ಬೆಳಗಾವಿ: ರಾಜ್ಯದೊಂದಿಗೆ ಮಹಾರಾಷ್ಟ್ರ, ತಮಿಳುನಾಡು, ಗೋವಾ ಹಾಗೂ ಆಂಧ್ರಪ್ರದೇಶದ ಆಟೊಮೊಬೈಲ್ ತಯಾರಿಕಾ ಕಂಪನಿಗಳಿಗೆ ಬಿಡಿಭಾಗಗಳನ್ನು ಪೂರೈಸುವ ಇಲ್ಲಿನ ಆಟೊಮೊಬೈಲ್ ಉದ್ಯಮ ಆರ್ಥಿಕ ಹಿಂಜರಿತದಿಂದಾಗಿ ‘ಪಾರ್ಶ್ವವಾಯು’ ಪೀಡಿತವಾಗಿದೆ.
ಕಾರ್ಮಿಕರಿಗೆ ‘ಅರ್ಧ ಸಂಬಳ’ ನೀಡುವಂತಹ ಸ್ಥಿತಿ ಬಂದಿದೆ. ಹೀಗೆಯೇ ಮುಂದುವರಿದರೆ ಕೆಲವೇ ತಿಂಗಳಲ್ಲಿ ಉದ್ಯೋಗ ಕಳೆದುಕೊಳ್ಳುವ ಸ್ಥಿತಿ ಸಾವಿರಾರು ಕಾರ್ಮಿಕರದಾಗಲಿದೆ.
ಬೇಡಿಕೆಯು ತೀವ್ರವಾಗಿ ಕುಸಿತ ಕಂಡಿರುವುದರಿಂದ ಕೈಗಾರಿಕೆಗಳಲ್ಲಿ ಕೆಲಸದ ಪ್ರಮಾಣ ಕಡಿಮೆಯಾಗಿದೆ. ಆಟೊಮೊಬೈಲ್ ಅವಲಂಬಿಸಿರುವ ಹೈಡ್ರಾಲಿಕ್ಸ್, ಫೌಂಡ್ರಿ (ಎರಕ) ಘಟಕಗಳಲ್ಲೂ ಸ್ಥಿತಿ ಭಿನ್ನವಾಗಿಲ್ಲ. ಪ್ರಸ್ತುತ ಶೇ 40 ರಷ್ಟು ಕಾರ್ಮಿಕರಿಗಷ್ಟೇ ತಿಂಗಳು ಪೂರ್ತಿ ಕೆಲಸ ಸಿಗುತ್ತಿದೆ. ಉಳಿದವರಿಗೆ ಅರ್ಧ ತಿಂಗಳಷ್ಟೇ ಕೆಲಸ ಕೊಡಲಾಗುತ್ತಿದೆ. ಬಹುತೇಕ ಘಟಕಗಳಲ್ಲಿ ಮೂರ್ನಾಲ್ಕು ಪಾಳಿಗಳ ಬದಲಿಗೆ ಗರಿಷ್ಠ ಎರಡು ಪಾಳಿಗಳಷ್ಟೇ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿವೆ.
‘ಈಗಾಗಲೇ ಸಿದ್ಧಗೊಂಡಿರುವ ಬಿಡಿಭಾಗಗಳು ಮಾರಾಟವಾದರೆ ಸಾಕಾಗಿದೆ. ಗುತ್ತಿಗೆ ಕಾರ್ಮಿಕರ ಕಾಂಟ್ರಾಕ್ಟ್ ನವೀಕರಿಸಲಾಗದ ಸ್ಥಿತಿ ಇದೆ. ಇದೇ ಪರಿಸ್ಥಿತಿ ಮುಂದುವರಿದರೆ ಕೈಗಾರಿಕೆಗಳು ಮುಚ್ಚುತ್ತವೆ. ಲಕ್ಷಾಂತರ ರೂಪಾಯಿ ಸಾಲ ಮಾಡಿರುವ ನಾವೂ ಕಾರ್ಮಿಕರೊಂದಿಗೆ ಬೀದಿಗೆ ಬೀಳಬೇಕಾಗುತ್ತದೆ’ ಎನ್ನುತ್ತಾರೆ ಉದ್ಯಮಿಗಳು.
‘ಫೌಂಡ್ರಿ ಉದ್ಯಮದಲ್ಲಿ ಶೇ 30ರಷ್ಟು ಉತ್ಪಾದನೆ ಕಡಿಮೆಯಾಗಿದೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ನಷ್ಟವಾಗುತ್ತಿದೆ. ಮಷಿನ್ ಶಾಪ್‌ಗಳವರೂ ವ್ಯತಿರಿಕ್ತ ಪರಿಣಾಮ ಎದುರಿಸುತ್ತಿದ್ದಾರೆ’ ಎಂದು ಫೌಂಡ್ರಿ ಕ್ಲಸ್ಟರ್ ಅಧ್ಯಕ್ಷ ರಾಮ್ ಭಂಡಾರಿ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.