕಂಟೇಕರ ತೋಟದ ವಸತಿ ಪ್ರದೇಶದ ಮಕ್ಕಳು ಹಳ್ಳದಲ್ಲೇ ನಡೆದುಕೊಂಡು ಹೋಗುವುದು ಹೀಗೆ

   

ಕಾಗವಾಡ (ಬೆಳಗಾವಿ ಜಿಲ್ಲೆ): ಭೂಮಾಪನಾ ಇಲಾಖೆ ಅಧಿಕಾರಿಗಳು ಮಾಡಿದ ತಪ್ಪಿನಿಂದ ವಿದ್ಯಾರ್ಥಿಗಳು ತೋಟದ ವಸತಿ ಪ್ರದೇಶಗಳಿಂದ ನಾಗನೂರ–ಪಿಎ ಗ್ರಾಮದ ಶಾಲೆಗೆ ಹಳ್ಳದಲ್ಲಿ ನಡೆದುಕೊಂಡೇ ಹೋಗಬೇಕಿದೆ. ಅಥಣಿ ತಾಲ್ಲೂಕಿನಲ್ಲಿ ಇರುವ ಈ ಗ್ರಾಮವು ಕಾಗವಾಡ ವಿಧಾನಭಾ ಕ್ಷೇತ್ರಕ್ಕೆ ಒಳಪಟ್ಟಿದೆ.

ಕಂಟೇಕರ ತೋಟ, ಚೌಗಲಾ ತೋಟ ಮತ್ತು ‍ಪವಾರ ತೋಟದ ವಸತಿ ಪ್ರದೇಶದಲ್ಲಿ 40 ಶಾಲಾ ವಿದ್ಯಾರ್ಥಿಗಳು ಇದ್ದಾರೆ. ತೋಟದ ವಸತಿ ಮತ್ತು ಗ್ರಾಮದ ಮಧ್ಯೆ ಹಳ್ಳ ಹರಿದಿದೆ. ಈ ಹಿಂದೆ ಇದ್ದ ರಸ್ತೆಯನ್ನು ರೈತರ ಅಗೆದಿದ್ದಾರೆ. ಇದರಿಂದ ವಿದ್ಯಾರ್ಥಿಗಳು ತುಂಬಿ ಹರಿಯುವ ಹಳ್ಳದಲ್ಲೇ ನಡೆದುಕೊಂಡು ಹೋಗಬೇಕು. ಹೆಚ್ಚು ಮಳೆಯಾಗಿ ಹಳ್ಳದ ನೀರು ಏರಿದರೆ ಸುತ್ತಿ ಬಳಸಿ ಹೊಲ– ಗದ್ದೆಗಳಲ್ಲಿ ದಾಟಿಕೊಂಡು ಶಾಲೆ ತಲುಪಬೇಕು.

ADVERTISEMENT

ವಿದ್ಯಾರ್ಥಿಗಳು ಪ್ರತಿದಿನ ಶಾಲೆ ತಲುಪುವಷ್ಟರಲ್ಲೇ ಸಮವಸ್ತ್ರ ಕೆಸರುಮಯ ಆಗಿರುತ್ತದೆ. ಬೂಟು, ಸಾಕ್ಸ್‌ಗಳನ್ನು ಕೈಯಲ್ಲಿ ಹಿಡಿದು ಅಥವಾ ಸೊಂಟಕ್ಕೆ ಕಟ್ಟಿಕೊಂಡು ಶಾಲೆಗೆ ಹೋಗಬೇಕು. ಶಾಲಾ ಆವರಣದ ನೀರಿನಲ್ಲಿ ಮತ್ತೆ ಕೈಕಾಲು ತೊಳೆದು ಬೂಟುಗಳನ್ನು ಧರಿಸಬೇಕು. ಸಮವಸ್ತ್ರ ಅಲ್ಲದೇ ಶಾಲಾ ಬ್ಯಾಗು ಕೂಡ ಕೆಸರುಮಯ ಆಗಿರುತ್ತದೆ.

ಸಮಸ್ಯೆ ಏನು?

