ಮೂಡಲಗಿ: ‘ಮೀಸಲಾತಿ ಸಂಬಂಧ ಪಂಚಮಸಾಲಿ, ಕುರುಬ, ಉಪ್ಪಾರ ಮತ್ತು ಮಾದಿಗ ಸಮುದಾಯದವರು ಹೋರಾಟ ಮಾಡುತ್ತಿದ್ದು, ಈ ಸಮಾಜಗಳ ಮೀಸಲಾತಿ ಬೇಡಿಕೆ ಈಡೇರಿಕೆಗೆ ಸರ್ಕಾರದ ಮಟ್ಟದಲ್ಲಿ ನಾನು ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ’ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಪಟ್ಟಣದ ಬಸವ ಮಂಟಪದಲ್ಲಿ ಶನಿವಾರ ಕಿತ್ತೂರು ಚನ್ನಮ್ಮ ಯುವಕ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಪಂಚಮಸಾಲಿ ಸಮಾಜದವರ 2ಎ ಮೀಸಲಾತಿ ಹೋರಾಟಕ್ಕೆ ಎಲ್ಲ ರೀತಿಯ ಸಹಕಾರ ಹಾಗೂ ಬೆಂಬಲ ಇದೆ’ ಎಂದು ಸ್ಪಷ್ಟಪಡಿಸಿದರು.
‘ಉಪ್ಪಾರ ಹಾಗೂ ಕುರುಬ ಸಮಾಜದವರು ಸಹ ತಮ್ಮ ಸಮಾಜವನ್ನು ಪರಿಶಿಷ್ಟ ಜಾತಿ ಇಲ್ಲವೇ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಮಾದಿಗ ಸಮಾಜದವರು ನ್ಯಾ. ಸದಾಶಿವ ಆಯೋಗದ ಜಾರಿಗೆ ನಿರಂತರ ಹೋರಾಟ ಮಾಡುತ್ತಿದ್ದಾರೆ. ಈ ಸಮುದಾಯಗಳ ಹೋರಾಟಕ್ಕೆ ನಾನು ಸದಾ ಬೆನ್ನೆಲುಬಾಗಿ ನಿಲ್ಲುತ್ತೇನೆ’ ಎಂದರು.
‘ಈ ಸಮಾಜಗಳಿಗೆ ಮೀಸಲಾತಿ ನೀಡಿದರ ಬೇರೆ ಸಮಾಜಗಳಿಗೆ ಅನ್ಯಾಯವಾಗುವುದಿಲ್ಲ. ತಮಿಳುನಾಡಿನ ಮಾದರಿ ಅನುಸರಿಕೊಂಡು ಮೀಸಲಾತಿ ನೀಡಿದರೆ ಎಲ್ಲ ಸಮಾಜಗಳಿಗೆ ನ್ಯಾಯ ದೊರೆಯುತ್ತದೆ. ಎಲ್ಲ ನಾಯಕರನ್ನು ಪಕ್ಷಾತೀತವಾಗಿ ವಿಶ್ವಾಸಕ್ಕೆ ತೆಗೆದುಕೊಂಡು, ಮುಖ್ಯಮಂತ್ರಿ ಬಳಿ ನಿಯೋಗ ತೆಗೆದುಕೊಂಡು ಹೋಗೋಣ’ ಎಂದರು.
‘ಮೂಡಲಗಿ ತಾಲ್ಲೂಕು ಉಪನೋಂದಣಿ ಕಚೇರಿ ಈ ತಿಂಗಳ ಅಂತ್ಯದಲ್ಲಿ ಕಾರ್ಯಾರಂಭಗೊಳ್ಳಲಿದೆ. ಕಚೇರಿಗೆ ಅಗತ್ಯವಿರುವ ಎಲ್ಲ ಕಾರ್ಯಗಳು ಪೂರ್ಣಗೊಂಡಿವೆ’ ಎಂದರು.
ಸಿದ್ಧಸಂಸ್ಥಾನ ಮಠದ ಪೀಠಾಧಿಪತಿ ಅಮೃತಬೋಧ ಸ್ವಾಮೀಜಿ ಮಾತನಾಡಿದರು. ನಿರಂಜನ ಹಿರೇಮಠ ಅವರು ರಾಣಿ ಚನ್ನಮ್ಮನ ಹೋರಾಟ ಬಗ್ಗೆ ವಿವರಿಸಿದರು.
ನಾಗನೂರಿನ ಬಿ.ಆರ್. ಪಾಟೀಲ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಷ ಢವಳೇಶ್ವರ, ಬಸಗೌಡ ಪಾಟೀಲ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಡಿ.ಡಿ. ಪಾಟೀಲ, ಬಸವಪ್ರಭು ನಿಡಗುಂಡಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಆರ್.ಪಿ. ಸೋಲವಾಲ್ಕರ, ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಬಿಜೆಪಿ ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಬಸವರಾಜ ಪಾಟೀಲ, ಸುಭಾಷ ಪಾಟೀಲ, ಮಲ್ಲು ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.