ಬೈಲಹೊಂಗಲ: ವೀರರಾಣಿ ಕಿತ್ತೂರು ಚನ್ನಮ್ಮನ ಸ್ಮರಣೋತ್ಸವ ಸಮಿತಿ ವತಿಯಿಂದ ಅ.21 ರಂದು ನೀಡಿದ್ದ ಬೈಲಹೊಂಗಲ ಬಂದ್ ಕರೆಯನ್ನು ಪಟ್ಟಣದ ಉಪವಿಭಾಗಾಧಿಕಾರಿ ಕಾರ್ಯಾಲಯದಲ್ಲಿ ಭಾನುವಾರ ಸಂಜೆ ನಡೆದ ತುರ್ತು ಸಭೆಯಲ್ಲಿ ವಾಪಸ್ ಪಡೆಯಲಾಯಿತು.
ಬೈಲಹೊಂಗಲದ ಚನ್ನಮ್ಮನ ಸಮಾಧಿ ಸ್ಥಳದಲ್ಲಿ ಚನ್ನಮ್ಮನ 200ನೇ ವಿಜಯೋತ್ಸವದ ಅಂಗವಾಗಿ ಸಮಾಧಿ ಸ್ಥಳ ಸ್ವಚ್ಚತೆ, ಅಲಂಕಾರ, ಶಾಲೆ, ಕಾಲೇಜು, ಸಂಘ, ಸಂಸ್ಥೆ, ರೂಪಕಗಳ ಜೊತೆ ಭವ್ಯ ಮೆರವಣಿಗೆ, ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಬೇಕು. ಸುತ್ತಮುತ್ತಲಿನ ಕಲಾವಿದರೊಂದಿಗೆ ಕಲಾಮೇಳ, ರಸಮಂಜರಿ ನಡೆಸಬೇಕು.
ಫೆ.2 ರಂದು ಸರ್ಕಾರದಿಂದ ಚನ್ನಮ್ಮನ ಸ್ಮರಣೋತ್ಸವ ನಡೆಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗೆ ಸಮಿತಿ ಮನವಿ ಮಾಡಿತ್ತು. ಇದಕ್ಕೆ ಸ್ಪಂದಿಸದ್ದರಿಂದ ಬೈಲಹೊಂಗಲ ಬಂದ್ ಕರೆ ನೀಡಲಾಗಿತ್ತು. ಮನವಿಗೆ ಸ್ಪಂದನೆ ಸಿಕ್ಕಿದ್ದರಿಂದ ಶಾಸಕರ, ಅಧಿಕಾರಿಗಳ ಭರವಸೆ ಮೇರೆಗೆ ಬಂದ್ ಕರೆ ವಾಪಸ್ ಪಡೆಯಲಾಗಿದೆ.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಹೋರಾಟಗಾರ ಬೇಡಿಕೆಯಂತೆ ಅ.28 ರಂದು ರಾಜ್ಯ ಸರ್ಕಾರದಿಂದ ಕಾರ್ಯಕ್ರಮ ಆಯೋಜಿಸಲಾಗುವುದು. ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಿಂದ ರೂಪಕಗಳು, ಕಲಾಮೇಳ ಮೆರವಣಿಗೆ, ವಿಚಾರ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದರು.
ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಪಂಚಮಸಾಲಿ ಸಮಾಜ ತಾಲ್ಲೂಕು ಘಟಕ ಅಧ್ಯಕ್ಷ ಶ್ರೀಶೈಲ ಬೋಳನ್ನವರ, ಚನ್ನಮ್ಮನ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ಮುರುಗೇಶ ಗುಂಡ್ಲೂರ, ವಕೀಲ ಎಫ್.ಎಸ್.ಸಿದ್ದನಗೌಡರ, ಶಂಕರ ಮಾಡಲಗಿ, ಬಸವರಾಜ ಜನ್ಮಟ್ಟಿ, ಗುರು ಮೆಟಗುಡ್ಡ ಮಾತನಾಡಿದರು.
ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ, ಸಿಪಿಐ ಪಂಚಾಕ್ಷರಿ ಸಾಲಿಮಠ, ಶಿವಾನಂದ ಬೆಳಗಾವಿ, ಸುನೀಲ ಪಾಟೀಲ, ಬಿ.ಬಿ.ಸಂಗನಗೌಡರ, ಮಹಾಂತೇಶ ಅಕ್ಕಿ, ಮಡಿವಾಳಪ್ಪ ಹೋಟಿ, ಗಂಗಪ್ಪ ಗುಗ್ಗರಿ, ಬಾಬುಸಾಬ ಸುತಗಟ್ಟಿ, ಮಹೇಶ ಕೋಟಗಿ, ಮುಸ್ಲಿಂ ಸಮಾಜದವರು, ಸ್ವಾಭಿಮಾನಿ ಕ್ರಿಯಾ ಗೆಳೆಯರ ಬಳಗ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.