ಬೆಳಗಾವಿ: ಇಲ್ಲಿನ ಸರ್ದಾರ್ ಪ್ರೌಢಶಾಲೆ ಮೈದಾನದಲ್ಲಿ ದೀಪಾವಳಿ (ಬಲಿಪಾಢ್ಯಮಿ) ಅಂಗವಾಗಿ ಭಾನುವಾರ ಆಯೋಜಿಸಲಾಗಿದ್ದ ಎಮ್ಮೆಗಳ ಪ್ರದರ್ಶನದ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿ, ಕಲ್ಲು ತೂರಾಟ ನಡೆದಿದ್ದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಘಟನೆಯಲ್ಲಿ ಐದಾರು ಮಂದಿ ಗಾಯಗೊಂಡರು.
ಬಲಿಪಾಢ್ಯಮಿಯಂದು ಎಮ್ಮೆಗಳ ಮೆರವಣಿಗೆ ನಡೆಯುವುದು ಸಾಮಾನ್ಯ. ವಿವಿಧ ಪ್ರದೇಶದ ಜನರು ತಮ್ಮ ಎಮ್ಮೆಗಳನ್ನು ಸಿಂಗರಿಸಿ, ಅವುಗಳನ್ನು ಮೆರವಣಿಗೆಯಲ್ಲಿ ಸರ್ದಾರ್ ಮೈದಾನಕ್ಕೆ ತಂದಿದ್ದರು. ಇದನ್ನು ವೀಕ್ಷಿಸಲು ನೂರಾರು ಮಂದಿ ಭಾಗವಹಿಸಿದ್ದರು. ಈ ಸಂದರ್ಭ ಕೆಲವು ಯುವಕರು ಕನ್ನಡ ಧ್ವಜ ಹಾಗೂ ಕೆಲವರು ಭಗವಾಧ್ವಜ ಹಾರಿಸುತ್ತಿದ್ದರು. ಈ ವಿಚಾರವಾಗಿ ತಳ್ಳಾಟ, ನೂಕಾಟ ನಡೆಯಿತು. ಗಲಾಟೆಯೂ ಆಯಿತು. ಸ್ಥಳದಲ್ಲಿದ್ದ ಪೊಲೀಸರು ಮಧ್ಯಪ್ರವೇಶಿಸಿ, ಗುಂಪು ಚದುರಿಸಿದರು. ಇದಾದ ನಂತರ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆಯಿತು. ಈ ವೇಳೆ, ಪೊಲೀಸರು ಲಘು ಲಾಠಿಪ್ರಹಾರ ನಡೆಸಿ, ಪರಿಸ್ಥಿತಿ ಹತೋಟಿಗೆ ತಂದರು. ನೆರೆದಿದ್ದವರು ದಿಕ್ಕಾಪಾಲಾಗಿ ಓಡಿ ಹೋದರು. ಗಲಾಟೆಯಿಂದಾಗಿ ಪ್ರದರ್ಶನವನ್ನು ಮೊಟಕುಗೊಳಿಸಲಾಯಿತು.
‘ಗಾಯಗೊಂಡವರ ಮಾಹಿತಿ ಬಂದಿಲ್ಲ. ಕಲ್ಲು ತೂರಾಟ ಮಾಡಿದ ಆರೋಪದ ಮೇಲೆ ಕೆಲವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ’ ಎಂದು ಖಡೇಬಜಾರ್ ಠಾಣೆ ಪೊಲೀಸರು ತಿಳಿಸಿದರು.
ಪ್ರದರ್ಶನಕ್ಕೆ ಚಾಲನೆ:ಇದಕ್ಕೂ ಮುನ್ನ ಎಮ್ಮೆಗಳ ಪ್ರದರ್ಶನಕ್ಕೆ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಚಾಲನೆ ನೀಡಿದರು. ‘ಇದು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಹಬ್ಬವಾಗಿದೆ. ಎಮ್ಮೆಗಳನ್ನು ಮಕ್ಕಳಂತೆ ಸಿಂಗರಿಸಿ ಪ್ರದರ್ಶಿಸುವುದು ಹಬ್ಬದ ವಿಶೇಷವಾಗಿದೆ. ನಗರದಲ್ಲಿ ಎಲ್ಲ ಭಾಷಿಕರು ಹಾಗೂ ಧರ್ಮದವರು ಒಗ್ಗಟ್ಟಾಗಿದ್ದಾರೆ. ಸೌಹಾರ್ದದಿಂದ ಜೀವನ ನಡೆಸುತ್ತಿದ್ದಾರೆ. ಸಾಮರಸ್ಯ ಕಾಪಾಡಿಕೊಂಡು ಹೋಗುತ್ತಿದ್ದಾರೆ’ ಎಂದು ಹೇಳಿದರು.
ಗೌಳಿ ಗಲ್ಲಿ, ಚವಾಟ ಗಲ್ಲಿ, ಕಾಮತ್ ಗಲ್ಲಿ, ಗಾಂಧಿ ನಗರ ಸೇರಿದಂತೆ ವಿವಿಧೆಡೆಯಿಂದ ಜನರು ತಮ್ಮ ಎಮ್ಮೆಗಳೊಂದಿಗೆ ಪಾಲ್ಗೊಂಡಿದ್ದರು. ಎಮ್ಮೆಗಳ ಕೊಂಬುಗಳಿಗೆ ನವಿಲುಗರಿ, ಕವಡೆ ಸರ ಕಟ್ಟಿ ವಿಶೇಷವಾಗಿ ಅಲಂಕರಿಸಿದ್ದರು. ಬಹುತೇಕ ಎಮ್ಮೆಗಳಿಗೆ ಬಣ್ಣ ಬಳಿಯಲಾಗಿತ್ತು. ಅವುಗಳನ್ನು ನೋಡಲು ಪೆವಿಲಿಯನ್ ಹಾಗೂ ಮೈದಾನದ ಅಲ್ಲಲ್ಲಿ ಸಾವಿರಾರು ಮಂದಿ ಸೇರಿದ್ದರು. ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.