ADVERTISEMENT

ಕಡಿಮೆ ಮೊತ್ತಕ್ಕೆ ತುಪ್ಪ ಪೂರೈಸಿರಲಿಲ್ಲ: ಕೆಎಂಎಫ್‌ ಮಾಜಿ ಅಧ್ಯಕ್ಷ ಬಾಲಚಂದ್ರ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2024, 20:04 IST
Last Updated 23 ಸೆಪ್ಟೆಂಬರ್ 2024, 20:04 IST
ಬಾಲಚಂದ್ರ ಜಾರಕಿಹೊಳಿ
ಬಾಲಚಂದ್ರ ಜಾರಕಿಹೊಳಿ   

ಬೆಳಗಾವಿ: ‘ನಾನು ಕೆಎಂಎಫ್‌ ಅಧ್ಯಕ್ಷನಿದ್ದಾಗ ತಿರುಮಲ ತಿರುಪತಿ ದೇವಸ್ಥಾನಕ್ಕೆ ಲಡ್ಡು ತಯಾರಿಸಲು ನಂದಿನಿ ತುಪ್ಪ ಕಳುಹಿಸಲಾಗುತ್ತಿತ್ತು. ನಾಲ್ಕು ವರ್ಷಗಳ ಹಿಂದೆ ದೇವಸ್ಥಾನದ ಆಡಳಿತ ಮಂಡಳಿ ಬದಲಾಯಿತು, ರಾಜಕೀಯ ಮುಖಂಡರೊಬ್ಬರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದರು. ಕಡಿಮೆ ಮೊತ್ತಕ್ಕೆ ತುಪ್ಪ ಪೂರೈಸುವಂತೆ ಆಡಳಿತ ಮಂಡಳಿ ಕೇಳಿಕೊಂಡಿತ್ತು. ನಮ್ಮದು ಗುಣಮಟ್ಟದ ತುಪ್ಪವಾಗಿದ್ದರಿಂದ ಪೂರೈಸಲಿಲ್ಲ. ಆಗ ತುಪ್ಪ ಖರೀದಿಸಲು ಟೆಂಡರ್‌ ವ್ಯವಸ್ಥೆ ಆರಂಭಿಸಿದರು. ಕಡಿಮೆ ಮೊತ್ತದಲ್ಲಿ ತುಪ್ಪ ಪೂರೈಸಲು ಖಾಸಗಿ ಏಜೆನ್ಸಿಯೊಂದು ಟೆಂಡರ್‌ ಪಡೆದಿತ್ತು’ ಎಂದು ಕೆಎಂಎಫ್‌ ಮಾಜಿ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಖಾಸಗಿ ಏಜೆನ್ಸಿ ದೇವಸ್ಥಾನಕ್ಕೆ ಪೂರೈಸಿದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಬೆರೆಸಲಾಗಿತ್ತೆಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಮಾಡಿದ ಆರೋಪವನ್ನು ಉಲ್ಲೇಖಿಸಿ ಮಾತನಾಡಿದ ಅವರು, ‘ನಾಯ್ಡು ಅವರ ಹೇಳಿಕೆ ದೇಶದಾದ್ಯಂತ ಸಂಚಲನ ಮೂಡಿಸಿದೆ. ತನಿಖೆ ಪ್ರಗತಿಯಲ್ಲಿದೆ’ ಎಂದರು.

‘ನಂದಿನಿ ತುಪ್ಪದಿಂದ ಲಡ್ಡು ತಯಾರಿಸಿದಾಗ, ಭಕ್ತರೂ ಸಂತಸ ವ್ಯಕ್ತಪಡಿಸಿದ್ದರು. ನಾಲ್ಕು ವರ್ಷಗಳ ನಂತರ ದೇವಸ್ಥಾನಕ್ಕೆ ಮತ್ತೆ ನಂದಿನಿ ತುಪ್ಪ ಪೂರೈಕೆ ಆರಂಭವಾಗಿದೆ. ದೇಶದಾದ್ಯಂತ ಜನರಿಂದ ಹಾಗೂ ದೇವಾಲಯಗಳಿಂದ ನಂದಿನಿ ತುಪ್ಪಕ್ಕೆ ಭಾರಿ ಬೇಡಿಕೆ ಬಂದಿದೆ. ಎಲ್ಲ ದೇವಾಲಯಗಳಲ್ಲಿ ‌ನಂದಿನಿ ತುಪ್ಪ ಬಳಸುವಂತೆ ಮನವಿ ಮಾಡುತ್ತೇನೆ’ ಎಂದು ತಿಳಿಸಿದರು.

ADVERTISEMENT

ತುಪ್ಪದ ಗುಣಮಟ್ಟ ಪರೀಕ್ಷೆಗೆ ಸರ್ಕಾರ ಆದೇಶಿಸಿರುವ ಕುರಿತು ಪ್ರತಿಕ್ರಿಯಿಸಿದ ಬಾಲಚಂದ್ರ, ‘ಸ್ಥಳೀಯ ಸಂಸ್ಥೆಗಳು ಇದನ್ನು ಮಾಡಬೇಕು. ಆದರೆ, ಅವು ಗಮನಹರಿಸುತ್ತಿಲ್ಲ. ತುಪ್ಪದ ಗುಣಮಟ್ಟ ಪರೀಕ್ಷೆಗಾಗಿ ಮತ್ತು ಕಲಬೆರಕೆ ತುಪ್ಪ ಪತ್ತೆಹಚ್ಚಲು ಕೆಎಂಎಫ್‌ನವರೇ ಒಂದು ತಂಡ ರಚಿಸಬೇಕು’ ಎಂದು ಕೋರಿದರು.

ಸಮಗ್ರ ತನಿಖೆಯಾಗಲಿ: ಶೆಟ್ಟರ್‌

‘ತಿರುಪತಿ ಪ್ರಸಾದ ಲಾಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಇರುವ ತುಪ್ಪ ಬಳಸುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು’ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಜಗನ್‌ಮೋಹನ್‌ರೆಡ್ಡಿ ಮತ್ತು ಅವರ ತಂದೆ ಮತಾಂತರಗೊಂಡ ಕ್ರಿಶ್ಚಿಯನ್ನರು. ಅವರಿಗೆ ಹಿಂದೂ ಧರ್ಮದ ಬಗ್ಗೆ ನಂಬಿಕೆ ವಿಶ್ವಾಸ ಇಲ್ಲ. ಹೀಗಾಗಿ ಹಿಂದೂಗಳ ನಂಬಿಕೆಯನ್ನು ಅಗೌರವದಿಂದ ಕಾಣುವ ಕೆಲಸವನ್ನು ಮೊದಲಿನಿಂದಲೂ ಮಾಡಿಕೊಂಡು ಬಂದಿ‌ದ್ದಾರೆ’ ಎಂದರು. ‘ತಿರುಮಲ  ತಿರುಪತಿ ದೇವಸ್ಥಾನ ಟ್ರಸ್ಟ್‌ಗೆ ಹಿಂದೂ ಧರ್ಮದಲ್ಲಿ ನಂಬಿಕೆ ಇಲ್ಲದವರನ್ನೇ ನೇಮಕ ಮಾಡಲಾಗಿದೆ. ಹೀಗಾಗಿಯೇ ಈ ಘಟನೆ ನಡೆದಿದೆ. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಜತೆಗೆ ಕೂಡಲೇ ಸನಾತನ ಧರ್ಮ ಪ್ರಾಧಿಕಾರ ರಚನೆಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.