ADVERTISEMENT

ಬೈಲಹೊಂಗಲ ಉತ್ಸವ: ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ

ರವಿ ಎಂ.ಹುಲಕುಂದ
Published 30 ಅಕ್ಟೋಬರ್ 2024, 6:00 IST
Last Updated 30 ಅಕ್ಟೋಬರ್ 2024, 6:00 IST
ಬೈಲಹೊಂಗಲ ಉತ್ಸವದಲ್ಲಿ ಸೋಮವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆದವು
ಬೈಲಹೊಂಗಲ ಉತ್ಸವದಲ್ಲಿ ಸೋಮವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆದವು   

ಬೈಲಹೊಂಗಲ (ದೊಡ್ಡಬಾವೆಪ್ಪ ವೇದಿಕೆ): ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮ ಸಮಾಧಿ ಸ್ಥಳದಲ್ಲಿ ಕಿತ್ತೂರು ಚನ್ನಮ್ಮನ ವಿಜಯೋತ್ಸವ 200ನೇ ವರ್ಷಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ ಸೋಮವಾರ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

ತಂಪಾದ ಇಳಿ ಸಂಜೆಯಲ್ಲಿ ಭವ್ಯ ವೇದಿಕೆಯಲ್ಲಿ ನಡೆದ ನೃತ್ಯ, ಗಾಯನ, ಸಂಗೀತ, ನಾಟಕ, ನಗೆ ಹಬ್ಬ, ರಸಮಂಜರಿ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡವು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಹಾಡಿದ ‘ಜಸ್ಟ್ ಮಾತ್ ಮಾತಲ್ಲಿ’ ಚಿತ್ರದ ‘ಕುಂತಲ್ಲೂ ನೀನೇ, ನಿಂತಲ್ಲೂ ನೀನೇ, ಎಲ್ಲೆಲ್ಲೂ ನೀನೇ ಸಖಿ’ ಗೀತೆಗೆ ಪ್ರೇಕ್ಷಕರು ಚಪ್ಪಾಳೆ ತಟ್ಟಿದರು.

ADVERTISEMENT

ಗಾಯಕ ಶ್ರೀರಾಮ ಕಾಸರ ಹಾಗೂ ತಂಡದವರು ಹಾಡಿದ ರುಕ್ಕಮ್ಮ, ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು, ಏನಿಲ್ಲ ಏನಿಲ್ಲ, ಗೀತೆಗೆ ಜನತೆ ಕುಣಿದು ಕುಪ್ಪಳಿಸಿದರು.

ಕಿತ್ತೂರು ರಾಣಿ ಚನ್ನಮ್ಮ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳ ಮಹಾಭಾರತ ಪ್ರದರ್ಶನ ರೋಮಾಂಚನಕಾರಿಯಾಗಿತ್ತು. ನೀಲಕಂಠೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಚನ್ನಮ್ಮ ನಾಟಕ ಪ್ರದರ್ಶಿಸಿದರು. ಲಿಟಲ್ ಹಾರ್ಟ್ ಪ್ರೌಢಶಾಲೆ ವಿದ್ಯಾರ್ಥಿಗಳು ಕನ್ನಡ ಗೀತೆ, ಕಾರ್ಮೆಲ್ ವಿದ್ಯಾ ವಿಕಾಸ ಕೇಂದ್ರದ ಕನ್ನಡ ನಾಡಿನ ವೈಭವ ಕುರಿತು ನೃತ್ಯ, ಶ್ರೀಸಾಯಿ ಯೋಗ, ಪ್ರಿಯಾಂಕಾ ಸರಸಟ್ಟಿ, ಜ್ಯೋತಿ ತಳವಾರ, ಸೌಭಾಗ್ಯಲಕ್ಷ್ಮೀ ಭರತನಾಟ್ಯ, ನಾಗರತ್ನ ಹಡಗಲಿ ಸಮೂಹ ನೃತ್ಯ, ಶ್ರಾವಣಿ ಸಂಗೀತ ವಿದ್ಯಾಲಯದ ಸುಗಮ ಸಂಗೀತ, ಆನಂದ ಬಡಿಗೇರ ಅವರ ಸ್ವ ರಚಿತ ಚನ್ನಮ್ಮನ ಗೀತೆ ರಂಜಿಸಿದವು. ಆರು ವರ್ಷದ ಬಾಲಕಿ ಮಾಹೇರಾ ಫರೇಸಿ ಚನ್ನಮ್ಮನ ವೇಷದಲ್ಲಿ ಮಿಂಚಿದಳು. ಪತ್ರಕರ್ತ ರವಿ ಹುಲಕುಂದ ವೀರಮದಕರಿ ಡೈಲಾಗ್ ಹೇಳಿದರು. ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ರೂಪಕ ಜರುಗಿದವು. ಸಾವಿರಾರು ಜನರು ತಡರಾತ್ರಿವರೆಗೂ ಕಾರ್ಯಕ್ರಮ ವೀಕ್ಷಿಸಿದರು.

ಅತ್ಯಾಕರ್ಷಕ ದೀಪಾಲಂಕಾರ

ಇದೇ ಮೊದಲ ಬಾರಿಗೆ ನಡೆದ ಬೈಲಹೊಂಗಲ ಉತ್ಸವದಲ್ಲಿ ಚನ್ನಮ್ಮನ ಸಮಾಧಿ ಸ್ಥಳ ಜೋಡು ರಸ್ತೆಗೆ ಅಳವಡಿಸಿದ್ದ ವರ್ಣರಂಜಿತ ವಿದ್ಯುತ್ ದೀಪಾಲಂಕಾರ ಕಂಗೊಳಿಸಿತು. ವೀರ ಮಾತೆ ಕಿತ್ತೂರು ಚನ್ನಮ್ಮನ ಪ್ರತಿಮೆಗೆ ಫಲಪುಷ್ಪಗಳಿಂದ ಪೂಜಿಸಲಾಯಿತು. ಇಡೀ ದಿನ ಸಹಸ್ರಾರು ಜನರು ಚನ್ನಮ್ಮನ ಸಮಾಧಿ ಸ್ಥಳಕ್ಕೆ ಬಂದು ಸೆಲ್ಫಿ ತೆಗೆದುಕೊಂಡು ಚನ್ನಮ್ಮನ ಪ್ರತಿಮೆಗೆ ನಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.