ಚಿಕ್ಕೋಡಿ: ತಾಲ್ಲೂಕಿನ ಇಟ್ನಾಳ ಗ್ರಾಮದ ರೈತ ಶಿವಪ್ಪ ಶೆಂಡೂರೆ ಅವರಿಗೆ ಸೇರಿದ ಪಂಜಾಬಿನ ಬೀಟಲ್ ತಳಿಯ ಮೇಕೆಯೊಂದು ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ₹ 1.80 ಲಕ್ಷಕ್ಕೆ ದಾಖಲೆ ಮಾರಾಟವಾಗಿದೆ. ವಿಜಯಪುರ ಮೂಲದ ವಾಸೀಂ ಬಿಜಾಪುರ ಎಂಬುವವರು 4 ಅಡಿ ಎತ್ತರದ, 170 ಕೆಜಿ ತೂಕದ ಮೇಕೆಯನ್ನು ಖರೀದಿ ಮಾಡಿದ್ದಾರೆ.
11 ತಿಂಗಳ ಹಿಂದೆ ರೈತ ಶಿವಪ್ಪ ಶೆಂಡೂರೆ ಇದನ್ನು ಪಂಜಾಬ್ ನಿಂದ ₹ 62 ಸಾವಿರ ನೀಡಿ ಖರೀದಿ ಮಾಡಿ ತಂದಿದ್ದರು. ಪ್ರತಿ ದಿನ ಶೇಂಗಾದ ಹಿಂಡಿ, ಸದಕ, ಮೆಕ್ಕೆಜೋಳ ಮುಂತಾದ ಆಹಾರ ನೀಡಿ ಕುಸ್ತಿ ಪೈಲ್ವಾನನಂತೆ ಬೆಳೆಸಿದ್ದರು.
ದೊಡ್ಡ ದೇಹ, ಉದ್ದ ಕಿವಿ ಹಾಗೂ ಸಣ್ಣ ಮುಖ ಹೊಂದಿದ ಬೀಟಲ್ ತಳಿ ಮೇಕೆ ಮಾಂಸದ ತಳಿಯ ಮೇಕೆಯಾಗಿದೆ. ಜಮ್ನಾಪುರಿ, ಮಲಬಾರಿ ಮೇಕೆ ತಳಿ ಹೋಲುವ ಇದನ್ನು ಲಾಹೋರಿ ಮೇಕೆ ಎಂತಲೂ ಕರೆಯಲಾಗುತ್ತದೆ.
3 ಎಕರೆ ಜಮೀನು ಹೊಂದಿರುವ ರೈತ ಶಿವಪ್ಪ ಶೆಂಡೂರೆ ಜಮೀನಿನಲ್ಲಿ ಅದೆಷ್ಟೋ ಕೊಳವೆಬಾವಿ ಕೊರೆಯಿಸಿದರೂ ಸಮರ್ಪಕ ನೀರು ಇಲ್ಲವಂತೆ. ಹೀಗಾಗಿ 3 ಎಕರೆ ಕಬ್ಬು ಬೆಳೆದರೂ 35 ಟನ್ ಇಳುವರಿ ಬರುವುದೇ ಕಷ್ಟವಾಗಿದೆ. ಹೀಗಾಗಿ ಪ್ರತಿ ವರ್ಷವೂ ದುಬಾರಿ ತಳಿಯ ಮೇಕೆ ಮರಿಗಳನ್ನು ತಂದು ಸಾಕಿ ಮಾರಾಟ ಮಾಡಿ ಜೀವನದ ಬಂಡಿ ನಡೆಸುತ್ತಾರೆ.
10-12 ವರ್ಷಗಳಿಂದ ವಿವಿಧ ದುಬಾರಿ ತಳಿಯ ಮೇಕೆ ಮರಿಗಳನ್ನು ತಂದು ಸಾಕಿ ಬೆಳೆಸಿ ಮಾರಾಟ ಮಾಡುತ್ತಾರೆ. ಇದೀಗ ಇವರ ಬಳಿ 1 ವರ್ಷದ ಇನ್ನೊಂದು ಮೇಕೆ ಇದ್ದು, ಇದರೊಂದಿಗೆ ಪಂಜಾಬ್ ಗೆ ತೆರಳಿ ಮತ್ತೆರಡು ಮೇಕೆ ಮರಿಗಳನ್ನು ತಂದು ಸಾಕಲು ನಿರ್ಧರಿಸಿದ್ದಾಗಿ ರೈತ ಶಿವಪ್ಪ ಶೆಂಡೂರೆ ಪ್ರಜಾವಾಣಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.