ನಾಗನೂರ–ಪಿಎ ಗ್ರಾಮ ಹಾಗೂ ಸಂಬರಗಿ ಗ್ರಾಮಗಳ ಮಧ್ಯೆ ಹಳ್ಳ ಇದೆ. ಈ ಎರಡೂ ಗ್ರಾಮಗಳ ಮಧ್ಯದಲ್ಲೇ ಈ ಮೂರು ತೋಟದ ವಸತಿ ಪ್ರದೇಶಗಳಿವೆ. ಗ್ರಾಮಗಳ ಮಧ್ಯೆ ಈ ಹಿಂದೆ ಕಚ್ಚಾ ರಸ್ತೆ ಇತ್ತು. ಆದರೆ, ಇಕ್ಕೆಲಗಳ ರೈತರ ತಮ್ಮ ಜಮೀನು ಎಂದು ಅದನ್ನು ಬಳಸಿ ಬಿತ್ತನೆ ಮಾಡಿದ್ದಾರೆ. ರಸ್ತೆಯ ಜಾಗ ಮತ್ತು ಹೊಲಗಳ ವ್ಯಾಪ್ತಿ ಎಷ್ಟು ಎಂದು ಸರಿಯಾಗಿ ಅಳತೆ ಮಾಡಿ ಕೊಡಬೇಕಾದ ಭೂ ಮಾಪನಾ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಇದರಿಂದ ರಸ್ತೆಯೇ ಮಾಯವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

‘ಪಂಚಾಯಿತಿ ಕೆಲಸ, ಆರ್ಥಿಕ ವ್ಯವಹಾರ, ಹೊಲಗದ್ದೆಗಳಿಗೆ ಹೋಗಲು ಜನರಿಗೆ ರಸ್ತೆಯೇ ಇಲ್ಲ. ಇದನ್ನು ಬಗೆಹರಿಸಲು ಹಲವು ಬಾರಿ ಅಥಣಿ ತಾಲ್ಲೂಕಿನ ಭೂ ಮಾಪನಾ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಕಾಗವಾಡ ಶಾಸಕ ಭರಮಗೌಡ (ರಾಜು) ಕಾಗೆ ಅವರು ಖುದ್ದಾಗಿ ಸೂಚಿಸಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ’ ಎಂದು ಗ್ರಾಮಸ್ಥ ಪ್ರಕಾಶ ಕಂಟೇಕರ ತಿಳಿಸಿದರು.

ಅಥಣಿ ತಾಲ್ಲೂಕಿನ ನಾಗನೂರು–ಪಿಎ ಗ್ರಾಮದ ಶಾಲೆಗೆ ಕಂಟೇಕರ ತೋಟದ ವಸತಿ ಪ್ರದೇಶದ ಮಕ್ಕಳು ಹಳ್ಳದಲ್ಲೇ ನಡೆದುಕೊಂಡು ಹೋಗುವುದು ಹೀಗೆ

ಸಮಸ್ಯೆ ಗಮನಕ್ಕೆ ಬಂದಿದೆ. ಹಲವು ಬಾರಿ ರಸ್ತೆ ಮಾಪನ ಮಾಡಿ ರೈತರಿಗೆ ತಿಳಿಸಲಾಗಿದೆ. ಆದರೂ ಅತಿಕ್ರಮಣ ಮಾಡುತ್ತಿದ್ದಾರೆ. ಮತ್ತೊಮ್ಮೆ ಅಳತೆ ಮಾಡಿಸಲಾಗುವುದು.

–ಪುನೀತ ಪಾಸೋಡಿ ಸಹಾಯಕ ನಿದೇರ್ಶಕ ಭೂ ಮಾಪನ ಇಲಾಖೆ ಅಥಣಿ

ಪ್ರತಿ ದಿನ ಹಳ್ಳ ದಾಟಿ ಹೋಗಬೇಕಿದೆ. ಬೂಟು ಕೈಯಲ್ಲಿ ಹಿಡಿದುಕೊಳ್ಳಬೇಕು. ಕಾಲಿಗೆ ಕಲ್ಲು ಮುಳ್ಳು ಚುಚ್ಚುತ್ತವೆ. ಮಳೆ ಹೆಚ್ಚಾದರೆ ಶಾಲೆಗೆ ಹೋಗಲು ಆಗುವುದಿಲ್ಲ.

–ಬಸವರಾಜ ಕಂಟೇಕರ, ವಿದ್ಯಾರ್ಥಿ‌ ಕಂಟೇಕರ ತೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.