ಅಥಣಿ : ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಹೈಟೆಕ್ ಮಾದರಿಯ ಸೌಲಭ್ಯಗಳು ಮತ್ತು ತಜ್ಞ ವೈದ್ಯರ ಮತ್ತು ಸಿಬ್ಬಂದಿಯ ಉತ್ತಮ ಸೇವೆಯಿಂದ ಇತ್ತೀಚಿಗೆ ನಡೆದ ಕೇಂದ್ರ ಸರ್ಕಾರದ ನಿಲಕ್ಷ್ಯ ಕಾರ್ಯಕ್ರಮದ ರಾಷ್ಟ್ರೀಯ ಪ್ರಸಂಶನಾ ಪ್ರಸಸ್ತಿ ದೊರಕಿದೆ.
ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ.ಮುರುಗೇಶ ಮತ್ತು ತೃಪ್ತಿ ನಂದಾ ನೇತೃತ್ವದ ವೈದ್ಯರ ತಂಡ ಕಳೆದ ಮೇ 22ರಂದು ಅಥಣಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಇಲ್ಲಿನ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಒದಗಿಸುತ್ತಿರುವ ಆರೋಗ್ಯ ಸೇವೆಗಳ ಬಗ್ಗೆ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.
ಇಲ್ಲಿನ ಸರ್ಕಾರಿ ಆಸ್ಪತ್ರೆಯು 100 ಹಾಸಿಗೆ ಸೌಲಭ್ಯ ಹೊಂದಿದೆ. ಉತ್ತಮ ಸೌಲಭ್ಯ, ಕೊಠಡಿಗಳ ವ್ಯವಸ್ಥೆ ಹೊಂದಿದೆ.
ಹೆರಿಗೆ ವಿಭಾಗದಲ್ಲಿ ಶೇ 85 ರಷ್ಟು ಅಂಕಗಳನ್ನು ಪಡೆದುಕೊಂಡರೆ, ಶಸ್ತ್ರಚಿಕಿತ್ಸೆ ಕೋಣೆಗೆ ಶೇ 78 ರಷ್ಟು ಅಂಕಗಳನ್ನು ಪಡೆದು ಗುಣಾತ್ಮಕ ಸುಧಾರಣೆಗಾಗಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಜಿಲ್ಲಾ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಶಾಸಕ ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
’ನಮ್ಮ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 250ಕ್ಕೂ ಹೆರಿಗೆಗಳು ಆಗುತ್ತವೆ. ವಿವಿಧ ಕಾಯಿಲೆಗಳಿಗೆ ಸಂಬಂಧಿಸಿದಂತೆ 200ಕ್ಕೂ ಅಧಿಕ ಶಸ್ತ್ರಚಿಕಿತ್ಸೆಗಳು ನಡೆಯುತ್ತವೆ. ಇತ್ತೀಚಿಗೆ ಕೇಂದ್ರ ಸರ್ಕಾರ ಲಕ್ಷ್ಯ ಕಾರ್ಯಕ್ರಮದಡಿ ವೈದ್ಯರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಆಸ್ಪತ್ರೆಯ ಎಲ್ಲಾ ತಜ್ಞ ವೈದ್ಯರ ಮತ್ತು ಸಿಬ್ಬಂದಿಯ ಸಹಕಾರ ಮತ್ತು ಉತ್ತಮ ಸೇವೆಗೆ ಈ ಪ್ರಶಸ್ತಿ ಸಲ್ಲುತ್ತದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಬಸಗೌಡ ಕಾಗೆ ಹೇಳಿದರು.
’ಅಥಣಿ ಸಾರ್ವಜನಿಕ ಆಸ್ಪತ್ರೆ ರಾಷ್ಟ್ರೀಯ ಪ್ರಸಂಶನಾ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತೋಷದ ವಿಚಾರ. ಆಸ್ಪತ್ರೆಯನ್ನು ಇನ್ನಷ್ಟು ಮೇಲ್ದರ್ಜೆಗೆರಿಸಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಆದಷ್ಟು ಬೇಗನೆ ಪ್ರಾರಂಭಿಸಬೇಕು. ಇಲ್ಲಿ ಅರವಳಿಕೆ ತಜ್ಞರ ನೇಮಕ ಮಾಡಬೇಕು. ಇದರಿಂದ ರೋಗಿಗಳಿಗೆ ಇನ್ನಷ್ಟು ಉತ್ತಮ ಸೇವೆ ದೊರಕಲು ಸಾಧ್ಯವಿದೆ’ ಎಂದು ಇಲ್ಲಿನ ಕರವೇ ಅಧ್ಯಕ್ಷ (ಪ್ರವೀಣ್ ಶೇಟ್ಟಿ ಬಣ) ಅಣ್ಣಾಸಾಬ ತೆಲಸಂಗ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.