ADVERTISEMENT

ಕೋಲಾರದಿಂದ ಸ್ಪರ್ಧೆ: ಸಿದ್ದರಾಮಯ್ಯ ನಾಟಕ– ಬಿ.ಎಸ್‌.ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 13:26 IST
Last Updated 23 ಜನವರಿ 2023, 13:26 IST
ಶಾಸಕ ಬಿ.ಎಸ್‌.ಯಡಿಯೂರಪ್ಪ
ಶಾಸಕ ಬಿ.ಎಸ್‌.ಯಡಿಯೂರಪ್ಪ   

ಬೆಳಗಾವಿ: ‘ಸಿದ್ದರಾಮಯ್ಯ ಅವರು ಕೋಲಾರದಿಂದ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ. ಅವರು ನಾಟಕ ಮಾಡುತ್ತಿದ್ದಾರೆ. ಮೈಸೂರಿಗೆ ಬರಲು ಯತ್ನ ನಡೆಸಿದ್ದಾರೆ’ ಎಂದು ಶಾಸಕ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಸೋಮವಾರ ಮಧ್ಯಮದವರೊಂದಿಗೆ ಮಾತನಾಡಿದ ಅವರು, ‘ನಾನೇನು ಭವಿಷ್ಯ ಹೇಳುತ್ತಿಲ್ಲ. ಖಚಿತವಾಗಿ ಮಾತನಾಡುತ್ತಿದ್ದೇನೆ. ಸಿದ್ದರಾಮಯ್ಯ ಮಾಡುತ್ತಿರುವುದೆಲ್ಲ ಬರೀ ಡೊಂಬರಾಟ. ಕೋಲಾರದಲ್ಲಿ ಚುನಾವಣೆಗೆ ನಿಂತರೆ ಅವರು ಮನೆ ಹಾದಿ ಹಿಡಿಯುವುದು ನಿಶ್ಚಿತ. ಅವರು ಎಲ್ಲೇ ಸ್ಪರ್ಧಿಸಲಿ; ಈ ಬಾರಿ ಅವರನ್ನು ಸೋಲಿಸಿ ಮನೆಗೆ ಕಳಿಸುವುದು ನಮ್ಮ ಗುರಿ’ ಎಂದರು.

‘ಬಿಜೆಪಿಯಲ್ಲಿ ಮಾಸ್‌ ಲೀಡರ್‌ ಇಲ್ಲ’ ಎಂಬ ಸಿದ್ದರಾಮಯ್ಯ ಹೇಳಿಕೆ ಹಾಸ್ಯಾಸ್ಪದ. ನಮಗೆ ವಿಶ್ವನಾಯಕ ನರೇಂದ್ರ ಮೋದಿ ಇದ್ದಾರೆ. ಅವರಿಗೆ ಯಾರಿದ್ದಾರೆ? ಇದೇ ಸಿದ್ದರಾಮಯ್ಯ ರಾಹುಲ್‌ ಗಾಂಧಿ ಅವರ ಹಿಂದೆ–ಹಿಂದೆ ಓಡುತ್ತಿಲ್ಲವೇ? ಬಲಿಷ್ಠ ನಾಯಕ ಇಲ್ಲದ ಕಾರಣವೇ ಕಾಂಗ್ರೆಸ್‌ ಎಲ್ಲ ಕಡೆ ಸೋಲು ಕಾಣುತ್ತಿದೆ’ ಎಂದರು.

ADVERTISEMENT

‘ರಾಜ್ಯದ ಕಾಂಗ್ರೆಸ್ಸಿಗರು ತಬ್ಬಲಿಗಳಂತೆ ಅಲೆಯುತ್ತಿದ್ದಾರೆ. ಡಿ.ಕೆ.ಶಿವಕುಮಾರ ಹಾಗೂ ಸಿದ್ದರಾಮಯ್ಯ ಸ್ವಲ್ಪ ಉಸಿರಾಡುತ್ತಿದ್ದಾರೆ. ಪ್ರತಿಭಟನೆ ಮಾಡುತ್ತಿದ್ದಾರೆ. ಈ ಬಾರಿ ಚುನಾವಣೆ ಮುಗಿದ ಬಳಿಕ ಅವರಿಬ್ಬರ ಉಸಿರೂ ನಿಲ್ಲುತ್ತದೆ. ನಾವು 140 ಸೀಟ್‌ ಗೆಲ್ಲುವುದು ನಿಶ್ಚಿತ’ ಎಂದೂ ಅವರು ಹೇಳಿದರು.

ರಾಜ್ಯ ಬಿಜೆಪಿ ನಾಯಕರು ನಿಮ್ಮಿಂದ ಅಂತರ ಕಾಯ್ದುಕೊಂಡಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಮೂರು ದಿನಗಳಲ್ಲಿ ನಾನು ಮತ್ತೆ ರಾಜ್ಯ ಪ್ರವಾಸ ಆರಂಭಿಸುತ್ತೇನೆ. ಬಿಜೆಪಿ ಅಧಿಕಾರಕ್ಕೆ ತರುವವರೆಗೂ ವಿಶ್ರಮಿಸುವುದಿಲ್ಲ. ಪ್ರಧಾನಿ ಮೋದಿ ಅವರು ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ನಾನು ನಿಭಾಯಿಸುತ್ತೇನೆ. ನನ್ನನ್ನು ಯಾರು ಕರೆಯುತ್ತಾರೋ, ಬಿಡುತ್ತಾರೋ ಎಂಬುದು ನನಗೆ ಬೇಕಿಲ್ಲ. ನನ್ನ ಕರ್ತವ್ಯ ನಾನು ಮಾಡುತ್ತೇನೆ’ ಎಂದು ಉತ್ತರಿಸಿದರು.

ಬೇರೆ ಬೇರೆ ವಿಮಾನ:
ಬೆಳಗಾವಿಯಲ್ಲಿ ನಡೆದ ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಅವರ ಇಬ್ಬರು ಪುತ್ರರ ಮದುವೆಗೆ, ಬಸವರಾಜ ಬೊಮ್ಮಾಯಿ ಹಾಗೂ ಬಿ.ಎಸ್‌. ಯಡಿಯೂರಪ್ಪ ಪ್ರತ್ಯೇಕ ವಿಮಾನಗಳಲ್ಲಿ ಬಂದರು.

ಬೆಂಗಳೂರು– ಬೆಳಗಾವಿ ಮಾರ್ಗದ ದೈನಂದಿನ ವಿಮಾನಕ್ಕೆ ಬಂದ ಯಡಿಯೂರಪ್ಪ ನೇರವಾಗಿ ಮದುವೆ ಮಂಟ‍‍ಪಕ್ಕೆ ತೆರಳಿದರು. ನಂತರ ಬಸವರಾಜ ಬೊಮ್ಮಾಯಿ, ಆರ್‌.ಅಶೋಕ, ಬೈರತಿ ಬಸವರಾಜ ವಿಶೇಷ ವಿಮಾನದಲ್ಲಿ ಬಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.